ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾವರ್ದಕ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರವು ಆಯೋಜಿಸಿದ್ದ 2025- 26ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ಕಾಣಬೇಕು ಹಾಗೂ ಜೀವನವನ್ನು ಆ ಕನಸುಗಳನ್ನು ಸಾಕಾರಗೊಳಿಸುವ ಪಯಣವನ್ನಾಗಿ ಮಾಡಿಕೊಳ್ಳಬೇಕು. ಕನಸುಗಳನ್ನು ಸಾಕಾರಗೊಳಿಸಲು ಬದುಕಿ, ಬದುಕುವುದಕ್ಕೆ ಮಾತ್ರ ಬದುಕಬೇಡಿ ಎಂದು ಕಿವಿಮಾತು ಹೇಳಿದರು.
ಕಾಲ ಕಡಿಮೆ ಆದರೆ ಜೀವನ ಅತ್ಯಮೂಲ್ಯ. ಆದ್ದರಿಂದ ಕನಸುಗಳಿಗೆ ಕೇಂದ್ರೀಕರಿಸಿ, ನೈತಿಕತೆಯೊಂದಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಗಳಿಸಿ. ಜೀವನದಲ್ಲಿ ಕೇವಲ ಯೋಜನೆ ಸಾಕಾಗುವುದಿಲ್ಲ, ಅದನ್ನು ಸುಂದರವಾಗಿ ಅನುಷ್ಠಾನಗೊಳಿಸಬೇಕು. ಮೌಲ್ಯಗಳು ಮೌಲ್ಯವಸ್ತುಗಳಿಗಿಂತ ಶ್ರೇಷ್ಠ ಎಂದರು.ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ನಿರ್ಧರಿಸಿ, ಜ್ಞಾನ ಮತ್ತು ಕೌಶಲ್ಯಗಳನ್ನು, ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಭವಿಷ್ಯದಲ್ಲಿ ವಾಣಿಜ್ಯ ಪದವೀಧರರು ವಿಶ್ವವನ್ನು ಆಳಲಿದ್ದಾರೆ. ವಾಣಿಜ್ಯ ವಿದ್ಯಾರ್ಥಿಗಳು ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಪ್ರಾಮಾಣಿಕತೆ ಮತ್ತು ಸಮಯಪಾಲನೆಯ ಮೂಲಕ ಯಶಸ್ವಿ ವೃತ್ತಿಜೀವನ ಕಟ್ಟಿಕೊಳ್ಳುವಂತೆ ಶುಭ ಹಾರೈಸಿದರು.
ನಾಳೆ ವಿದ್ಯಾವರ್ಧಕ ಕಾಲೇಜಿನಲ್ಲಿ ಕಲಾ ಸಂಭ್ರಮ
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.27 ರಂದು 2025- 26ನೇ ಶೈಕ್ಷಣಿಕ ಸಾಲಿನ ಕಲಾ ಸಂಭ್ರಮ 2025- 26 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ ಹಾಗೂ ಜನಪದಗೀತೆ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಚರ್ಚಾ ಸ್ಪರ್ಧೆಯ ವಿಷಯ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗದೇ ರಾಜಕೀಯದ ಕೈಗವಸುಗಳಾಗಿವೆ ಎಂಬುದಾಗಿದೆ. ಸ್ಪರ್ಧೆಯು ಉದ್ಘಾಟನಾ ಸಮಾರಂಭ ಮುಗಿದ ನಂತರ ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಸ್ಪರ್ಧೆಯಲ್ಲಿ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾಥಿಗಳು ಭಾಗವಹಿಸಬಹುದಾಗಿದ್ದು, ಒಬ್ಬರು ಪರ ಹಾಗೂ ಒಬ್ಬರು ವಿರೋಧವಾಗಿ ವಿಷಯವನ್ನು ಮಂಡಿಸಲು ವೇದಿಕೆಯನ್ನು ಒದಗಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಮೊ. 94818 33305, 70197 35580, 63610 89195 ಸಂಪರ್ಕಿಸಬಹುದಾಗಿದೆ. ಸ್ಪರ್ಧೆಗಳಿಗೆ ಸೆ.27ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಸ್ಥಳ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಾಂಸುಪಾಲ ಡಾ.ಎಸ್. ಮರೀಗೌಡ ತಿಳಿಸಿದ್ದಾರೆ.