ಸಾಹಿತ್ಯದ ಅನುಭವ ದಕ್ಕಿಸಿಕೊಳ್ಳಲು ಓದುವ ಪ್ರೀತಿ ಇರಬೇಕು: ಡಾ.ಸಿ.ಜಿ.ಉಷಾದೇವಿ

KannadaprabhaNewsNetwork |  
Published : Sep 26, 2025, 01:00 AM IST
6 | Kannada Prabha

ಸಾರಾಂಶ

ಪುಸ್ತಕ ಹಸ್ತಭೂಷಣವಾಗಿರಬೇಕು. ತನ್ನ ಸೃಜನಶೀಲತೆಯ ಮೂಲಕ ಪುಸ್ತಕ ಪ್ರೀತಿ ಬೆಳೆಸುವಂತಿರಬೇಕು. ಕಲ್ಪನಾವಿಲಾಸ ಗರಿಗೆದರಬೇಕು. ವ್ಯವಸ್ಥಿತವಾಗಿ ಕಟ್ಟಿಕೊಡಬೇಕು. ಈ ರೀತಿಯ ಸಾಹಿತ್ಯ ಓದುವುದರಿಂದ ಭಾವಕೋಶಕ್ಕೂ ಸಂತೋಷವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯದ ಅನುಭವ ದಕ್ಕಿಸಿಕೊಳ್ಳಬೇಕಾದರೆ ಓದುವ ಪ್ರೀತಿ ಇರಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಹೇಳಿದರು.

ಉಷಾ ಸಾಹಿತ್ಯ ಮಾಲೆ ಹಾಗೂ ಸಂವಹನ ಪ್ರಕಾಶನವು ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಎಚ್‌.ಎಸ್‌.ರುದ್ರೇಶ್‌ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಕೃತಿ ಕುರಿತು ಮಾತನಾಡಿದ ಅವರು. ಆಗ ಮಾತ್ರ ಒಂದು ಒಳ್ಳೆಯ ಸಾಹಿತ್ಯ ಕೃತಿ ಕಲಾತ್ಮಕವಾಗಿ ವಿಶಿಷ್ಟ ಅನುಭವ ಕೊಡುತ್ತದೆ ಎಂದರು.

ಪುಸ್ತಕ ಹಸ್ತಭೂಷಣವಾಗಿರಬೇಕು. ತನ್ನ ಸೃಜನಶೀಲತೆಯ ಮೂಲಕ ಪುಸ್ತಕ ಪ್ರೀತಿ ಬೆಳೆಸುವಂತಿರಬೇಕು. ಕಲ್ಪನಾವಿಲಾಸ ಗರಿಗೆದರಬೇಕು. ವ್ಯವಸ್ಥಿತವಾಗಿ ಕಟ್ಟಿಕೊಡಬೇಕು. ಈ ರೀತಿಯ ಸಾಹಿತ್ಯ ಓದುವುದರಿಂದ ಭಾವಕೋಶಕ್ಕೂ ಸಂತೋಷವಾಗುತ್ತದೆ ಎಂದರು.

ಕಾದಂಬರಿ ಕೂಡ ಒಂದು ಕಲಾಮಾಧ್ಯಮ. ಅಲ್ಲಿ ಲೇಖಕನ ದೃಷ್ಟಿಕೋನ, ವೈಚಾರಿಕ ನಿಲುವು, ಭಾಷೆಯ ಬಳಕೆ ಗೊತ್ತಾಗುತ್ತದೆ. ಡಾ.ಎಚ್.ಎಸ್. ರುದ್ರೇಶ್‌ ಅವರ ಕಾದಂಬರಿಯಲ್ಲಿ ಸೂಕ್ಷ್ಮಸಂವೇದನಾಶೀಲತೆ ಇದೆ. ಉತ್ತಮವಾದ ಭಾಷಾ ಕೌಶಲ್ಯ ಇದೆ. ಜೊತೆಗೆ ಬರೆವಣಿಗೆ ಶೈಲಿಯೂ ಚೆನ್ನಾಗಿದೆ ಎಂದು ಅವರು ಶ್ಲಾಘಿಸಿದರು.

ಪ್ರತಿಯೊಂದು ಮನೆಯಲ್ಲಿಯೂ ಪುಸ್ತಕ ಮನೆ ಇರಬೇಕು. ಕೌಟುಂಬಿಕ ಪ್ರೀತಿ ಬೆಳೆಯಬೇಕು. ಕೌಟುಂಬಿಕ ಪ್ರೀತಿಯೇ ಈ ಕಾದಂಬರಿಯ ಸಂದೇಶವಾಗಿದೆ ಎಂದರು.

‘ಆರಾಧನೆ’ ಕಾದಂಬರಿ ಕುರಿತು ಜೆಎಸ್ಎಸ್‌ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರಮೂರ್ತಿ ದೇವನೂರು ಮಾತನಾಡಿ, ಸಾಹಿತ್ಯ ಜೀವನದ ಪ್ರತಿಬಿಂಬ. ಕೃತಕ ಬುದ್ಧಿಮತ್ತೆಯಿಂದಾಗಿ ಸಾಹಿತ್ಯ ಮತ್ತು ಓದುಗರ ನಡುವೆ ಗೋಡೆ ನಿರ್ಮಾಣವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಲೇಖಕ ತನ್ನ ದಟ್ಟ ಅನುಭವವನ್ನು ದಾಖಲಿಸಬೇಕು. ಕಥೆಗೆ ಹಿನ್ನಲೆ ಮುಖ್ಯ ಎಂದು ಅರಿಯಬೇಕು ಎಂದರು.

ಬದುಕು ಸರಳ ರೇಖೆ ಅಲ್ಲ. ಸಹಬಾಳ್ವೆ ಮುಖ್ಯ. ಜೀವನಕ್ಕಾಗಲಿ, ಕಾದಂಬರಿಗಾಗಲಿ ಅನುಭವ ಮುಖ್ಯವಾಗುತ್ತದೆ. ಭಾವ- ಅನುಭಾವದ ಮೂಲಕ, ಸ್ಪಂದನೆಯ ಮೂಲಕ ಓದುಗರನ್ನು ತಲುಪಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ ಮಾತನಾಡಿ, ಕಾದಂಬರಿ ಪ್ರಕಾರ ಬೆಳೆಯಲು ಇಂಗ್ಲಿಷ್‌ ಮೂಲಪ್ರೇರಣೆ ಎಂದರು.

ಅಮೆರಿಕಾದವರಿಗಿಂತ ಭಾರತೀಯ ಕಾದಂಬರಿಕಾರರು ಇಂಗ್ಲಿಷ್‌ನಲ್ಲಿ ಅತ್ಯುತ್ತವಾಗಿ ಬರೆದಿದ್ದಾರೆ. ಅದೇ ರೀತಿ ಡಾ.ರುದ್ರೇಶ್‌ ಅವರ ಕಾದಂಬರಿಯಲ್ಲಿ ಶೈಲಿ,. ಸೂಕ್ಷ್ಮಗ್ರಹಿಕೆ, ಅಧ್ಯಯನ ಚೆನ್ನಾಗಿದೆ. ಇಂತಹ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾದಲ್ಲಿ ಹಾಗೂ ಪೆಂಗ್ವಿನ್‌ ಅಂಥ ಪ್ರಕಾಶನದ ಮೂಲಕ ಪ್ರಕಟವಾದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಬಹುದು ಎಂದರು.

ಮಹೇಂದ್ರ ಮಣಿ ಪ್ರಾರ್ಥಿಸಿದರು. ಕಾದಂಬರಿಕಾರ ಡಾ.ಎಚ್.ಎಸ್. ರುದ್ರೇಶ್‌ ಸ್ವಾಗತಿಸಿದರು. ಪ್ರಕಾಶಕ ಡಿ.ಎನ್‌. ಲೋಕಪ್ಪ ವಂದಿಸಿದರು. ಸಾಹಿತಿ ಜೀನಹಳ್ಳಿ ಸಿದ್ದಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಬುಧವಾರ ನಿಧನರಾದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ