ಮೋದಿ ಕಾರ್ಯಕ್ರಮಗಳ ಮುಂದೆ ಗ್ಯಾರಂಟಿಗಳು ಕೇವಲ ಸಾಸಿವೆ ಕಾಳಿನಷ್ಟು: ಸಂಸದ ರಾಘವೇಂದ್ರ

KannadaprabhaNewsNetwork | Published : Feb 26, 2024 1:31 AM

ಸಾರಾಂಶ

ನರೇಂದ್ರ ಮೋದಿ ಅವರು ನೀಡಿದ ಕಾರ್ಯಕ್ರಮಗಳ ಮುಂದೆ ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಸಾಸಿವೆ ಕಾಳಿನಷ್ಟು ಮಾತ್ರ. ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಇಂದಿಗೂ ಬಿಜೆಪಿ ಮಾತ್ರ 5 ಕೆಜಿ ಅಕ್ಕಿ ಕೊಡುತ್ತಿದೆ. ಮೋದಿ ಕಾರ್ಯಕ್ರಮಗಳಿಗೆ ತುಲನೆ ಮಾಡಿದರೆ ಅದು ನಗೆಪಾಟಲಿಗೆ ಈಡಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನರೇಂದ್ರ ಮೋದಿ ಅವರು ನೀಡಿದ ಕಾರ್ಯಕ್ರಮಗಳ ಮುಂದೆ ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಸಾಸಿವೆ ಕಾಳಿನಷ್ಟು ಮಾತ್ರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಇಂದಿಗೂ ಬಿಜೆಪಿ ಮಾತ್ರ 5 ಕೆಜಿ ಅಕ್ಕಿ ಕೊಡುತ್ತಿದೆ. ಮೋದಿ ಕಾರ್ಯಕ್ರಮಗಳಿಗೆ ತುಲನೆ ಮಾಡಿದರೆ ಅದು ನಗೆಪಾಟಲಿಗೆ ಈಡಾಗುತ್ತದೆ ಎಂದರು.

ಭಾಗ್ಯಲಕ್ಷ್ಮೀ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌, ರೈತರ ಬಜೆಟ್ ಮೊದಲಾದ ಯೋಜನೆ ಮಾಡಿದ್ದು ಯಡಿಯೂರಪ್ಪ ಅವರು. ಅಷ್ಟೇ ಅಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಎರಡು ನಿಗಮ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಯಾವ ಅಭಿವೃದ್ಧಿಯೂ ನಡೆದಿಲ್ಲ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದರು.

ಎಸ್‌ಸಿ-ಎಸ್‌ಟಿ ಅನುದಾನ ದುರ್ಬಳಕೆ:

ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಕೊಟ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿದ್ದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅನೇಕ ಜನವಿರೋಧಿ ಕಾಯ್ದೆ ಕಾನೂನುಗಳನ್ನು ಮಾಡುತ್ತಿದೆ. ಕುವೆಂಪು ಅವರ ಘೋಷವಾಕ್ಯ ಬದಲಿಸುವ ಕೆಲಸ ಮಾಡಿದ್ದರು. ಧಾರ್ಮಿಕ ದತ್ತಿ ಕಾಯ್ದೆ ಮೂಲಕ ದೇಗುಲಗಳ ಆದಾಯದ ಶೇ.10 ಪಡೆಯುವ ಕೆಲಸ ಮಾಡಿದರು. ಪರಿಷತ್ತಿನಲ್ಲಿ ಈ ಕಾಯ್ದೆಯ ವಿರುದ್ಧ ಮತ ಚಲಾವಣೆ ಮೂಲಕ ಅಂಗೀಕಾರ ಬಿದ್ದುಹೋಯಿತು ಎಂದರು.

ಕಾಂಗ್ರೆಸ್‌ ಉಳುವಿಗೆ ರಾಹುಲ್‌ ಗಾಂಧಿ ಪಾದಯಾತ್ರೆ:

136 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 66 ಕ್ಷೇತ್ರಗಳಲ್ಲಿ ಮಾತ್ರ ಲೀಡ್ ಪಡೆಯಲಿದೆ. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಇಲ್ಲದ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ತಪ್ಪಿನಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾಗಿ ಮತದಾರರಿಗೆ ಅನಿಸಿದೆ. ಕಾಂಗ್ರೆಸ್ ಉಳಿಯುವಿಗಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ರಾಜ್ಯಸಭೆಗೆ ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ರಾಜ್ಯಸಭೆಗೆ ನೇಮಕ ಆಗುವ ಸ್ಥಿತಿಯಿದೆ ಎಂದು ಲೇವಡಿ ಮಾಡಿದರು.

ಧಾರ್ಮಿಕ ಸಂಸ್ಥೆಗಳಲ್ಲಿ ಇತರ ಧರ್ಮದವರಿಗೆ ಅವಕಾಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂ ದೇಗುಲಗಳ ಆದಾಯ ಹತ್ತು ಪರ್ಸೆಂಟ್ ಪಡೆಯಬೇಕು. ಅನ್ಯಧರ್ಮೀಯರನ್ನು ನೇಮಕ ಮಾಡಬೇಕು ಎಂಬುದನ್ನು ಕಾಂಗ್ರೆಸ್ಸಿಗರ ಕುಟುಂಬದವರು ಕೂಡ ಒಪ್ಪಲ್ಲ ಎಂದು ಹರಿಹಾಯ್ದರು.

- - - -ಫೋಟೋ: ಬಿ.ವೈ.ರಾಘವೇಂದ್ರ

Share this article