ಕನ್ನಡಪ್ರಭ ವಾರ್ತೆ ಮಣಿಪಾಲ
ಜಿಲ್ಲೆಯ ಕಾರ್ಮಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ತೆರೆಯುವುದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.ಅವರು ಬುಧವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ(ನಿ) ಸ್ಥಾಪನೆ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಹಕಾರ ಸಂಘ ಸ್ಥಾಪನೆಯಿಂದ ಕಾರ್ಮಿಕರು, ಹೊರ ಗುತ್ತಿಗೆದಾರರು ವಿವಿಧ ಆರ್ಥಿಕ ಲಾಭಗಳನ್ನು ಪಡೆಯಲು ಅನುಕೂಲವಾಗುವುದರ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಇವುಗಳ ಅಧೀನದಲ್ಲಿ ಬರುವ ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಸೇವೆಗಳನ್ನು ಒದಗಿಸಲು ಅನುಕೂಲವಾಗಲಿದೆ. ಹೊರಗುತ್ತಿಗೆದಾರರ ವೇತನ ಪಾವತಿ, ಇ.ಎಸ್.ಐ., ಪಿ.ಎಫ್. ಮುಂತಾದ ಶಾಸನಾತ್ಮಕ ಸೌಲಭ್ಯಗಳನ್ನು ನೌಕರರಿಗೆ ಸರಳವಾಗಿ ಒದಗಿಸಬಹುದಾಗಿದೆ ಎಂದರು.ರಾಜ್ಯದಲ್ಲಿ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಸಂಘಗಳನ್ನು ಸ್ಥಾಪಿಸಿ, ಸದರಿ ಸಂಘದ ಮೂಲಕ ಹೊರ ಗುತ್ತಿಗೆ ನೌಕರರನ್ನು ವಿವಿಧ ಇಲಾಖೆಗಳಿಗೆ ನಿಯೋಜಿಸಿದೆ ಹಾಗೂ ಅವರಿಗೆ ವೇತನ ಸೇರಿದಂತೆ ಮತ್ತಿತರ ಶಾಸನಾತ್ಮಕವಾಗಿ ನೀಡಬೇಕಾದ ಸೇವೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸರಳವಾಗಿ ನೀಡುವುದರೊಂದಿಗೆ ಯಶಸ್ವಿಯಾಗಿದೆ. ಇದನ್ನು ಈ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಬೇಕು ಎಂದರು.
ಸಂಘದ ಪ್ರಾರಂಭಕ್ಕೆ ಅಗತ್ಯವಿರುವ ಕಚೇರಿ, ಸಂಘದ ಬೈಲಾ, ಅಡ್ಹಾಕ್ ಸಮಿತಿ ಸೇರಿದಂತೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ಶೀಘ್ರದಲ್ಲಿಯೇ ಸಂಘ ಸ್ಥಾಪನೆಗೆ ಮುಂದಾಗಬೇಕು ಎಂದ ಅವರು, ಪ್ರಸ್ತುತ ಚಾಲ್ತಿಯಲಿರುವ ಬೇರೆ ಜಿಲ್ಲೆಗಳ ಕಾರ್ಮಿಕ ಇಲಾಖೆಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಜಿಲ್ಲೆಯ ತಂಡ ಭೇಟಿ ನೀಡಿ, ವೀಕ್ಷಿಸಿ ಮಾಹಿತಿ ಕಲೆ ಹಾಕಬೇಕು ಎಂದರು.ಜಿಲೆಯಲ್ಲಿ ವಿವಿಧ ಇಲಾಖೆಗಳಲ್ಲಿ 2080 ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಗುತ್ತಿಗೆ ಸಂಸ್ಥೆಗಳು ತಮಗೆ ಸರಿಯಾಗಿ ವೇತನ, ಪಿ.ಎಫ್ ಸೇರಿದಂತೆ ಮತ್ತಿತರ ಕಾನೂನಾತ್ಮಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅನೇಕ ಬಾರಿ ದೂರಿದ್ದಾರೆ. ಈ ರೀತಿಯ ವಿವಿಧೋದ್ದೇಶ ಸಂಘಗಳನ್ನು ಮಾಡಿಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ವಿವಿಧೋದ್ದೇಶ ಸಹಕಾರ ಸಂಘ ಪ್ರಾರಂಭ ಕುರಿತು ಈಗಾಗಲೇ ಜಿಲ್ಲೆಯ ಅನೇಕ ಸರ್ಕಾರಿ, ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಇದೇ ಡಿಸೆಂಬರ್ 12 ರಂದು ಸಭೆಯನ್ನು ಕರೆದು ಅವರೊಂದಿಗೆ ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ. ಪಿ. ಗಡದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಬಾಲ ಕಾರ್ಮಿಕ ಸಂಘದ ಯೋಜನಾಧಿಕಾರಿ ಅಮೃತ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ತಾಲೂಕು ತಹಸೀಲ್ದಾರ್ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.