ಬೆಂಗಳೂರು:
ಎರಡು ದಿನಗಳ ಹಿಂದೆ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣದ ಸಂಬಂಧ ಮೃತನ ಪತ್ನಿ ಹಾಗೂ ಅತ್ತೆಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆರೆಗುಡ್ಡದಹಳ್ಳಿ ನಿವಾಸಿಗಳಾದ ಹೇಮಾಬಾಯಿ ಹಾಗೂ ಆಕೆಯ ಪುತ್ರಿ ಯಶಸ್ವಿನಿ ಬಂಧಿತರು. ಕಳೆದ ಶನಿವಾರ ಬಿಳಿಜಾಜಿಹಳ್ಳಿ ಸಮೀಪ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರಿನ ಲೋಕನಾಥ್ ಹತ್ಯೆಯಾಗಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ತಾಯಿ-ಮಗಳನ್ನು ಸೆರೆ ಹಿಡಿದ್ದಾರೆ. ತನಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಬೇಸತ್ತು ಪತಿಯನ್ನು ತಾಯಿ ಜತೆ ಸೇರಿ ಯಶಸ್ವಿನಿ ಹತ್ಯೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಹಸ್ಯ ಮದುವೆ ತಂದ ಆಪತ್ತು:ಹಲವು ದಿನಗಳಿಂದ ತನ್ನ ಸಂಬಂಧಿ ಯಶಸ್ವಿನಿಯನ್ನು ಲೋಕನಾಥ್ ಪ್ರೀತಿಸುತ್ತಿದ್ದು, ಈ ಪ್ರೀತಿ ವಿಚಾರ ಆಕೆಯ ಮನೆಗೆ ಗೊತ್ತಾಗಿ ವಿರೋಧ ವ್ಯಕ್ತವಾಗಿತ್ತು. ತಮ್ಮ ಮಗಳ ವಯಸ್ಸಿಗಿಂತ ಹಿರಿಯವನ ಜತೆ ಮದುವೆಗೆ ಯಶಸ್ವಿನಿ ಹೆತ್ತವರ ಆಕ್ಷೇಪವಿತ್ತು. ಯಶಸ್ವಿನಿ ಬಿಕಾಂ ಓದುತ್ತಿದ್ದಳು. ತನ್ನ ಕುಟುಂಬದ ವಿರೋಧದ ನಡುವೆಯೂ ಲೋಕನಾಥ್ ಜತೆ ಆಕೆ ಪ್ರೇಮ ಮುಂದುವರಿಸಿದ್ದಳು. ಕಳೆದ ಡಿಸೆಂಬರ್‌ನಲ್ಲಿ ಕುಣಿಗಲ್ ತಾಲೂಕಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತನ್ನ ಪ್ರಿಯತಮೆ ಜತೆ ರಹಸ್ಯವಾಗಿ ಆತ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದ. ಆದರೆ ಮೂರು ತಿಂಗಳು ಗೌಪ್ಯವಾಗಿದ್ದ ಮದುವೆ ಸಂಗತಿ ವಾರದ ಹಿಂದಷ್ಟೇ ಆತನ ಅತ್ತೆಗೆ ತಿಳಿಯಿತು ಎಂದು ಪೊಲೀಸರು ಹೇಳಿದ್ದಾರೆ.
ನಗರಕ್ಕೆ ಆಗಾಗ್ಗೆ ಬಂದು ಪತ್ನಿಯನ್ನು ಭೇಟಿಯಾಗಿ ಲೋಕನಾಥ್ ತೆರಳುತ್ತಿದ್ದ. ಮನೆಗೆ ಕರೆದೊಯ್ಯುವಂತೆ ಪತ್ನಿ ಗಲಾಟೆ ಮಾಡಿದಾಗ ಏನಾದರೂ ಸಬೂಬು ಹೇಳಿ ಹೋಗುತ್ತಿದ್ದ. ಆದರೆ ಮದುವೆ ಬಳಿಕ ಲೋಕನಾಥ್‌ನ ಪರಸ್ತ್ರೀ ಸಂಗ ಆತನ ಪತ್ನಿ ಯಶಸ್ವಿನಿಗೆ ತಿಳಿಯಿತು. ಇದಾದ ಬಳಿಕ ಪತಿ ನಡವಳಿಕೆ ಬಗ್ಗೆ ಆಕೆ ವಿರೋಧಿಸಿದ್ದಳು. ಆಗ ಪತ್ನಿ ಮೇಲೆ ಲೋಕನಾಥ್ ದೌರ್ಜನ್ಯ ನಡೆಸಿದ್ದಾಗಿ ಮೂಲಗಳು ಹೇಳಿವೆ.ಹತ್ಯೆಗೆ ಮುಹೂರ್ತ ನಿಗದಿ:
ಮಗಳನ್ನು ಗೌಪ್ಯವಾಗಿ ಮದುವೆಯಾಗಿ ಕಿರುಕುಳ ನೀಡುತ್ತಿರುವ ವಿಚಾರ ತಿಳಿದು ಅಳಿಯನ ಮೇಲೆ ಹೇಮಾ ಸಿಟ್ಟಾಗಿದ್ದರು. ಈ ಕೋಪದಲ್ಲೇ ಲೋಕನಾಥ್‌ನ ಹತ್ಯೆಗೆ ಸಂಚು ರೂಪಿಸಿದ್ದರು. ಅಂತೆಯೇ ತನ್ನ ಪತಿಗೆ ಶನಿವಾರ ಬೆಳಗ್ಗೆ ಕರೆ ಮಾಡಿ ಕೌಟುಂಬಿಕ ವಿಚಾರ ಮಾತನಾಡಲು ಭೇಟಿ ಮಾಡುವಂತೆ ಯಶಸ್ವಿನಿ ಆಹ್ವಾನಿಸಿದ್ದಳು. ಈ ಕರೆ ಮೇರೆಗೆ ಎಂದಿನಂತೆ ಚಿಕ್ಕಬಾಣವಾರ ಸಮೀಪ ಕಾರಿನಲ್ಲಿ ಪತ್ನಿಯನ್ನು ಕಾಣಲು ಆತ ಬಂದಿದ್ದಾನೆ. ಅಷ್ಟರಲ್ಲಿ ಪೂರ್ವಯೋಜಿತ ಸಂಚಿನಂತೆ ಮನೆಯಲ್ಲಿ ನಿದ್ರೆ ಮಾತ್ರೆ ಮಿಶ್ರಣ ಮಾಡಿ ಬಾಕ್ಸ್ ತುಂಬಿಕೊಂಡು ತಂದಿದ್ದ ಊಟವನ್ನು ಕಾರಿನಲ್ಲೇ ಪತಿಗೆ ಯಶಸ್ವಿನಿ ತಿನ್ನಿಸಿದ್ದಳು. ಅಷ್ಟರಲ್ಲಿ ಚಿಕ್ಕಬಾಣವಾರದಿಂದ ಅಳಿಯನ ಕಾರನ್ನು ಹಿಂಬಾಲಿಸಿಕೊಂಡು ಆಟೋದಲ್ಲಿ ಅತ್ತೆ ಹೇಮಾ ಸಹ ಬಂದಿದ್ದಳು. ಬಳಿಕ ಬಿಳಿಜಾಜಿಹಳ್ಳಿ ಸಮೀಪ ಕಾರಿನಲ್ಲಿ ಊಟ ಮಾಡಿದ ಬಳಿಕ ಲೋಕನಾಥ್ ನಿದ್ರೆಗೆ ಜಾರಿದ್ದಾನೆ. ಆಗ ಆತನ ಕುತ್ತಿಗೆಗೆ ಯಶಸ್ವಿನಿ ಚಾಕುವಿನಿಂದ ಇರಿದ್ದಾಳೆ. ಇದರಿಂದ ಎಚ್ಚರಗೊಂಡು ಪ್ರಾಣಭೀತಿಯಿಂದ ಕಾರಿನಿಂದಿಳಿದು ಆತ ಓಡಿ ಹೋಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ಸ್ಪಲ್ಪ ದೂರದಲ್ಲಿ ಕುಸಿದು ಬಿದ್ದು ಲೋಕನಾಥ್ ಪ್ರಾಣ ಬಿಟ್ಟಿದ್ದಾನೆ. ಈ ಕೃತ್ಯ ಎಸಗಿದ ಕೂಡಲೇ ತಾಯಿ-ಮಗಳು ಆತಂಕದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.ಮೊಬೈಲ್ ಕರೆ ನೀಡಿದ ಮಾಹಿತಿ:
ಈ ಹತ್ಯೆ ಕೃತ್ಯದ ತನಿಖೆಗಿಳಿದ ಪೊಲೀಸರು, ಮೃತನ ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ ಹಂತಕರ ಸುಳಿವು ಪತ್ತೆಯಾಗಿದೆ. ಕುದೂರಿನಿಂದ ಬೆಂಗಳೂರಿಗೆ ಹೊರಟಿದ್ದ ಲೋಕನಾಥ್‌ಗೆ ಯಶಸ್ವಿನಿಯಿಂದ ಕರೆಗಳು ಹೋಗಿದ್ದವು. ಈ ಸುಳಿವು ಆಧರಿಸಿ ಆಕೆಯನ್ನು ವಶಕ್ಕೆ ಪಡೆದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಾಕ್ಸ್..................
ಅಂದೇ ಬಾರದ ಗನ್ ಮ್ಯಾನ್ಪ್ರಾಣಭೀತಿಯಿಂದ ಸದಾ ಗನ್ ಮ್ಯಾನ್ ರಕ್ಷಣೆಯಲ್ಲೇ ಸಂಚರಿಸುತ್ತಿದ್ದ ಲೋಕನಾಥ್, ಹತ್ಯೆ ನಡೆದ ದಿನ ತನ್ನ ಪತ್ನಿ ಭೇಟಿಗೆ ಬಂದಾಗ ಗನ್ ಮ್ಯಾನ್‌ನನ್ನು ಕರೆತಂದಿರಲಿಲ್ಲ. ಬಹುಶಃ ಗನ್ ಮ್ಯಾನ್ ಇದ್ದರೆ ತಾಯಿ-ಮಗಳ ಸಂಚು ವಿಫಲವಾಗಿ ಆತನ ಪ್ರಾಣ ಉಳಿಯುತ್ತಿತ್ತೆನೋ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.