ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದ ಬಳಿ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಎತ್ತಿನಹೊಳೆ ತೆರೆದ ಚಾನೆಲ್‌ಗೆ ನಿರ್ಮಿಸಬೇಕಿದ್ದ ಸೇತುವೆ ಬೇರೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಲ್ಲಿನ ನೂರಾರು ರೈತರು ಕಾಮಗಾರಿಯನ್ನ ನಿಲ್ಲಿಸಿ ಎತ್ತಿನಹೊಳೆ ಬಳಸಲಾಗುವ ಟ್ಯ್ರಾಕ್ಟರ್, ಜೆಸಿಬಿ, ಹಿಟಾಚಿ ಸೇರಿದಂತೆ ಲಾರಿಗಳನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ನಿಯೋಜಿತ ಸ್ಥಳದಲ್ಲಿಯೇ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಎತ್ತಿನಹೊಳೆ ಕಾಮಗಾರಿ ಓಪನ್ ಚಾನೆಲ್ ( ತೆರೆದ ಕಾಲುವೆ) ಕಾಮಗಾರಿಯಿಂದ ರೈತಾಪಿ ವರ್ಗ ಚಾನೆಲ್ ದಾಟಲು ಸಾಧ್ಯವಿಲ್ಲದ ಕಾರಣ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅನುಕೂಲವಾಗುವ ಸ್ಥಳಗಳಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆಯಲ್ಲಿ ಅವಕಾಶ ಕಲ್ಪಿಸಿಕೊಂಡಿದ್ದು, ಈಗ ಅಲ್ಲಿನ ಗುತ್ತಿಗೆದಾರ ನಿಗದಿತ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡದೆ 100 ಮೀಟರ್ ನಂತರ ಸೇತುವೆ ಗೆ ಗುತ್ತಿಗೆದಾರ ಅವಕಾಶ ಮಾಡಿಕೊಂಡಿರುವುದು ರೈತರಿಗೆ ಅಡಚಣೆ ಆಗುತ್ತಿರುವುದು ಕಾರಣ ಇಲ್ಲಿನ ನೂರಾರು ರೈತರು ಕಾಮಗಾರಿಯನ್ನು ನಿಗದಿತ ಸ್ಥಳದಲ್ಲಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.ಪ್ರತಿಭಟನ ನಿರತ ರೈತರ ಒತ್ತಾಯ ಈ ಮಾರ್ಗದಲ್ಲಿ ಶ್ರೀ ಮುನೇಶ್ವರ ದೇವಸ್ಥಾನವಿದೆ, ನೂರಾರು ರೈತರು ಈ ಮಾರ್ಗದಲ್ಲಿ ಇರುವಂತ ಭೂಮಿಯಲ್ಲಿ ಹೂ, ತರಕಾರಿ ಬೆಳೆಯುವುದೇ ಹೆಚ್ಚಾಗಿರುವುದರಿಂದ ಇಲ್ಲಿನ ರೈತರು ಮಾರುಕಟ್ಟೆಗೆ ಸಾಗಿಸಲು ನಿಗದಿತ ಸ್ಥಳದಲ್ಲಿ ಸೇತುವೆ ನಿರ್ಮಾಣಗೊಳಿಸದಿದ್ದರೆ, ಒಂದು ಕಿಲೋಮೀಟರ್ ಸುತ್ತಿಕೊಂಡು ಮತ್ತೆ ಇದೇ ರಸ್ತೆಗೆ ಬರುವುದರಿಂದ ರೈತರಿಗೆ ತುಂಬಾ ಅನಾನುಕೂಲವಾಗಲಿದೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ರೈತರಿಗೆ ತುಂಬಾ ಅನುಕೂಲವಾಗಲಿದೆ ಆದ್ದರಿಂದ ದಯಮಾಡಿ ನಿಗದಿತ ಸ್ಥಳದಲ್ಲಿಯೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.