ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ । ಕೈಗಾರಿಕೆ ಸ್ಥಾಪನೆ ಬಗ್ಗೆ ರಾಜಕೀಯ ಬೇಡ; ಮಂಡ್ಯಕ್ಕೇನು ಮಾಡಬೇಕೆಂದು ನನಗೆ ಗೊತ್ತು
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಈ ಬಗ್ಗೆ ಬೇರೆ ಯಾರ ಸರ್ಟಿಫಿಕೇಟ್ ಬೇಕಿಲ್ಲ. ಮಂಡ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರೀಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ (ಎಆರ್‌ಎಐ) ಸಂಸ್ಥೆ ಕೈಗಾರಿಕೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಇಲಾಖೆಯಿಂದಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಶುಕ್ರವಾರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಇದರಲ್ಲಿ ಅನವಶ್ಯಕ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಗಳು ಜಾಗ ಇಲ್ಲ ಎಂದು ಹೇಳಿದ್ದರು. ಶಾಸಕರಿಗೆ ಜಾಗ ಕೊಡುವ ಅಧಿಕಾರ ಇದೆಯೇ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಅಪರೂಪದ ಆಯಸ್ಕಾಂತ (ರೇರ್ ಅರ್ಥ್ ಮ್ಯಾಗ್ನೆಟಿಕ್) ಕಾರ್ಖಾನೆ ಸ್ಥಾಪಿಸಲು ಕರ್ನಾಟಕದವರೇ ಪ್ರಸ್ತಾವನೆ ಸಲ್ಲಿಸಿದ್ದರು. ಅವರು ನನ್ನಲ್ಲಿಗೆ ಬಂದಿದ್ದರು. ಮಂಡ್ಯದಲ್ಲಿ ಒಂದು ಕೈಗಾರಿಕೆ ಸ್ಥಾಪಿಸುವಂತೆ ಕೇಳಿದರೆ ಕರ್ನಾಟಕದಲ್ಲಿ ಬೇಡ ಅಂತಾರೆ. ಕರ್ನಾಟಕದ ಸರ್ಕಾರ ಬೆಂಬಲ ಕೊಡಲ್ಲ ಎಂದು ದೂರುತ್ತಾರೆ. ವಿಶಾಖಪಟ್ಟಣದಲ್ಲಿ ಜಾಗ ಕೊಡಿಸಿ ಎಂದು ಕೇಳುತ್ತಾರೆ ಎಂದು ಹೇಳಿದರು.
ಯಾರನ್ನು ಒದ್ದೋಡಿಸುತ್ತಾರೋ ನೋಡ್ತಿರಿ..!
ಕಾಂಗ್ರೆಸ್ ಬ್ರೋಕರ್ ಸರ್ಕಾರ:
ರೈತರು ಹೆಚ್ಚು ಬೆಳೆ ಬೆಳೆದಾಗ ಸರ್ಕಾರ ಖರೀದಿ ಕೇಂದ್ರ ತೆರೆಯುವುದಿಲ್ಲ. ಅಂಥ ಸಂದರ್ಭದಲ್ಲಿ ಬೆಲೆ ಕುಸಿತ ಆಗುತ್ತದೆ. ಖಾಸಗಿಯವರು ಬಂದು ಎಲ್ಲಾ ಬೆಳೆಯನ್ನು ಅಗ್ಗದ ಬೆಲೆಗೆ ಖರೀದಿಸಿದ ಮೇಲೆ ಖರೀದಿ ಕೇಂದ್ರಗಳನ್ನು ತೆರೆಯುತ್ತದೆ. ಆಗ ಈ ದಲ್ಲಾಳಿಗಳಿಗೆ ಹೆಚ್ಚಿನ ಬೆಲೆಗೆ ಆ ಬೆಳೆ ಮಾರುತ್ತಾರೆ. ಯಾವಾಗಲೂ ಹೀಗೆಯೇ ಅಗುತ್ತದೆ. ಹಾಗಾಗಿ ಇದೊಂದು ಬ್ರೋಕರ್ ಸರ್ಕಾರ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
---------------
ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿಯಲ್ಲಿ ನೂತನ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಕ್ಕಳು, ಗ್ರಾಮಸ್ಥರಿಗೆ ಹಸ್ತಲಾಘವ ನೀಡಿದರು.