ಡಿ.6 ರಿಂದ 8ರವರೆಗೆ ರಾಜ್ಯ ಮಟ್ಟದ ಫುಟ್ ಬಾಲ್ ಪಂದ್ಯಾವಳಿ: ಬಿ.ವೆಂಕಟ್

KannadaprabhaNewsNetwork | Published : Dec 5, 2024 12:34 AM

ಸಾರಾಂಶ

ಮಂಡ್ಯ ಜಿಲ್ಲಾ ಫುಟ್‌ಬಾಲ್ ಸಂಸ್ಥೆ- ಪೂರ್ವ ಹಾಗೂ ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 17 ವರ್ಷದೊಳಗಿನವರ ಫುಟ್‌ಬಾಲ್ ಪಂದ್ಯಾವಳಿಗಳು ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಡಿ.6,7 ಮತ್ತು 8 ರಂದು 17 ವರ್ಷದೊಳಗಿನವರ ರಾಜ್ಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಕೆಎಸ್‌ಎಫ್‌ಎ ಮಂಡ್ಯ ಜಿಲ್ಲಾ ಪ್ರತಿನಿಧಿ ಬಿ.ವೆಂಕಟ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಫುಟ್‌ಬಾಲ್ ಸಂಸ್ಥೆ- ಪೂರ್ವ ಹಾಗೂ ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 17 ವರ್ಷದೊಳಗಿನವರ ಫುಟ್‌ಬಾಲ್ ಪಂದ್ಯಾವಳಿಗಳು ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ನಡೆಯಲಿವೆ ಎಂದರು.

ಡಿ.6 ರಂದು ಬೆಳಗ್ಗೆ ವೇದಿಕೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವಿ.ಪ್ರಕಾಶ್ (ನಾಗೇಶ್) ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ.ಪ್ರಕಾಶ್, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್, ಮೈಷುಗರ್ ಪ್ರೌಢ ಶಾಲೆ ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಟಿ.ರಮೇಶ್, ಸದಸ್ಯ ರವಿಕುಮಾರ್ ಮನ್ನಳ್ಳಿ ಭಾಗವಹಿಸುವರು ಎಂದು ವಿವರಿಸಿದರು.

ಡಿ.8ರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಪೂರ್ವ ಅಧ್ಯಕ್ಷ ಎ.ನಾಗರಾಜು ಅಧ್ಯಕ್ಷತೆ ವಹಿಸುವರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಬಹುಮಾನ ವಿತರಿಸುವರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಮುಡಾ ಅಧ್ಯಕ್ಷ ನಯೀಮ್, ನುಡಿಭಾರತಿ ಬಸವೇಗೌಡ, ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ವಚನ್ ಉಪಸ್ಥಿತರಿರುವರು ಎಂದರು.

ಪಂದ್ಯಾವಳಿಯಲ್ಲಿ ಮಂಡ್ಯದ ಎರಡು ತಂಡಗಳು ಸೇರಿ ಬೆಂಗಳೂರು, ಹಾವೇರಿ, ಬಳ್ಳಾರಿ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೊಡಗು, ಮೈಸೂರು, ತುಮಕೂರು, ಹುಬ್ಬಳ್ಳಿ ಜಿಲ್ಲೆಗಳಿಂದ ತಲಾ ಒಂದರಂತೆ ಒಟ್ಟು12 ತಂಡಗಳು ಸೆಣೆಸಾಡಲಿವೆ ಎಂದರು.

ಪಂದ್ಯಾವಳಿಯು ಮೂರು ತಂಡಗಳನ್ನೊಳಗೊಂಡಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಡಿ.6ರಂದು 6 ಪಂದ್ಯಗಳು ಹಾಗೂ ಡಿ.7ರಂದು 6 ಪಂದ್ಯಗಳು ನಡೆಯಲಿವೆ. ಡಿ.8 ರಂದು ಸೆಮಿಫೈನಲ್, ಫೈನಲ್ ಹಾಗೂ ಮೂರನೇ ಸ್ಥಾನದ ಪಂದ್ಯ ಸೇರಿ 4 ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 20 ಸಾವಿರ ರು. ನಗದು, ದ್ವಿತೀಯ 10 ಸಾವಿರ ರು. ನಗದು, ತೃತೀಯ ಸ್ಥಾನಕ್ಕೆ 5 ಸಾವಿರ ರು. ನಗದು ಹಾಗೂ ಎಲ್ಲರಿಗೂ ಪಾರಿತೋಷಕ ಹಾಗೂ ನಾಲ್ಕನೇ ಸ್ಥಾನಕ್ಕೆ ಪಾರಿತೋಷಕ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ- ಪೂರ್ವದ ಅಧ್ಯಕ್ಷ ಎ.ನಾಗರಾಜು, ಉಪಾಧ್ಯಕ್ಷ ಟಿ.ವರಪ್ರಸಾದ್, ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಟಿ.ರಮೇಶ್, ಪಂದ್ಯಾವಳಿ ಕಾರ್ಯದರ್ಶಿ ದಾಸೇಗೌಡ, ಶಿವಕುಮಾರ್, ಮಿರ್ ಹನೀಫ್ ಇದ್ದರು.

Share this article