ಕನಕಪುರ: ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದ ಫಲವೇ ಇಂದು ಗ್ರಾಮೀಣ ಮಕ್ಕಳು ಶಿಕ್ಷಣ ಸಾಧ್ಯವಾಗಿದೆ. ಖಾಸಗಿ ಶಾಲೆಗಳಲ್ಲಿ ಸಿಗುವಂತೆ ಎಲ್ಲಾ ರೀತಿಯ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಎರಡು ಮೂರು ಪಂಚಾಯಿತಿ ವ್ಯಾಪ್ತಿಯ ಶಾಲೆಗಳನ್ನು ಸೇರಿಸಿ ಒಂದು ಪಬ್ಲಿಕ್ ಶಾಲೆಯಾಗಿ ರೂಪುಗೊಳಿಸಲಾಗುತ್ತಿದೆ. ಬಿಡದಿ ಬಳಿಯ ಟೊಯೋಟಾ ಕಿರ್ಲೋಸ್ಕರ್ ಕಂಪನಿ ಮೊದಲಿಗರಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದು ಸುಸಜ್ಜಿತ ಕಟ್ಟಡ ಹಾಗೂ ಆಧುನಿಕ ಶಿಕ್ಷಣ ಸೌಲಭ್ಯ ಒದಗಿಸಲು ಮುಂದಾಗಿದೆ ಎಂದು ಹೇಳಿದರು.
ಟೊಯೋಟಾ ಕಿರ್ಲೋಸ್ಕರ್ ಕಂಪನಿ ಉಪಾಧ್ಯಕ್ಷ ರಮೇಶ್ ಮಾತನಾಡಿ, ದೇಶದ ಭವಿಷ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಷ್ಟೇ ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಸರ್ಕಾರದ ಜೊತೆಗೂಡಿ ಕೆಲಸ ಮಾಡಲು ಸಿದ್ಧವಿದೆ. ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನ ಒದಗಿಸಲು ನಮ್ಮಕಂಪನಿ ತಯಾರಿದ್ದು ಗ್ರಾಮೀಣ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು,ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಟೊಯೋಟಾ ಕಂಪನಿ ವ್ಯವಸ್ಥಾಪಕ ಕಿರಣ್, ಪ್ರಶಾಂತ್, ತಾಪಂ ಇಒ ಅವಿನಾಶ್, ಮುಖಂಡರಾದ ಹೊಸಕೋಟೆ ಪುರುಷೋತ್ತಮ್, ರಾಯಸಂದ್ರ ರವಿ, ತುಂಗಣಿ ಪ್ರಕಾಶ್ ದಿಲೀಪ್, ಕಲ್ಲಹಳ್ಳಿ ಕುಮಾರ್, ಉಮೇಶ್ ಇತರರು ಉಪಸ್ಥಿತರಿದ್ದರು.
ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಟೊಯೋಟಾ ಕಂಪನಿಯಿಂದ ನಿರ್ಮಿಸುತ್ತಿರುವ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಗುದ್ದಲಿಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ಟೊಯೋಟಾ ಕಂಪನಿ ವ್ಯವಸ್ಥಾಪಕ ಕಿರಣ್, ಪ್ರಶಾಂತ್ ಇತರರಿದ್ದರು.