ರಾಜ್ಯದಲ್ಲಿ 100 ವರ್ಷಗಳ ಹಿಂದೆ ಇಥೆನಾಲ್ ಉತ್ಪಾದನೆ: ಮುರುಗೇಶ ನಿರಾಣಿ

KannadaprabhaNewsNetwork |  
Published : Nov 12, 2026, 02:45 AM IST
ಫೋಟೊ11ಬಿಕೆಟಿ3, ಮಾಜಿ ಸಚಿವ ಮುರುಗೇಶ ನಿರಾಣಿ ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು,) | Kannada Prabha

ಸಾರಾಂಶ

ಇಥೆನಾಲ್ ಉತ್ಪಾದನೆ ಮತ್ತು ಬಳಕೆ ಹೊಸ ತಂತ್ರಜ್ಞಾನವಲ್ಲ. ಸುಮಾರು ನೂರು ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಇಥೆನಾಲ್ ಉತ್ಪಾದನೆಗೆ ಚಾಲನೆ ನೀಡಲಾಗಿತ್ತು. ವಾಹನಗಳ ಎಂಜಿನ್ ವಿನ್ಯಾಸಕ್ಕೆ ಅನುಗುಣವಾಗಿ ಇಂಧನ ಮಿಶ್ರಣದ ಪ್ರಮಾಣ ನಿರ್ಧರಿಸಲಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಥೆನಾಲ್ ಉತ್ಪಾದನೆ ಮತ್ತು ಬಳಕೆ ಹೊಸ ತಂತ್ರಜ್ಞಾನವಲ್ಲ. ಸುಮಾರು ನೂರು ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಇಥೆನಾಲ್ ಉತ್ಪಾದನೆಗೆ ಚಾಲನೆ ನೀಡಲಾಗಿತ್ತು. ವಾಹನಗಳ ಎಂಜಿನ್ ವಿನ್ಯಾಸಕ್ಕೆ ಅನುಗುಣವಾಗಿ ಇಂಧನ ಮಿಶ್ರಣದ ಪ್ರಮಾಣ ನಿರ್ಧರಿಸಲಾಗುತ್ತದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುತ್ತಿದೆ ಹಾಗೂ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪಕ್ಕೆ ಅವರು ತಿರುಗೇಟು ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ದಿನಕ್ಕೆ 30 ಸಾವಿರ ಲೀಟರ್ ಇಥೆನಾಲ್ ಉತ್ಪಾದಿಸುವ ಕಾರ್ಖಾನೆ ಸ್ಥಾಪಿಸಲಾಗಿತ್ತು. ಆಗ ಪೆಟ್ರೋಲ್ ಚಾಲಿತ ಬಸ್‌ಗಳ ಬಳಕೆ ಸೀಮಿತವಾಗಿದ್ದ ಕಾರಣ, ಮುಂಬೈನಲ್ಲಿ ಇಂಧನ ಮಿಶ್ರಣ ಮಾಡಿ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ಈ ಪ್ರಯತ್ನ ಮುಂದುವರಿಯಲಿಲ್ಲ ಎಂದು ತಿಳಿಸಿದರು.

ಬ್ರೆಜಿಲ್ ದೇಶ ಸುಮಾರು 80 ವರ್ಷಗಳಿಂದ ಇಥೆನಾಲ್ ಬಳಕೆ ಅಳವಡಿಸಿಕೊಂಡಿದೆ. ಅಲ್ಲಿ ಪೆಟ್ರೋಲ್, ಡೀಸೆಲ್ ಜೊತೆಗೆ ಇಥೆನಾಲ್ ಆಧಾರಿತ ವಾಹನಗಳೂ ಬಳಕೆಯಲ್ಲಿವೆ. ಇಥೆನಾಲ್ ಮಿಶ್ರಣದ ವಿವಿಧ ಪ್ರಮಾಣಗಳಿಗೆ ಅನುಗುಣವಾಗಿ ವಾಹನಗಳ ಎಂಜಿನ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇ10 ಎಂದರೆ ಶೇ.10 ಇಥೆನಾಲ್ ಮತ್ತು ಶೇ.90 ಪೆಟ್ರೋಲ್, ಇ 20 ಎಂದರೆ ಶೇ.20 ಇಥೆನಾಲ್ ಹಾಗೂ ಶೇ.80 ಪೆಟ್ರೋಲ್. ಇದೇ ರೀತಿ ಇ30ನಲ್ಲಿ ಶೇ.30 ಇಥೆನಾಲ್ ಮತ್ತು ಶೇ.70 ಪೆಟ್ರೋಲ್ ಇರುತ್ತದೆ. ಇ- 85 ಮಾದರಿಯಲ್ಲಿ ಶೇ.85 ಇಥೆನಾಲ್ ಹಾಗೂ ಶೇ.15 ಪೆಟ್ರೋಲ್ ಬಳಸಲಾಗುತ್ತದೆ. ಇಂತಹ ಇಂಧನ ಬಳಕೆಗೆ ಅನುಕೂಲವಾಗುವ ವಾಹನಗಳನ್ನು ಕೆಲವು ಕಂಪನಿಗಳು ಪರಿಚಯಿಸಿವೆ. ಇ 100 ಮಾದರಿಯನ್ನೂ ಪರಿಚಯಿಸಲಾಗಿದೆ ಎಂದು ಹೇಳಿದರು.

ಬೇಡಿಕೆಗಿಂತ ಉತ್ಪಾದನೆ ಹೆಚ್ಚು:

ದೇಶದಲ್ಲಿ ಇಥೆನಾಲ್ ಉತ್ಪಾದನೆ ಮತ್ತು ಬಳಕೆ ಅಂಕಿ-ಅಂಶ ಉಲ್ಲೇಖಿಸಿದ ನಿರಾಣಿ, ವರ್ಷಕ್ಕೆ ಸುಮಾರು 2,200 ಕೋಟಿ ಲೀಟರ್ ಇಥೆನಾಲ್ ಉತ್ಪಾದನೆಯಾಗುತ್ತಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳ ಬಳಕೆ ಸುಮಾರು 1,200 ಕೋಟಿ ಲೀಟರ್ ಇದೆ. ರಿಲಯನ್ಸ್, ಎಸ್ಸಾರ್ ಮತ್ತು ನಯರಾ ಸೇರಿ ಇತರೆ ಖಾಸಗಿ ಕಂಪನಿಗಳ ಬಳಕೆ ಸುಮಾರು 200ರಿಂದ 250 ಕೋಟಿ ಲೀಟರ್ ಇದೆ. ಹೀಗಾಗಿ ದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ಪರಿಗಣಿಸಿದರೆ ಉತ್ಪಾದನೆ ಹೆಚ್ಚಾಗಿದೆ ಎಂದು ವಿವರಿಸಿದರು.

ಇಥೆನಾಲ್ ಉತ್ಪಾದನೆಗೆ ಕಬ್ಬು, ಮೊಲಾಸಿಸ್, ಅಕ್ಕಿ, ಮೆಕ್ಕೆಜೋಳ ಸೇರಿ ವಿವಿಧ ಆಹಾರ ಧಾನ್ಯ ಬಳಸಬಹುದು. ಕೃಷಿ ತ್ಯಾಜ್ಯ, ಕಬ್ಬಿನ ಸಿಪ್ಪೆ ಹಾಗೂ ಇತರೆ ಜೈವಿಕ ಅವಶೇಷಗಳಿಂದಲೂ ಇಥೆನಾಲ್ ಉತ್ಪಾದಿಸುವ ಸಾಧ್ಯತೆ ಇದೆ. ಕಬ್ಬು, ಮೆಕ್ಕೆಜೋಳ ಮತ್ತು ಆಹಾರ ಧಾನ್ಯಗಳಿಂದ ಉತ್ಪಾದಿಸುವ ಇಥೆನಾಲ್ ಅನ್ನು ಮೊದಲನೇ ತಲೆಮಾರಿನ (1ಉ) ಇಥೆನಾಲ್ ಎಂದು ಕರೆಯಲಾಗುತ್ತದೆ. ಕಬ್ಬಿನ ಸಿಪ್ಪೆ ಹಾಗೂ ಕೃಷಿ ತ್ಯಾಜ್ಯಗಳಿಂದ ಉತ್ಪಾದಿಸುವುದನ್ನು ಎರಡನೇ ತಲೆಮಾರಿನ (2ಉ) ಇಥೆನಾಲ್ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಮೂರನೇ ತಲೆಮಾರಿನ ಇಥೆನಾಲ್ ಉತ್ಪಾದನೆ ಕುರಿತೂ ಪ್ರಯತ್ನಗಳು ನಡೆ0ುುತ್ತಿವೆ ಎಂದು ತಿಳಿಸಿದರು.

ಡೀಸೆಲ್‌ನಲ್ಲಿ ಇಥೆನಾಲ್ ಮಿಶ್ರಣಕ್ಕೆ ಸಂಶೋಧನೆ:

ಇಥೆನಾಲ್ ಅನ್ನು ಪ್ರಸ್ತುತ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣ ಮಾಡಲಾಗುತ್ತಿದೆ. ಡೀಸೆಲ್‌ನಲ್ಲಿ ನೇರವಾಗಿ ಇಥೆನಾಲ್ ಮಿಶ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಮತ್ತು ಇಥೆನಾಲ್ ನಡುವಿನ ಹೊಂದಾಣಿಕೆಗೆ ಹೋಲಿಸಿದರೆ ಡೀಸೆಲ್ ಮತ್ತು ಇಥೆನಾಲ್‌ನ ಗುಣಲಕ್ಷಣಗಳು ಹಾಗೂ ಸಾಂಧ್ರತೆಯ ವ್ಯತ್ಯಾಸವಿದೆ. ಹೀಗಾಗಿ ಎರಡೂ ಪ್ರತ್ಯೇಕವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ದೇಶದಲ್ಲಿ ಡೀಸೆಲ್ ಬಳಕೆ ಪೆಟ್ರೋಲ್‌ಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಿದೆ. ಹೀಗಾಗಿ ಹೆಚ್ಚುವರಿ ಇಥೆನಾಲ್ ಅನ್ನು ಡೀಸೆಲ್ ಬಳಕೆಯಲ್ಲೂ ಬಳಸುವ ಉದ್ದೇಶದಿಂದ ಸಂಶೋಧನೆ ನಡೆಯುತ್ತಿದೆ. ಇದಕ್ಕಾಗಿ ಐಸೊಬ್ಯುಟನಾಲ್‌ನಂತಹ ಪರ್ಯಾಯ ಇಂಧನಗಳ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ. ಅಮೆರಿಕದಲ್ಲಿ ಈ ಸಂಬಂಧ ಪ್ರಯೋಗಗಳು ನಡೆದಿವೆ. ಆದರೆ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಇಂತಹ ಇಂಧನಗಳ ಬೆಲೆ ಸಾಮಾನ್ಯ ಡೀಸೆಲ್‌ಗಿಂತ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಡೀಸೆಲ್ ಲೀಟರ್‌ಗೆ ₹80ರಿಂದ ₹90ರ ಆಸುಪಾಸಿನಲ್ಲಿದ್ದರೆ, ಪರ್ಯಾಯ ಇಂಧನದ ವೆಚ್ಚ ₹120ರವರೆಗೆ ತಲುಪುವ ಸಾಧ್ಯತೆ ಇದೆ. ಬ್ಲೆಂಡಿಂಗ್ ಏಜೆಂಟ್‌ಗಳ ಬಳಕೆಯ ವೆಚ್ಚ ಹೆಚ್ಚಿಸುತ್ತದೆ. ಈ ಕುರಿತು ಸಂಶೋಧನೆ ಮುಂದುವರಿದಿದ್ದು, ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಡೀಸೆಲ್‌ನಲ್ಲಿಯೂ ಮಿಶ್ರಣಕ್ಕೆ ಅವಕಾಶಗಳು ರೂಪುಗೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಥೆನಾಲ್ ಮಿಶ್ರಿತ ಇಂಧನ ಕುರಿತು ಚರ್ಚಿಸುವಾಗ ವಾಹನಗಳ ಎಂಜಿನ್ ವಿನ್ಯಾಸ, ಇಂಧನದ ಗುಣಮಟ್ಟ, ಮಿಶ್ರಣದ ಪ್ರಮಾಣ ಹಾಗೂ ದೇಶದ ಕೃಷಿ ಉತ್ಪಾದನೆಯ ಪರಿಸ್ಥಿತಿ ಸಮಗ್ರವಾಗಿ ಪರಿಗಣಿಸಬೇಕು ಎಂದು ಮುರುಗೇಶ ನಿರಾಣಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾರಾಯಣಸಾ ಭಾಂಡಗೆ, ಹೂವಪ್ಪ ರಾಠೋಡ, ಚಂದ್ರಕಾಂತ ಕೇಸನೂರ, ರಮೇಶ ಮೋರಟಗಿ, ಉಮೇಶ ಮೇಟಿ, ಶ್ರೀಶೈಲ ಗೌರಿ ಉಪಸ್ಥಿತರಿದ್ದರು.

ಇ85, ಇ100 ವಾಹನಗಳಿಗೆ ಮನವಿ : ದೇಶದಲ್ಲಿ ಇಥೆನಾಲ್ ಉತ್ಪಾದನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇ85 ಮತ್ತು ಇ100 ಮಾದರಿ ವಾಹನಗಳನ್ನು ಪರಿಚಯಿಸುವಂತೆ ಇಥೆನಾಲ್ ಉತ್ಪಾದಕರ ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬ್ರೆಜಿಲ್‌ನಲ್ಲಿ ಈಗಾಗಲೇ ಇಂತಹ ವಾಹನಗಳು ಬಳಕೆಯಲ್ಲಿವೆ. ಈ ಮನವಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ದೇಶದಲ್ಲಿ ಇಥೆನಾಲ್ ಬಳಕೆಗೆ ಅನುಗುಣವಾಗಿ ವಾಹನಗಳ ಲಭ್ಯತೆಯೂ ಹೆಚ್ಚಾಗಬೇಕು ಎಂದು ಹೇಳಿದರು.

ಕಬ್ಬು ಉತ್ಪಾದನೆಯಲ್ಲಿ ಏರಿಳಿತದ ಆತಂಕ : ಮಳೆ ಕೊರತೆಯಿಂದ ಕಬ್ಬು ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವರ್ಷ ಕಬ್ಬಿನ ಉತ್ಪಾದನೆ ಸುಮಾರು ಶೇ.30ರಷ್ಟು ಕಡಿಮೆಯಾಗುವ ಅಂದಾಜಿದೆ. ಮುಂದಿನ ವರ್ಷಗಳಲ್ಲಿ ಬರಗಾಲ ಪರಿಣಾಮ ಇನ್ನಷ್ಟು ಹೆಚ್ಚಾಗಿ 2026-27 ಮತ್ತು 2027-28ನೇ ಸಾಲಿನಲ್ಲಿ ಕಬ್ಬಿನ ಉತ್ಪಾದನೆ ಶೇ.50ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ. ಉತ್ತಮ ಮಳೆಯಾದ ನಂತರ ರೈತರು ಕಬ್ಬು ಬೆಳೆಯಲು ಮುಂದಾಗುವುದರಿಂದ 2028-29ರ ವೇಳೆಗೆ ಉತ್ಪಾದನೆ ಮತ್ತೆ ಹೆಚ್ಚಾಗಬಹುದು. ಕಬ್ಬು ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಯುತ್ತಾರೆ. ಕಳೆದ ಹಲವು ದಶಕಗಳ ಬೆಳೆ ಮಾದರಿ ಗಮನಿಸಿದರೆ ಕೆಲವು ವರ್ಷ ಉತ್ಪಾದನೆ ಹೆಚ್ಚಾಗುತ್ತದೆ, ಮತ್ತೆ ಕೆಲವು ವರ್ಷ ಕಡಿಮೆಯಾಗುತ್ತದೆ. ಇದು ಬೆಳೆಗಳ ಸ್ವಾಭಾವಿಕ ಏರಿಳಿತದ ಭಾಗವಾಗಿದೆ ಎಂದು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌