ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪಾರ: ಲೆ.ಜ. ಧೀರಜ್ ಸೇತ್

KannadaprabhaNewsNetwork | Published : Mar 25, 2025 12:50 AM

ಸಾರಾಂಶ

ಮಡಿಕೇರಿ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಿವೃತ್ತ ಸೈನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಬೃಹತ್ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇಶದ ಬೇರೆ ಯಾವ ಪ್ರದೇಶಗಳು ನೀಡದಂತಹ ಕೊಡುಗೆಯನ್ನು ಕೊಡಗು ಜಿಲ್ಲೆ ಭಾರತೀಯ ಸೇನೆಗೆ ನೀಡಿದೆ. ಕೊಡಗು ಕೇವಲ ಭೌಗೋಳಿಕ ಭೂಮಿಯಲ್ಲ, ಇಲ್ಲಿನ ಪೂರ್ವಿಕರ ವೀರ ಶೌರ್ಯ ಪರಂಪರೆಯಿಂದ ಜನ್ಮ ಪಡೆದ ನಾಡು ಎಂದು ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಬಣ್ಣಿಸಿದ್ದಾರೆ.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ನಿವೃತ್ತ ಸೈನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಮಹಾನ್ ಯೋಧರ ಪರಂಪರೆಗಳು ಜಿಲ್ಲೆಯಲ್ಲಿ ಇಂದಿಗೂ ಕಂಡು ಬರುತ್ತಿದೆ. ಕೊಡಗಿನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆಯ ಕರ್ತವ್ಯದಲ್ಲಿದ್ದರೆ ಸೇನೆಯ ಕ್ಷಮತೆಯೂ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಯುವ ಜನತೆ ಸೇನೆಗೆ ಭರ್ತಿಯಾಗುವ ಮೂಲಕ ಕೊಡಗಿನ ಸೈನಿಕ ಪರಂಪರೆಯನ್ನು ದೇಶದಲ್ಲಿಯೇ ಎತ್ತಿ ಹಿಡಿಯುವಂತಾಬೇಕು ಎಂದು ಆಶಿಸಿದರು.

ಭಾರತೀಯ ಭೂ ಸೇನೆ ಕಳೆದ ೧೩ ವರ್ಷಗಳಿಂದ ಜಿಲ್ಲೆಯಲ್ಲಿ ಮಾಜಿ ಸೈನಿಕರ ಕುಂದು ಕೊರೆತೆ ಸಭೆಗಳನ್ನು ಆಯೋಜಿಸುತ್ತಾ ಬರುತ್ತಿದೆ ಎಂದ ಅವರು ಭಾರತೀಯ ಭೂ ಸೇನೆ ತನ್ನ ನಿವೃತ್ತ ಯೋಧರು ಮತ್ತವರ ಅವಲಂಬಿತರ ಕುಂದು ಕೊರತೆಗಳ್ನು ಆಲಿಸಲು ದೇಶದಾದ್ಯಂತ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ. ಆ ಮೂಲಕ ಸೇನೆ ಮತ್ತು ನಿವೃತ್ತರ ನಡುವೆ ನಿರಂತರ ಸಂಪರ್ಕ ಬೆಳೆಸಿಕೊಳ್ಳುತ್ತಿದೆ. ದೈಹಿಕ ಕ್ಷಮತೆ ಹೊಂದಿರುವ ನಿವೃತ್ತ ಸೈನಿಕರ ಸೇವೆ ಸಮಾಜ ಮತ್ತು ದೇಶಕ್ಕೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲಾಭಿವೃದ್ಧಿ ಯೋಜನೆ ಜಾರಿಗೆ ತರುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ಈ ಯೋಜನೆಯಿಂದ ಸಮಾಜ ಮತ್ತು ದೇಶದ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದರು.

೩೭೬ ಸಮಸ್ಯೆಗೆ ಪರಿಹಾರ:

ಕೊಡಗಿನಲ್ಲಿ ನೆಲೆಸಿರುವ ಮಾಜಿ ಯೋಧರು, ವೀರನಾರಿಯರು, ಮಾಸಿಕ ಪಿಂಚಣಿ, ಸೇವೆ ಸಲ್ಲಿಸಿದ ದಾಖಲೆಗಳಲ್ಲಿನ ಲೋಪ ದೋಷ, ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಲು ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರಿಗೆ, ಅವರವರ ವಿಭಾಗದಲ್ಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆಯ ೮ ವಿಭಾಗಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ನಿವೃತ್ತ ಸೈನಿಕರು ಮತ್ತು ಅವರ ಅವಲಂಬಿತರಿಗೆ ಸೇವೆ ಒದಗಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೫೦೦ಕ್ಕೂ ಅಧಿಕ ನಿವೃತ್ತ ಯೋಧರು ಮತ್ತು ಅವರ ಅವಲಂಬಿತರು ಶಿಬಿರದ ಪ್ರಯೋಜನ ಪಡೆದರು. ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ಪ್ರಕರಣಗಳ ಪೈಕಿ ಸ್ಥಳದಲ್ಲೇ ೩೭೬ ಸಮಸ್ಯೆಗಳನ್ನು ಪರಿಹರಿಸಲಾಯಿತು.

ಸೌಲಭ್ಯ ಕಲ್ಪಿಸಲು ಕ್ರಮ:

ಲೆಫ್ಟಿನೆಂಟ್ ಜನರಲ್ ಕರಣ್ ಬೀರ್ ಸಿಂಗ್ ಬ್ರಾರ್ ಮಾತನಾಡಿ, ನಿವೃತ್ತ ಯೋಧರು ಮತ್ತವರ ಅವಲಂಬಿತರಿಗೆ ಇಸಿಎಚ್‌ಎಸ್ ಮೂಲಕ ಆರೋಗ್ಯ, ಸಿಎಸ್‌ಡಿ ಮೂಲಕ ಕ್ಯಾಂಟೀನ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜೊತೆಯಲ್ಲಿ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್, ಲೋಕತಂತ್ರ ದೃಷ್ಟಿ ಆಸ್ಪತ್ರೆ ಯೋಜನೆ ಜಾರಿಗೆ ದೆಹಲಿಯಲ್ಲಿರುವ ಸೇನಾ ಮುಖ್ಯ ಕಚೇರಿಗೆ ಶಿಫಾರಸು ಮಾಡಲಾಗಿದೆ. ಮಡಿಕೇರಿ ಮತ್ತು ವಿರಾಜಪೇಟೆ ಇಸಿಎಚ್‌ಎಸ್ ಆಸ್ಪತ್ರೆಗಳಲ್ಲಿ ಶೇ.೯೦ರಷ್ಟು ಅಗತ್ಯ ಔಷಧಗಳು ಲಭ್ಯವಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಇಸಿಎಚ್‌ಎಸ್ ಆಸ್ಪತ್ರೆಗೆ ತೆರಳುವ ನಿವೃತ್ತ ಯೋಧರು ಮತ್ತವರ ಅವಲಬಿತರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಮಡಿಕೇರಿ ನಗರದ ಎನ್‌ಸಿಸಿ ಜಾಗದಲ್ಲಿ ಇಸಿಎಚ್‌ಎಸ್ ಆಸ್ಪತ್ರೆಯ ಶಾಶತ್ವ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿರಾಜಪೇಟೆ ಇಸಿಎಚ್‌ಎಸ್ ಆಸ್ಪತ್ರೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದೆ. ‘ಸ್ಪರ್ಶ್’ ತಂತ್ರಾಂಶದ ಮೂಲಕ ಪಿಂಚಣಿ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತಿದ್ದು, ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಈ ತಂತ್ರಾಂಶ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಕರಣ್ ಬೀರ್ ಸಿಂಗ್ ಬ್ರಾರ್ ಮಾಹಿತಿ ನೀಡಿದರು. ಸಿಎಸ್‌ಡಿ ಕ್ಯಾಂಟೀನ್ ಸೌಲಭ್ಯ ವಿಸ್ತರಿಸುವ ಬೇಡಿಕೆ ಮತ್ತು ಅನಿವಾರ್ಯ ಜಿಲ್ಲೆಯಲ್ಲಿದೆ. ಅದಕ್ಕಾಗಿ ಸ್ಥಳೀಯಾಡಳಿತ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸೈನ್ಯ ಕೊಂಡಿ ಕಳಚದಿರಲಿ:

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಿಂದ ಭೂ ಸೇನೆಗೆ ಸೇರ್ಪಡೆಯಾಗುವ ಯುವ ಪೀಳಿಗೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಇತರೇ ವಲಯಗಳಲ್ಲಿ ಸುಲಭವಾಗಿ ಸಿಗುವ ಉದ್ಯೋಗ ಕಾರಣವಾಗಿರಬಹುದು ಎಂದು ಲೆಫ್ಟಿನೆಂಟ್ ಜನರಲ್ ಕರಣ್ ಬೀರ್ ಸಿಂಗ್ ಬ್ರಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೈನಿಕ ಕ್ಷಾತ್ರ ಪರಂಪರೆ ಹೊಂದಿರುವ ಕೊಡಗು ಜಿಲ್ಲೆಯ ಯುವ ಜನತೆ ಯಾವುದೇ ಕಾರಣಕ್ಕೂ ಸೈನ್ಯದೊಂದಿಗಿನ ಕೊಂಡಿಯನ್ನು ಕಳಚಿಕೊಳ್ಳಬಾರದು. ಸೈನಿಕ ಪರಂಪರೆಯಿಂದ ಯುವ ಸಮೂಹ ದೂರವಾದಲ್ಲಿ ತಪ್ಪು ಹಾದಿ ತುಳಿಯುವ ಸಾಧ್ಯತೆಯೂ ಇದೆ ಎಂದು ಕಳವಳ ವ್ಯಕ್ತಪಡಿಸಿದ ಬ್ರಾರ್, ಈ ನಿಟ್ಟಿನಲ್ಲಿ ನಿವೃತ್ತ ಸೈನಿಕರು ಯುವ ಪೀಳಿಗೆಯನ್ನು ಸೈನ್ಯಕ್ಕೆ ಸೇರ್ಪಡೆ ಮಾಡಲು ಪ್ರೇರಣೆ ನೀಡಬೇಕು ಎಂದು ಹೇಳಿದರು.

ಸೇನಾ ಪದಕದ ಗೌರವ:

ಸೇನಾ ನಿವೃತ್ತಿಯ ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ತೋರಿದ ೫ ಮಂದಿಗೆ ಸೇನಾ ಗೌರವದ ಪದಕ ನೀಡಿ ಗೌರವಿಸಲಾಯಿತು. ಪರಿಸರ ರಕ್ಷಣೆಗಾಗಿ ಕರ್ನಲ್ ಸಿ.ಪಿ. ಮುತ್ತಣ್ಣ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಗೆ ಶ್ರಮ ವಹಿಸಿದ ಮೇಜರ್ ಬಿ.ಎ. ನಂಜಪ್ಪ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಮೇಲ್ವಿಚಾರಕ ಸುಬೇದಾರ್ ಮೇಜರ್ ಜಿ.ಕೆ. ತಿಮ್ಮಯ್ಯ, ಕೊಡಗು ಬಾಕ್ಸಿಂಗ್ ಅಸೋಷಿಯೇಶನ್ ಸ್ಥಾಪನೆಗಾಗಿ ಹವಾಲ್ದಾರ್ ಬಿ.ಕೆ. ಮೇದಪ್ಪ ಅವರ ಪರವಾಗಿ ಅವರ ಪತ್ನಿ ರಾಣಿ ಮೇದಪ್ಪ, ಕೌಶಲ್ಯ ವಿಕಸನ ಶಿಬಿರ ಆಯೋಜನೆಗಾಗಿ ಡ್ರಾಫ್ಟ್ಮೆನ್ ಎಂ.ಕೆ. ಪೊನ್ನಪ್ಪ ಅವರು ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಅವರಿಂದ ಗೌರವ ಪದಕ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕೇರಳ-ಸಬ್ ಏರಿಯಾದ ಮೇಜರ್ ಜನರಲ್ ಮ್ಯಾಥ್ಯು ಎವಿಎಸ್‌ಎಂ, ವೈಎಸ್‌ಎಂ, ವಿವಿಧ ರ‍್ಯಾಂಕ್‌ಗಳ ಸೇನಾಧಿಕಾರಿಗಳು, ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ, ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಮುಖರಾದ ಮೇಜರ್ ಓ.ಎಸ್. ಚಿಂಗಪ್ಪ, ಪ್ರಮುಖರಾದ ಸುಬೇದಾರ್ ಮೇಜರ್ ವಾಸಪ್ಪ ಅಗರಿಮನೆ, ಹವಾಲ್ದಾರ್ ಕುಟ್ಟಂಡ ನಂದಾ ಮಾದಪ್ಪ, ಹವಾಲ್ದಾರ್ ಮಾದೆಯಂಡ ನಾಚಪ್ಪ, ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ, ಹವಾಲ್ದಾರ್ ಕೂಪದಿರ ಮುತ್ತಣ್ಣ ಮತ್ತಿತರರು ಉಪಸ್ಥಿತರಿದ್ದರು. ---------------------ಭಾರತೀಯ ಭೂ ಸೇನೆ ನಿವೃತ್ತ ಯೋಧರು ಮತ್ತವರ ಅವಲಂಬಿತರ ಕುಂದುಕೊರತೆ ಶಿಬಿರ ಆಯೋಜನೆ ಮಾಡುತ್ತಾ ಬಂದಿರುವುದು ಉತ್ತಮ ಬೆಳವಣಿಗೆ. ಇದರಿಂದ ನಿವೃತ್ತ ಯೋಧರ ಸಮಸ್ಯೆಗಳಿಗೆ ಸ್ಪಂದನೆ ದೊರೆತಿದೆ. ಅದರಂತೆ ಜಿಲ್ಲೆಯಲ್ಲಿ ನೌಕಾಪಡೆ, ವಾಯುಪಡೆಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದಾರೆ. ಒಂದೇ ವೇದಿಕೆ ಅಡಿಯಲ್ಲಿ ಅವರ ಕುಂದುಕೊರತೆಗಳನ್ನು ಆಲಿಸುವ ಶಿಬಿರವನ್ನೂ ಕೊಡಗು ಜಿಲ್ಲೆಯಲ್ಲಿ ಆಯೋಜಿಸುವಂತಾಗಬೇಕು.

। ನಂದಾ ಕಾರ್ಯಪ್ಪ, ಏರ್ ಮಾರ್ಷಲ್-----------------

ಮುಂದಿನ ದಿನಗಳಲ್ಲಿ ಒಂದೇ ವೇದಿಕೆ ಅಡಿಯಲ್ಲಿ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಅಧಿಕಾರಿಗಳನ್ನು ಒಳಗೊಂಡ ೩ ಸೇನೆಗಳಿಗೆ ಸಂಬಂಧಿಸಿದ ನಿವೃತ್ತ ಯೋಧರ ಕುಂದು ಕೊರೆತಗಳನ್ನು ಆಲಿಸಲು ಶಿಬಿರ ನಡೆಸಲಾಗುತ್ತದೆ. ಈ ಕುರಿತು ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಯೋಜನೆ ರೂಪಿಸಲಾಗುತ್ತದೆ. ಅದು ತಮ್ಮ ಗುರಿಯೂ ಆಗಿದೆ.

। ಧೀರಜ್ ಸೇತ್, ಲೆಫ್ಟಿನೆಂಟ್ ಜನರಲ್

Share this article