ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಿ-ಡಾ. ವಿಶಾಲ್‌

KannadaprabhaNewsNetwork |  
Published : Jul 23, 2024, 12:34 AM IST
೨೨ಎಚ್‌ವಿಆರ್೩ | Kannada Prabha

ಸಾರಾಂಶ

ಸತತ ಮಳೆಯಿಂದ ಮಣ್ಣಿನ ಹಾಗೂ ತಾಡಪಲ್ ಮನೆಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಇಂತಹ ಮನೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.

ಹಾವೇರಿ: ಸತತ ಮಳೆಯಿಂದ ಮಣ್ಣಿನ ಹಾಗೂ ತಾಡಪಲ್ ಮನೆಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಇಂತಹ ಮನೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್. ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಂದಾಯ, ವಿಪತ್ತು ನಿರ್ವಹಣೆ, ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯಕ್ರಮಗಳು, ಕುಡಿಯುವ ನೀರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.ಮನೆಗಳಿಗೆ ಹಾನಿ ಸಂಭವಿಸಿದ ಕುಟುಂದವರನ್ನು ಅವರ ಸಂಬಂಧಿಕರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಅವರಿಗೆ ೧೦ ದಿನಗಳಿಗೆ ಆಗುವಷ್ಟು ಅಕ್ಕಿ, ಬೇಳೆ ಸೇರಿದಂತೆ ಒಳ್ಳೆಯ ಆಹಾರ ಕಿಟ್ ನೀಡಿ, ಜೊತೆಗೆ ಚಾದರ ಹಾಗೂ ಜಮಖಾನ್ ನೀಡಬೇಕು. ಅವರು ಅಡುಗೆ ಮಾಡಲು ಗ್ಯಾಸ್ ಬಳಸುತ್ತಿದ್ದರೆ ಹೆಚ್ಚುವರಿ ಗ್ಯಾಸ್ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಮನೆಗಳು ಬಿದ್ದ ತಕ್ಷಣ ಪಂಚನಾಮೆ ಮಾಡಿ ಫೋಟೋ ತೆಗೆದು ವರದಿ ತಯಾರಿಸಿಕೊಟ್ಟುಕೊಳ್ಳಬೇಕು. ಅವಘಡ ಸಂಭವಿಸಿದಾಗ ಫಲಾನುಭವಿಗಳಿಗೆ ಪರಿಹಾರ ನೀಡುವ ಜೊತೆಗೆ ಅವರಿಗೆ ಆತ್ಮಸ್ಥೆರ್ಯ ತುಂಬಬೇಕು. ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಪ್ರಾಮಾಣಿಕ ಕೆಲಸಮಾಡಬೇಕು. ಗ್ರಾಮೀಣ ಭಾಗದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿರಬೇಕು. ತಾ.ಪಂ. ಕಾರ್ಯದರ್ಶಿಗಳು ಹಾಗೂ ತಹಸೀಲ್ದಾರಗಳು ಜಾಗೃತರಾಗಿರಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 273 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೭೩ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಎರಡು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, ೨೬೭ ಮನೆಗಳು ಭಾಗಶಃ ಹಾನಿಯಾಗಿದೆ. ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬದ ವಾರಸುದಾರರಿಗೆ ತಲಾ ರು.೫ ಲಕ್ಷದಂತೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು ೧೨ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಇರುತ್ತದೆ. ನದಿ ಪ್ರವಾಹದಿಂದ ಮುಳುಗಡೆಯಾದ ಸೇತುವೆಗಳ ಮೇಲೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬ್ಯಾರಿಕೇಡಗಳನ್ನು ಹಾಕಿ ಸಾರ್ವಜನಿಕರು ಓಡಾಡದಂತೆ ಕ್ರಮವಹಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿ ನದಿ ಪಾತ್ರಕ್ಕೆ ಹೋಗದಂತೆ ಡಂಗುರದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಾಗೂ ಭೂಕುಸಿತ ಸಂಭವನೀಯ ೬೨ ಗ್ರಾಮ ಪಂಚಾಯಿತಿಗಳ ೧೧೦ ಗ್ರಾಮಗಳನ್ನು ಗುರುತಿಸಲಾಗಿದ್ದು, ೧೧೦ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ೬೨ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ಜೂ.೧ರಿಂದ ಜು.೨೧ರವರೆಗೆ ೪೫ ರೈತರ ೩೧ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು ರು.೨೯.೭೧ ಲಕ್ಷ ಮೊತ್ತದ ಬೆಳೆಹಾನಿಯಾಗಿದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಆರ್. ವಿಶಾಲ್ ಮಾತನಾಡಿ, ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಮಳೆ ನಿಂತು ಬಿಸಿಲು ಬಂದ ಮೇಲೆ ಮಳೆಯಿಂದ ಹಾಳಾದ ರಸ್ತೆ ದುರಸ್ತಿಗೊಳಿಸಿ ಎಂದು ಸಲಹೆ ನೀಡಿದರು.ಕಳೆದ ಬಾರಿಗಿಂತ ಡಿಸಿ, ಎಸಿ ಕೋರ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮೂರರಿಂದ ಆರು ತಿಂಗಳ ಅವಧಿಯ ಕೋರ್ಟ್ ಕೇಸ್‌ಗಳನ್ನು ತಹಸೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು. ಆರ್‌ಟಿಸಿ ಮ್ಯೂಟೇಷನ್ ಹಾಗೂ ಆರ್‌ಟಿಸಿ ಕರೆಕ್ಷನ್ ತ್ವರಿತವಾಗಿ ಕಾಲಮಿತಿಯೊಳಗೆ ವಿಲೇಗೊಳಿಸಬೇಕು. ಭೂಮಾಪನ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸುವಂತೆ ಸೂಚನೆ ನೀಡಿದರು.ಜಲಜೀವನ್ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಯೋಜನೆ ಬಾಕಿ ಇರುವ ಕಾಮಗಾರಿಗಳಿಗೆ ಶೀಘ್ರವೇ ಕಾರ್ಯಾದೇಶಿ ನೀಡಿ ಆದ್ಯತೆ ಮೇರೆಗೆ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಬೇಕು ಹಾಗೂ ನಿರಂತರ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು. ತುಂಗಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಪ್ರಕರಣಗಳ ಸರ್ವೇಗೆ ಲೈಸೆನ್ಸ್ ಹೊಂದಿದ ಖಾಸಗಿ ಸರ್ವೇಯರ್‌ಗಳ ನೇಮಕಮಾಡಿಕೊಂಡು ಶೀಘ್ರವೇ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಾಗೂ ರಟ್ಟಿಹಳ್ಳಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಶಾಲೆಗೆ ಒಂದು ಎಕರೆ ನಿವೇಶನ ನೀಡಲು ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖೆಗಳ ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೆ ತಂದರು.ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಸಿಬ್ಬಂದಿಗಳ ಕೊರತೆ ಮಾಹಿತಿ ಪಡೆದ ಅವರು, ಅಗತ್ಯ ವೈದ್ಯರನ್ನು ಹಾಗೂ ಇತರೆ ಸಿಬ್ಬಂದಿಗಳನ್ನು ಹೊರಗುತ್ತಿಗೆ ಸೇವೆ ಮೂಲಕ ಪಡೆದುಕೊಳ್ಳಬೇಕು. ಕರ್ತವ್ಯಕ್ಕಾಗಿ ಹಾಜರಾಗಿ ಮತ್ತೆ ಗೈರು ಹಾಜರಾದವರಿಗೆ ಹಾಜರಾತಿ ನೀಡಿದರೆ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.ಜಿಪಂ ಸಿಇಒ ಅಕ್ಷಯ್ ಶ್ರೀಧರ, ಅಪರ ಜಿಲ್ಲಾಧಿಕಾರಿ ನಾಗರಾಜ್, ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್, ತಹಸೀಲ್ದಾರ್‌ಗಳು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ