ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತೆರವು ಕಾರ್ಯಾಚರಣೆ

KannadaprabhaNewsNetwork | Updated : Jul 18 2024, 09:41 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಮಂಗಳವಾರ ಭಾರಿ ಮಳೆಗೆ ಸಂಭವಿಸಿದ ಗುಡ್ಡ ಕುಸಿತದ ತೆರವು ಕಾರ್ಯಾಚರಣೆ ಮುಂದುವರಿದಿದೆ.

 ಅಂಕೋಲಾ :  ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಶಿರೂರಿನಲ್ಲಿ ಮಂಗಳವಾರ ಭಾರಿ ಮಳೆಗೆ ಸಂಭವಿಸಿದ ಗುಡ್ಡ ಕುಸಿತದ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಜನರ ಸಹಕಾರದಿಂದ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಮಣ್ಣಿನಡಿ ಸಿಲುಕಿರಬಹುದಾದ ಅಥವಾ ನದಿಯಲ್ಲಿ ಕೊಚ್ಚಿ ಹೋಗಿರುವ ಜನರ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ, ಮಳೆಗೆ ಮತ್ತೆ ಗುಡ್ಡ ಕುಸಿಯುತ್ತಿದ್ದು, ಕಾರ್ಯಾಚರಣೆಗೆ ತೊಂದರೆಯಾಗಿದೆ. ಹೀಗಾಗಿ, ಕಾರ್ಯಾಚರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿರೂರು ಭಾಗದ ಸುತ್ತಮುತ್ತಲ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

ಇದೇ ವೇಳೆ, ಶಿರೂರಿನ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ನೀರು ಸುನಾಮಿಯಂತೆ ಎದ್ದು ಇನ್ನೊಂದು ಪಕ್ಕದಲ್ಲಿರುವ ಉಳುವರೆ ಗ್ರಾಮದ ಮನೆಗಳಿಗೆ ಅಪ್ಪಳಿಸಿದ್ದು, 9 ಮನೆಗಳು ಕುಸಿದು ಬಿದ್ದಿವೆ. ಈ ವೇಳೆ, ಗಾಯಗೊಂಡ ಗ್ರಾಮದ 28 ಜನರನ್ನು ಕುಮಟಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಕುಸಿತದ ವೇಳೆ, ಉಳುವರೆ ಗ್ರಾಮದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾಳೆ.

ಮೃತರ ಅಂತ್ಯಕ್ರಿಯೆ: ಈ ಮಧ್ಯೆ, ಶಿರೂರು ಗುಡ್ಡ ಕುಸಿತದ ಮಣ್ಣಿನಡಿ ಮಂಗಳವಾರ ನಾಲ್ಕು ಮೃತದೇಹಗಳು ದೊರೆತಿದ್ದು, ಬುಧವಾರ ಒಂದೇ ಕುಟುಂಬದ ಮೂರು ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಲಕ್ಷ್ಮಣ ಬೊಮ್ಮಯ್ಯ ನಾಯ್ಕ್, (45), ಅವರ ಪತ್ನಿ ಶಾಂತಿ ಲಕ್ಷ್ಮಣ ನಾಯ್ಕ್,(35), ಪುತ್ರ ರೋಷನ್ ಲಕ್ಷ್ಮಣ ನಾಯ್ಕ್ (10) ಅವರ ಅಂತ್ಯಕ್ರಿಯೆಯನ್ನು ಶಿರೂರು ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನಡೆಸಲಾಯಿತು. ಇನ್ನೊಂದು ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ.

ಅಣ್ಣನ ಪತ್ತೆಗೆ ತಮ್ಮನ ಮನವಿ: ಈ ಮಧ್ಯೆ, ಗುಡ್ಡ ಕುಸಿತದಡಿಯಲ್ಲಿ ಲಾರಿಯೊಂದು ಸಿಲುಕಿರುವುದು ಜಿಪಿಎಸ್ ಮೂಲಕ ತಿಳಿದು ಬಂದಿದ್ದು, ಲಾರಿಯ ಚಾಲಕ, ನನ್ನ ಅಣ್ಣ ಅರ್ಜುನ ಕಣ್ಮರೆಯಾಗಿದ್ದಾನೆ. ಜೋಯಿಡಾ ರಾಮನಗರದ ಜಗಲಪೇಟದಿಂದ ಕಟ್ಟಿಗೆ ತುಂಬಿದ 12 ಚಕ್ರದ ಲಾರಿ ಕೇರಳ ರಾಜ್ಯಕ್ಕೆ ಹೋಗುತ್ತಿದ್ದು, ಲಾರಿ ಚಾಲಕ ಅರ್ಜುನ, ಶಿರೂರಿನ ಹೆದ್ದಾರಿ ಪಕ್ಕದಲ್ಲಿದ್ದ ಲಕ್ಷ್ಮಣ ನಾಯ್ಕರ ಹೋಟೆಲ್‌ನಲ್ಲಿಯೆ ಚಹ ಕುಡಿದು ಹೋಗುತ್ತಿದ್ದ. ನನ್ನ ಅಣ್ಣನನ್ನು ಹುಡುಕಿಕೊಡಿ ಎಂದು ಅರ್ಜುನನ ತಮ್ಮ ಅಭಿಜಿತ್‌ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಮಾಡಿದ್ದಾರೆ.

Share this article