ಅರ್ಧ ಅವಧಿ ಕಳೆದರೂ ಲಕ್ಷಾನಟ್ಟಿಗಿಲ್ಲ ಚುನಾವಣೆ ಭಾಗ್ಯ!

KannadaprabhaNewsNetwork |  
Published : Feb 26, 2024, 01:31 AM IST
ಲೋಕಾಪುರ | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಅರ್ಧ ಅವಧಿ ಸಮೀಪಿಸುತ್ತಾ ಬಂದರೂ ಸಮೀಪದ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ಮಾತ್ರ ಇದುವರೆಗೆ ಚುನಾವಣೆ ಭಾಗ್ಯ ಕೂಡ ಬಂದಿಲ್ಲ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಅರ್ಧ ಅವಧಿ ಸಮೀಪಿಸುತ್ತಾ ಬಂದರೂ ಸಮೀಪದ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ಮಾತ್ರ ಇದುವರೆಗೆ ಚುನಾವಣೆ ಭಾಗ್ಯ ಕೂಡ ಬಂದಿಲ್ಲ.

ಅಧಿಕಾರ ವಿಕೇಂದ್ರಿಕರಣದಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪಂಚಾಯತಿ ಚುನಾವಣೆ ನಡೆಸಲಾಗುತ್ತದೆ. ಆದರೆ ಹಲವು ತಾಂತ್ರಿಕ ಕಾರಣದಿಂದಾಗಿ ಲಕ್ಷಾನಟ್ಟಿ ಗ್ರಾಮ ಪಂಚಾಯತಿ ಚುನಾವಣೆಯಾಗದ ಕಾರಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳ ಅಭಿವೃದ್ಧಿಗೆ ಕುಂಟುತ್ತಾ ಸಾಗಿದೆ.

ಯಾಕೆ ವಿಳಂಬ?:

೨೦೨೧ರಲ್ಲಿ ಸಮೀಪದ ಲೋಕಾಪುರ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿತು. ಈ ಪಟ್ಟಣ ಪಂಚಾಯತಿಗೆ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಗೆ ಒಳ್ಳಪಟ್ಟಿದ್ದ ಎರಡು ಗ್ರಾಮಗಳು ಸೇರ್ಪಡೆಗೊಂಡಿದ್ದರಿಂದ ಇದೀಗ ಲಕ್ಷಾನಟ್ಟಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ತೊಡಕುಂಟಾಗಿದೆ.

ಲೋಕಾಪುರ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರಿದ ಪರಿಣಾಮ ಲಕ್ಷಾನಟ್ಟಿ ಗ್ರಾಮ ಪಂಚಾಯತಿ ಸದಸ್ಯತ್ವ ಸಂಖ್ಯೆ ಕಡಿಮೆಯಾಯಿತು. ಇದರಿಂದ ಮೀಸಲಾತಿ ಸ್ಥಾನ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗುತ್ತಿರುವ ಕಾರಣ ಚುನಾವಣೆ ಪ್ರಕ್ರಿಯೆ ವಿಳಂವಾಗುತ್ತಿದೆ.

ಅಧಿಕಾರಿಗಳ ಅಣತಿಯಂತೆ ಕಾರ್ಯ:

ಲೋಕಾಪುರ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರುವ ಮುನ್ನ ಲಕ್ಷಾನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷಾನಟ್ಟಿ, ವರ್ಚಗಲ್, ಚೌಡಾಪುರ, ಜಾಲಿಕಟ್ಟಿ, ಬಿ.ಕೆ. ಜಾಲಿಕಟ್ಟಿ ಕೆ.ಡಿ. ಪಾಲ್ಕಿಮಾನೆ, ನಾಗಣಾಪುರ, ಬ್ಯಾಡರ ಅರಳಿಕಟ್ಟಿ, ಜೇಡರ ಅರಳಿಕಟ್ಟಿ, ಹಳ್ಳಿಗಳು ಬರುತ್ತಿದ್ದವು. ಇದೀಗ ಜಾಲಿಕಟ್ಟಿ ಬಿ.ಕೆ. ಹಾಗೂ ಜಾಲಿಕಟ್ಟಿ ಕೆ.ಡಿ. ಗ್ರಾಮಗಳು ಲೋಕಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಇದೀಗ 7 ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯತಿಗೆ ಆಡಳಿತ ಮಂಡಳಿ ಇಲ್ಲದೆ ಕೇವಲ ಅಧಿಕಾರಿಗಳ ಹುಕುಂನಂತೆ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರೇ ಆರೋಪಿಸುತ್ತಿದ್ದಾರೆ.

ಅಭಿವೃದ್ಧಿ ಕಾರ್ಯ ನಿಧಾನ:

ಗ್ರಾಮ ಪಂಚಾಯತಿಗೆ ಅಡಳಿತ ಮಂಡಳಿ ನಿರ್ಮಾಣವಾಗದ ಕಾರಣ ಏಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿದೆ ಎಂಬುವುದು ಸ್ಥಳೀಯರ ಮಾತು. ಅಧಿಕಾರಿಗಳಿಗೆ ಸ್ಥಳೀಯ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯುತ್ತದೆ. ಆದ್ದರಿಂದ ಶೀಘ್ರ ಚುನಾವಣೆ ನಡೆದರೆ ಒಳ್ಳೆಯದು ಎನ್ನುತ್ತಾರೆ ೭ ಗ್ರಾಮಗಳ ಸಾರ್ವಜನಿಕರು.

--------

ಕೋಟ್‌.....

ಲಕ್ಷಾನಟ್ಟಿ ಗ್ರಾಮ ಪಂಚಾಯತಿಯಲ್ಲಿ ಮೊದಲಿದ್ದ ೨ ಹಳ್ಳಿಗಳು ಲೋಕಾಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡಗೊಂಡ ಹಿನ್ನೆಲೆ ಚುನಾವಣೆ ತಡವಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಸಂಜೀವ ಹಿಪ್ಪರಗಿ, ಆಡಳಿತಾಧಿಕಾರಿ ಲಕ್ಷಾನಟ್ಟಿ

---

ನಮ್ಮ ಗ್ರಾಮ ಪಂಚಾಯತಿ ಚುನಾವಣೆಗಿರುವ ಅಡತಡೆಗಳು ಶೀಘ್ರ ಬಗೆಹರಿದು ಚುನಾವಣೆ ನಡೆದರೆ ಆಡಳಿತ ಮಂಡಳಿಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗೆ ಕೊಟ್ಟಂತಾಗುತ್ತದೆ. ಆಡಳಿತ ಮಂಡಳಿ ಇರದೇ ಸರಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ಮರೀಚಿಕೆಯಾಗಿವೆ.

-ಲೋಕಣ್ಣ ಕೊಪ್ಪದ ಸ್ಥಳೀಯರು, ಲಕ್ಷಾನಟ್ಟಿ

---

ಬಾಕ್ಸ್

ಸೀಟು ಹಂಚಿಕೆಯ ಗೊಂದಲ

೯ ಹಳ್ಳಿಗಳನ್ನು ಹೊಂದಿದ್ದ ಲಕ್ಷಾನಟ್ಟಿ ಗ್ರಾಮ ಪಂಚಾಯತಿ ಒಟ್ಟು ೨೨ ಸ್ಥಾನಗಳನ್ನು ಒಳಗೊಂಡಿತ್ತು. ಇದೀಗ ಜಾಲಿಕಟ್ಟಿ ಕೆ.ಡಿ. ಹಾಗೂ ಜಾಲಿಕಟ್ಟಿ ಬಿ.ಕೆ. ಗ್ರಾಮಗಳು ಗ್ರಾಮ ಪಂಚಾಯತಿಯಿಂದ ಹೊರಬರುವ ಕಾರಣ ಮೀಸಲಾತಿ ವಿಂಗಡಿಸಿ ಸ್ಥಾನ ಹಂಚಿಕೆಯ ಗೊಂದಲದಿಂದ ಚುನಾವಣೆ ಕಾರ್ಯಕ್ಕೆ ಮಂಕು ಕವಿದಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ
ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು