ತುರ್ತು ಕಾರ್ಯಾಚರಣೆ ಕೇಂದ್ರ ಸ್ಥಾಪನೆ: ಡಿಸಿ ಲಕ್ಷ್ಮೀಪ್ರಿಯಾ

KannadaprabhaNewsNetwork | Published : Jul 16, 2024 12:35 AM

ಸಾರಾಂಶ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ, 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜು. 18ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 2x7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

ಸೋಮವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿನ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸಾರ್ವಜನಿಕರು ಮಳೆಯಿಂದಾಗಿ ಯಾವುದೇ ಅಪಾಯವಾದಲ್ಲಿ ಕೂಡಲೇ ಉಚಿತ ಸಹಾಯವಾಣಿ 1077 ಅಥವಾ ಮೊ. 9483511015 ಕರೆ, ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ನೀಡಿದಲ್ಲಿ ತಕ್ಷಣ ನೆರವಿಗೆ ಧಾವಿಸಲಾಗುವುದು ಎಂದರು.ಕಾರವಾರದ ನೌಕಾನೆಲೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಸಂಭವಿಸಿಸುವ ಕೃತಕ ನೆರೆ ಸೇರಿದಂತೆ ಎಲ್ಲ ರೀತಿಯ ಅನಾಹುತಗಳಿಗೆ ಸೂಕ್ತ ಪರಿಹರ ಒದಗಿಸುವ ಉದ್ದೇಶದಿಂದ ಕಾರವಾರ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯು ತಿಂಗಳಲ್ಲಿ ಕಡ್ಡಾಯವಾಗಿ ಕನಿಷ್ಠ ಒಮ್ಮೆ ಸಭೆ ಸೇರಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಮಾರ್ಗೊಪಾಯಗಳನ್ನು ಕಂಡುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ, 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದರು.

ತಗ್ಗು ಪ್ರದೇಶಗಳಲ್ಲಿ ಮತ್ತು ಗುಡ್ಡ ಕುಸಿಯಬಹುದಾದ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತರಾಗಿ ಕಾಳಜಿ ಕೇಂದ್ರಗಳಿಗೆ ಬಂದು ಆಶ್ರಯ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನೌಕಾನೆಲೆ ಬಳಿ ಸಂಭವಿಸಿರುವ ನೆರೆ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ನೀರು ಹರಿಯಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಮತ್ತು ನಿಂತಿರುವ ನೀರನ್ನು ಪಂಪ್ ಮಾಡುವ ಮೂಲಕ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ಕನಿಷ್ಕ ಉಪಸ್ಥಿತರಿದ್ದರು. ಮುಂದುವರಿದ ಮಳೆ ಅಬ್ಬರ: ರಸ್ತೆಗಳು ಜಲಮಯ

ಗೋಕರ್ಣ: ಈ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸೋಮವಾರ ಮುಂಜಾನೆಯಿಂದ ಮತ್ತಷ್ಟು ಹೆಚ್ಚಾಗಿದೆ. ಇಲ್ಲಿನ ಗಂಜಿಗೆದ್ದೆ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಹಣ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಇದರಂತೆ ಏಕಮುಖ ಸಂಚಾರ ವ್ಯವಸ್ಥೆಯಿಂದ ಹೊರ ಹೋಗುವ ಮಾರ್ಗದ ಮೀನು ಮಾರುಕಟ್ಟೆ ಬಳಿ ರಸ್ತೆಯಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.ರಥಬೀದಿ ಇತರ ಓಣಿಗಳ ರಸ್ತೆ ಜಲಮಯವಾಗಿದ್ದು, ಸ್ಥಳೀಯರು ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಮಳೆಗಾಲದ ಪೂರ್ವದಲ್ಲಿ ಚರಂಡಿ ಸ್ವಚ್ಛಗೊಳಿಸಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕೈಗೊಳ್ಳದಿರುವುದು, ಹಲವರು ಚರಂಡಿ ಅಕ್ರಮಿಸಿ ಕಟ್ಟಡ ಕಟ್ಟಿರುವುದು ಈ ಆವಾಂತರಕ್ಕೆ ಕಾರಣವಾಗಿದ್ದು, ನಿರ್ಲಕ್ಷ್ಯ ತೋರುತ್ತಿರುವ ಸಂಬಂಧಿಸಿದ ಇಲಾಖೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮೀಣ ಪ್ರದೇಶದ ಗಂಗಾವಳಿ ನಾಡು ಮಾಸ್ಕೇರಿ, ತದಡಿ ತೊರ್ಕೆ ಮಾದನಗೇರಿ, ಹಿರೇಗುತ್ತಿ ಪ್ರದೇಶದಲ್ಲಿ ರಸ್ತೆ ನೀರು ತುಂಬುವುದು ಮುತ್ತಿತರ ಸಣ್ಣಪುಟ್ಟ ಘಟನೆಗಳು ನಡೆದಿದೆ.

ತದಡಿ ಬೇಲೆಕಾನ ನಾಲ್ಕು ಮನೆಗಳಿಗೆ ನೀರು ನುಗ್ಗಿತ್ತು. ತಕ್ಷಣ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ನೀರು ಹರಿದು ಹೋಗುವಂತೆ ಮಾಡಿಕೊಟ್ಟಿದ್ದಾರೆ.

Share this article