ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಮ್ಮ ಪೂರ್ವಿಕರು, ಹಿರಿಯರು ಸಮಾಜ ಸರಿಯಾದ ಮಾರ್ಗದಲ್ಲಿ ನಡೆಯಲು ಅನುಸರಿಸಿಕೊಂಡು ಬಂದ ಸಂಪ್ರದಾಯ, ವಚನಗಳು, ಕಾವ್ಯಗಳ ರೂಪದಲ್ಲಿ ಪ್ರಸ್ತಾಪಿತ ನೈತಿಕ ಮೌಲ್ಯಗಳೇ ಕಾನೂನುಗಳು ಎಂದು ಚಿಕ್ಕಮಗಳೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.
ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರಾಜ್ಯಶಾಸ್ತ್ರ ವೇದಿಕೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಆಶ್ರಯದಲ್ಲಿ ಶನಿವಾರ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡದೆ ಎಲ್ಲಾ ವಯಸ್ಕರರಿಗೂ ಸಮಾನ ಮತದಾನದ ಹಕ್ಕನ್ನು ನೀಡಿದೆ.ಆದರೆ ಚುನಾವಣೆಯಲ್ಲಿ ಆಯ್ಕೆಯಾಗುವ ಬಹುತೇಕ ಅಭ್ಯರ್ಥಿಗಳನ್ನು ಪ್ರಾದೇಶಿಕತೆ, ಜಾತಿ, ಧರ್ಮ, ಹಣ, ಹೆಂಡದಂತಹ ಅಂಶಗಳಿಗೆ ಮಾರು ಹೋಗಿ ಪ್ರಾಮಾಣಿಕವಾಗಿ ಮತ ಚಲಾಯಿಸಿ ಆಯ್ಕೆ ಮಾಡದಿರುವ ಸ್ಥಿತಿಯಿರುವುದರಿಂದ ಇಂದು ಬಹುತೇಕರು ಕ್ರಿಮಿನಲ್ ಹಿನ್ನಲೆಯುಳ್ಳವರು ಆಯ್ಕೆಯಾಗುತ್ತಿರುವುದು ದುರಂತ ಎಂದರು.
ಸಂವಿಧಾನದಲ್ಲಿ ಜಾತ್ಯಾತೀತ ರಾಷ್ಟ್ರ, ಕಾನೂನು ಮುಂದೆ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಲ್ಪಟ್ಟಿದ್ದರೂ ವಾಸ್ತವವಾಗಿ ಸಮಾಜದಲ್ಲಿ ಜಾತಿ ಆಧಾರಿತ ವ್ಯವಸ್ಥೆಯಿದ್ದು ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆ ಮುಂದುವರಿದಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ವಿವಿಧ ರೀತಿ ದೌರ್ಜನ್ಯ ನಡೆಯುತ್ತಿದೆ. ಜಾತಿಗಳ ಆಧಾರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ತುಳಿತಕ್ಕೆ ಒಳಗಾದ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವು ಕಾನೂನು ಜಾರಿಗೆ ತರಲಾಗಿದೆ ಎಂದರು.ಪುರುಷ ಪ್ರಧಾನ ಭಾರತದಲ್ಲಿ ರಾಮಾಯಣ, ಮಹಾಭಾರತದ ಕಾಲದಿಂದಲೂ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದು ಇಂದಿಗೂ ಮುಂದುವರಿದಿರುವುದು ವಿಷಾದದ ಸಂಗತಿ. ಸಮಾಜದಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಸ್ಥಿತಿಯಿದೆ. ಗಂಡು ಮಗು ಬೇಕು ಎಂಬ ವ್ಯಾಮೋಹದಿಂದ ತಾಯಿ, ಹೆಂಡತಿ, ಅಕ್ಕ, ತಂಗಿಯಾಗಿರ ಬೇಕಾಗಿರುವ ಹೆಣ್ಣು ಮಗಳು ಇಂದು ಯಾರಿಗೂ ಬೇಡವಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ, ನೈತಿಕತೆ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ವಕೀಲ ಪೌಲ್ ಚೆರಿಯನ್ ಮಾಹಿತಿ ಹಕ್ಕು ಕಾಯ್ದೆ, ಜೀವನಾಂಶ ಕಾಯ್ದೆ, ಕನಿಷ್ಠ ಕೂಲಿ ಕಾಯ್ದೆ, ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಭಾರತ ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಮಾನವೀಯತೆ ಬೆಳೆಸಿಕೊಂಡು ಸಹಬಾಳ್ವೆಯಿಂದ ಬದುಕ ಬೇಕೆಂದು ಕರೆ ನೀಡಿದರು.ನರಸಿಂಹರಾಜಪುರ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ವಕೀಲರ ಸಂಘದ ಕಾರ್ಯದರ್ಶಿ ದೇವೇಂದ್ರ, ಹಿರಿಯ ಉಪನ್ಯಾಸಕ ನಾಗೇಶ್ ಗೌಡ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ನಾಯಕ್, ಕನ್ನಡ ವಿಭಾಗದ ಮುಖ್ಯಸ್ಥೆ ಬಿ.ಟಿ.ರೂಪ ಇದ್ದರು.