ಕನ್ನಡಪ್ರಭ ವಾರ್ತೆ ಯಲ್ಲಾಪುರ
ದೇಶದಲ್ಲಿ ಕ್ರಾಂತಿಕಾರಿಗಳ ಬಲಿದಾನದಿಂದ ಪಡೆದ ಸ್ವಾತಂತ್ರ ಸಂಗ್ರಾಮದ ನಂತರ ಒಪ್ಪಂದದಂತೆ ಭಾರತ, ಪಾಕಿಸ್ತಾನ ವಿಭಜನೆಗೊಂಡವು. ಆದರೆ, ನೆಹರೂ ನೇತೃತ್ವದಲ್ಲಿ ರಚನೆಯಾದ ರಾಷ್ಟ್ರೀಯ ಸರ್ಕಾರದಿಂದ ಪಾಶ್ಚಾತ್ಯ ಮಾದರಿಯಲ್ಲಿ ಆಡಳಿತ ನಡೆಸುವ ಪ್ರಯತ್ನ ನಡೆಯಿತು ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಟರಮಣ ಬೆಳ್ಳಿ ಹೇಳಿದರು.ಶನಿವಾರ ತಿಲಕಚೌಕದ ಬೀಡಿಕರ್ ಕಟ್ಟಡದಲ್ಲಿ ಆರಂಭಗೊಂಡ ಬಿಜೆಪಿಯ ನೂತನ ಕಾರ್ಯಲಯದ ಶುಭಾರಂಭ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಶದಲ್ಲಿ ಪಾಶ್ಚಾತ್ಯ ಅನುಕರಣೆಯ ಆರಂಭವನ್ನು ಶ್ಯಾಮಪ್ರಸಾದ ಮುಖರ್ಜಿ ಸಹಿಸಲಿಲ್ಲ. ಪಾಕಿಸ್ತಾನ ಪ್ರತ್ಯೇಕಗೊಂಡರೂ ಮುಸ್ಲಿಮರನ್ನು ಮೊದಲ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸುವುದು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಆದರೆ, ನೆಹರೂ ಅವರ ನಿರ್ಣಯ ದೇಶದ ಹಿತ ಬಯಸದೇ ಸಾಗುತ್ತಿರುವುದನ್ನು ಗಮನಿಸಿ, ದೇಶದ ಅಸ್ಮಿತೆಯ ಪ್ರಶ್ನೆಯೇ ಮಹತ್ವದ್ದಾಗಿದೆ ಎಂಬುದನ್ನು ಮನಗಂಡ ಅವರು, ೧೯೫೧ರಲ್ಲಿ ಜನಸಂಘವನ್ನು ಸ್ಥಾಪಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರಕ್ಷಿಸಲು ಅವರು ಧ್ವನಿ ಎತ್ತಿದರು. ಭಾರತದ ಸಂವಿಧಾನದ ೩೭೦ನೇ ವಿಧಿಯ ಅಡಿಯಲ್ಲಿ ಈ ವಿಶೇಷ ಸ್ಥಾನವನ್ನು ನೀಡಲಾಗಿತ್ತು. ಸಾವಿರಾರು ಜನರ ಬಲಿದಾನ, ತ್ಯಾಗದ ಪರಿಣಾಮ ದೊರಕಿದ ಸ್ವತಂತ್ರ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಬದುಕುವುದೇ ದುಸ್ತರವೆನಿಸಿತ್ತು ಎಂದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮುಖರ್ಜಿಯವರ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ಜನಸಂಘ ಇಂದು ಬಿಜೆಪಿಯಾಗಿದೆ. ಈ ದೇಶದಲ್ಲಿ ಬಿಜೆಪಿ ಇನ್ನೂ ಸಾಕಷ್ಟು ಸದೃಢಗೊಳ್ಳಬೇಕಿದ್ದು, ಬೂತ್ ಮಟ್ಟದಿಂದ ಬಿಜೆಪಿಯ ಸಂಘಟನೆಯನ್ನು ನಾವು ಬಲಗೊಳಿಸುವ ತೀರ್ಮಾನವನ್ನು ಕೈಗೊಳ್ಳೋಣ ಎಂದರು.
ಪ್ರಮುಖರಾದ ಶ್ಯಾಮಿಲಿ ಪಾಟಣಕರ, ರೇಖಾ ಹೆಗಡೆ, ರಾಮಚಂದ್ರ ಚಿಕ್ಯಾನಮನೆ ಮಾತನಾಡಿದರು. ನಿಕಟ ಪೂರ್ವ ಮಂಡಲಾಧ್ಯಕ್ಷ ಜಿ.ಎನ್. ಗಾಂವ್ಕರ, ವಿಕೇಂದ್ರಿಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನಮಠ, ಪ್ರಶಿಕ್ಷಣ ಪ್ರಮುಖ ಗಣಪತಿ ಮಾನಿಗದ್ದೆ, ಸರಸ್ವತಿ ಪಟಗಾರ, ಗಣಪತಿ ಮುದ್ದೇಪಾಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ನಮೀತಾ ಬೀಡಿಕರ, ಎಸ್.ಟಿ. ಮೋರ್ಚಾ ಅಧ್ಯಕ್ಷ ಸುರೇಶ ಸಿದ್ದಿ, ಯುವ ಮೋರ್ಚಾ ಅಧ್ಯಕ್ಷ ರಜತ ಬದ್ದಿ, ಮೋರ್ಚಾ ಪ್ರ. ಕಾರ್ಯದರ್ಶಿ ರವಿ ದೇವಡಿಗ, ಅರ್ಜುನ ಬೆಂಗೇರಿ, ಪ್ರಭು ಚುಂಚಖಂಡಿ, ಸುನಂದಾ ಮರಾಠಿ, ನಿರ್ಮಲಾ ನಾಯ್ಕ, ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾ ಸದಸ್ಯ ಅಲನ ಬಾಬಾಸಾಬ, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ವಿನೋದ ತಳೇಕರ, ಸುನಿತಾ ವೆರ್ಣೇಕರ, ಹಿರಿಯ ಕಾರ್ಯಕರ್ತ ಗಜಾನನ ನಾಯ್ಕ, ಕಲ್ಪನಾ ನಾಯ್ಕ, ವಿಠ್ಠು ಶೆಲ್ಕೆ, ಮಹೇಶ ದೇಸಾಯಿ ಮತ್ತು ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ ಸ್ವಾಗತಿಸಿದರು. ನಟರಾಜ ಗೌಡರ ವಂದಿಸಿದರು.