ಕನ್ನಡಪ್ರಭ ವಾರ್ತೆ ಹಿರಿಯೂರು
ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ಸಿಗದೇ ವಂಚಿತವಾಗಿರುವ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ರಾಜ್ಯದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯು 1999 ರಲ್ಲಿ ಮೊಟ್ಟ ಮೊದಲ ಬಾರಿಗೆ ಒಳ ಮೀಸಲಾತಿಗೆ ಬೇಡಿಕೆಯಿಟ್ಟು ಹೋರಾಟ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಹಲವಾರು ಹೋರಾಟಗಳು ಒಳ ಮೀಸಲಾತಿಗಾಗಿ ನಡೆಯುತ್ತಲೇ ಇದ್ದು, ಮೂರು ದಶಕಗಳು ಕಳೆಯುತ್ತಾ ಬಂದರೂ ನಮ್ಮ ಹಕ್ಕುಗಳ ಜಾರಿಯಾಗಿಲ್ಲ ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಹೇಳಿದರು.ತಾಲೂಕಿನ ಪಟ್ರೆಹಳ್ಳಿ ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಹಾನಾಯಕ ದಲಿತಸೇನೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಕರ್ನಾಟಕ ಭೀಮ್ ಸೇನೆ, ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ. ಕೃಷ್ಣಪ್ಪ ಸ್ಥಾಪಿತ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳ ಬಿ.ಆರ್ ಅಂಬೇಡ್ಕರ್ ಸಂಘಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಗೆ ಗುರುವಾರ ಪಟ್ರೆಹಳ್ಳಿಯಲ್ಲಿ ಚಾಲನೆ ಅವರು ಮಾತನಾಡಿದರು.
ನಮ್ಮ ಪಾದಯಾತ್ರೆಯು ಚಿತ್ರದುರ್ಗ ತಲುಪುವ ಹೊತ್ತಿಗೆ ಇನ್ನಷ್ಟು ಜಿಲ್ಲೆಗಳ ಬಂಧುಗಳು ಬಂದು ಸೇರಲಿದ್ದು, ಸರ್ಕಾರ ಮತ್ತೆ ಮೀನಾಮೇಷ ಎಣಿಸದೆ ಒಂದು ದೃಢ ನಿರ್ಧಾರ ಪ್ರಕಟಿಸಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೊಂದು ಸದವಕಾಶವಾಗಿದ್ದು, ಅವರ ಹೆಸರು ಶಾಶ್ವತವಾಗಿ ಉಳಿಯಲು ಒಳ ಮೀಸಲಾತಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ನ್ಯಾಯಯುತ ಹಕ್ಕು ನಮಗೆ ಕೊಡಿಸಬೇಕು ಎಂದು ಆಗ್ರಹಿಸಿದರು.ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿ, ಮಾದಿಗರ ಒಳ ಮೀಸಲಾತಿ ಜಾರಿಗೆ ಸರ್ಕಾರ ಶೀಘ್ರವೇ ಮುಂದಾಗಬೇಕು. ಸುಮಾರು 30 ವರ್ಷಗಳಿಂದ ಮಾದಿಗರು ಒಳ ಮೀಸಲಾತಿ ಜಾರಿಗೆ ಎಲ್ಲಾ ರೀತಿಯ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಸಂಬಂಧ ವಾಸ್ತವಾಂಶ ತಿಳಿಯಲು ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿ, ಸರ್ಕಾರ ವರದಿ ಕೂಡ ಸ್ವೀಕರಿಸಿ, ಒಳ ಮೀಸಲಾತಿ ಜಾರಿಗೆ ತರದೆ ಮೌನ ತಳೆದಿರುವುದು ಬೇಸರದ ಸಂಗತಿ ಎಂದರು.
ಕಳೆದ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಏಳು ಜನ ನ್ಯಾಯಮೂರ್ತಿಗಳು ಆಯಾ ರಾಜ್ಯಗಳು ಒಳ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬಹುದು ಎಂದು ತೀರ್ಪು ನೀಡಿದ್ದಾರೆ. ಆದರೂ ರಾಜ್ಯ ಸರ್ಕಾರ ಮಾದಿಗರಿಗೆ ಈ ಬಗ್ಗೆ ನ್ಯಾಯ ಕೊಡದೆ ಅನ್ಯಾಯ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಒಳ ಮೀಸಲಾತಿ ಜಾರಿಗೆ ತರದೇ ಹೋದರೆ, ಇಡೀ ರಾಜ್ಯದ ಮಾದಿಗರ ಆಕ್ರೋಶಕ್ಕೆ ಸರ್ಕಾರ ಗುರಿಯಾಗ ಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.ಸಾಮಾಜಿಕ ಕಾರ್ಯಕರ್ತ ಕೋಡಿಹಳ್ಳಿ ಸಂತೋಷ್ ಮಾತನಾಡಿ, ಇದು ಮಾದಿಗ ಸಮುದಾಯ ಕೈಗೆತ್ತಿಕೊಂಡ ಹೋರಾಟ. ಆದರೂ ಕೂಡ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಈ ಒಳ ಮೀಸಲು ಹೋರಾಟಕ್ಕೆ ದೇಶವ್ಯಾಪಿ ಮಹತ್ವ ಒದಗಿ ಬಂದಿದೆ. ಇದುವರೆಗೂ ರಾಜ್ಯ ಸರ್ಕಾರಗಳು ಸಲ್ಲದ ನೆಪಗಳನ್ನು ಹೇಳುತ್ತಾ ಒಳ ಮೀಸಲಾತಿ ಜಾರಿಯನ್ನು ಹತ್ತಾರು ವರ್ಷಗಳಿಂದ ವಿಳಂಬ ಮಾಡುತ್ತಲೇ ಬಂದಿವೆ ಎಂದು ತಿಳಿಸಿದರು.
ಈಗ ಕಾಲಹರಣ ಮತ್ತು ಕುಂಟುನೆಪ ಹೇಳಲು ಸರ್ಕಾರಗಳಿಗೆ ಯಾವುದೇ ಅವಕಾಶ ಇಲ್ಲದಂತಾಗಿದೆ. ಆದ ಕಾರಣ ತಕ್ಷಣವೇ ಸಿದ್ದರಾಮಯ್ಯನವರ ಸರ್ಕಾರ ಐತಿಹಾಸಿಕ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಆಳುವ ಸರ್ಕಾರ ಮತ್ತು ಒಳ ಮೀಸಲು ವಿರೋಧಿ ಪಕ್ಷಗಳಿಗೆ ರಾಜಕೀಯ ಒಳ ಏಟು ನೀಡುವ ತೀರ್ಮಾನವನ್ನು ಸಮುದಾಯ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.ಪಟ್ರೆಹಳ್ಳಿಯಿಂದ ಹೊರಟ ಪಾದಯಾತ್ರೆ ನಗರ ತಲುಪುವ ಹೊತ್ತಿಗೆ ಬೃಹತ್ ಸಂಖ್ಯೆಯ ಜನರ ಸೇರ್ಪಡೆಯೊಂದಿಗೆ ನಗರದ ಪ್ರಧಾನ ರಸ್ತೆ, ತಾಲೂಕು ಕಚೇರಿ ರಸ್ತೆಯಲ್ಲಿ ಸಾಗುತ್ತಾ, ಟಿಬಿ ವೃತ್ತದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರಿಗಳನ್ನು ಉದ್ದೇಶಿಸಿ ವೇದಿಕೆ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ಗುರುಶ್ಯಾಮಯ್ಯ, ಬಬ್ಬೂರು ಪರಮೇಶ್ವರಪ್ಪ, ಕೆಪಿ. ಶ್ರೀನಿವಾಸ್, ಜಿಎಲ್. ಮೂರ್ತಿ, ಜೀವೇಶ್, ಕೊಟ್ಟ ಶಂಕರ್, ಎನ್. ಹನುಮಂತರಾಯಪ್ಪ, ರಂಗಸ್ವಾಮಿ, ಓಂಕಾರಪ್ಪ, ಕಲ್ಲಟ್ಟಿ ಹರೀಶ್, ಸಿದ್ದಪ್ಪ, ಮಹಂತೇಶ್, ಹಾಲಪ್ಪ, ಘಾಟ್ ರವಿ, ಹೆಗ್ಗೆರೆ ಮಂಜುನಾಥ್, ಬ್ಯಾಡರಹಳ್ಳಿ ಹನುಮಂತರಾಯ, ಮಟ್ಟಿ ಒಂಕಾರ್, ಮಾರುತೇಶ್, ರಾಘವೇಂದ್ರ, ಖಂಡೇನಹಳ್ಳಿ ಶಿವು, ಕೆ.ಆರ್. ಹಳ್ಳಿ ರಘು, ಕದುರಪ್ಪ, ಟಿಬಿ ಸರ್ಕಲ್ ರಾಘವೇಂದ್ರ, ಪ್ರದೀಪ್, ಎಂ.ಡಿ. ರಮೇಶ್, ಗಿರೀಶ್, ಮೋಹನ್ ಕುಮಾರ್ ಮುಂತಾದವರು ಹಾಜರಿದ್ದರು.