ಕನ್ನಡಪ್ರಭ ವಾರ್ತೆ ಕೋಲಾರಯುವ ಪೀಳಿಗೆಗೆ ಭಜನೆ ಕೀರ್ತನೆ ಹರಿಕಥೆ ಮುಂತಾದ ಸಂಸ್ಕೃತಿ ಕಲೆಗಳನ್ನು ಕಲಿಸುವ ಕೇಂದ್ರವನ್ನು ಕೋಲಾರ ನಗರದಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ಮಾನವ ಅಭಿವೃದ್ಧಿ ಯೋಗ ಟ್ರಸ್ಟ್‌ನ ಡಾ.ಪೋಸ್ಟ್ ನಾರಾಯಣಸ್ವಾಮಿ ಭರವಸೆ ನೀಡಿದರು.ತಾಲೂಕಿನ ವೀರಾಪುರ ಗೇಟ್‌ನ ಶ್ರೀ ಯೋಗಿ ನಾರೇಯಣ ಸಾಂಸ್ಕೃತಿಕ ಕಲಾ ಭಜನಾ ಸಂಘದಲ್ಲಿ ಭಾನುವಾರ ಮಾನವ ಅಭಿವೃದ್ಧಿ ಯೋಗ ಟ್ರಸ್ಟ್, ಕನ್ನಡ ಸಿರಿ ಸಾಹಿತ್ಯ ಪರಿಷತ್, ಸ್ವರ್ಣಭೂಮಿ ಫೌಂಡೇಷನ್, ಜಿಲ್ಲಾ ದಾಸ ಸಾಹಿತ್ಯ ಪರಿಷತ್ ಹಾಗೂ ಅಕ್ಷರ ವಿಜಯ ಮಾಸ ಪತ್ರಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮುನಿಸ್ವಾಮಪ್ಪ ಭಾಗವತರ್‌ರ ೧೭ ನೇ ವಾರ್ಷಿಕ ಆರಾಧನಾ ಮಹೋತ್ಸವ, ಜಿಲ್ಲಾ ಮಟ್ಟದ ಭಜನಾ ಸಂಗೀತೋತ್ಸವ ಹಾಗೂ ಗುರು ಪೂಜಾ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಧ್ಯಾನ ಕೇಂದ್ರ ಸ್ಥಾಪನೆ
ಗ್ರಾಮೀಣ ಭಾಗದಲ್ಲಿ ಈಗಾಗಲೇ ಯುವ ಪೀಳಿಗೆಯನ್ನು ಭಜನೆ ಮತ್ತು ಕೀರ್ತನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದ್ದು, ನಗರ ಪ್ರದೇಶದ ಯುವಕ ಯುವತಿಯರಿಗೂ ಈ ಸೌಲಭ್ಯ ಕಲ್ಪಿಸಲು ಆರ್‌ಜಿ ಬಡಾವಣೆಯಲ್ಲಿ ಧ್ಯಾನ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ, ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ತರಬೇತಿ ಕಾರ್ಯವನ್ನು ಅಲ್ಲಿಯೇ ಆರಂಭಿಸಲಾಗುವುದು ಎಂದು ವಿವರಿಸಿದರು.ಭಜನಾ ಸ್ಪರ್ಧೆಯನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಮಾತನಾಡಿ, ಭಕ್ತಿ ಪಂಥದ ಮೂಲಕ ಆರಂಭವಾದ ಭಜನಾ ಹಾಗೂ ಕೀರ್ತನಾ ಪರಂಪರೆಯು ಕೈವಾರ ನಾರೇಯಣ ತಾತ ಹಾಗೂ ಇನ್ನಿತರ ತತ್ವಪದಕಾರರಿಂದಾಗಿ ಕೋಲಾರ ಜಿಲ್ಲೆಯ ಪ್ರತಿ ಗ್ರಾಮ ಹಾಗೂ ಮನೆಯನ್ನು ತಲುಪಿಸಿದೆ, ಇದೇ ಕಾರಣದಿಂದ ಕೋಲಾರ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಭಜನಾ ತಂಡಗಳಿವೆ, ಕಲಾವಿದರಿದ್ದಾರೆ ಎಂದರು.
ಭಜನಾ ಕಲಾವಿದರಗೆ ಸನ್ಮಾನಇದೇ ಸಂದರ್ಭದಲ್ಲಿ ಹಿರಿಯ ಭಜನಾ ಕಲಾವಿದರಾದ ಚೌಡಮ್ಮ, ಗಿರಿಜಮ್ಮ, ಜಯಮ್ಮ, ಶಿವಣ್ಣ, ಪವಿತ್ರ, ಟಿ.ನಾರಾಯಣಸ್ವಾಮಿ, ವೆಂಕಟೇಶಪ್ಪ, ಕಾಯಸ್ ವೆಂಕಟೇಶಪ್ಪ ಹಾಗೂ ಸಿ.ಡಿ.ಸರಸ್ವತಮ್ಮರನ್ನು ಸತ್ಕರಿಸಲಾಯಿತು.
ಕಸಾಪ ತಾಲೂಕು ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಾಯಣಪ್ಪ ಮಾತನಾಡಿದರು. ಜಿಲ್ಲೆಯಾದ್ಯಂತ ೨೦ ಕ್ಕೂ ಹೆಚ್ಚು ಭಜನಾ ತಂಡಗಳು ಮತ್ತು ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು.