ಮೂರು ವರ್ಷ ಕಳೆದರೂ ಬಾರದ ಕಲಾವಿದರ ಮಾಸಾಶನ

KannadaprabhaNewsNetwork |  
Published : Jul 21, 2024, 01:19 AM IST
ಬಳ್ಳಾರಿಯಲ್ಲಿ ಈಚೆಗೆ ಸಭೆ ನಡೆಸಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಸದಸ್ಯರು ಕಲಾವಿದರ ಸಮಸ್ಯೆಗಳ ಕುರಿತು ಚರ್ಚಿಸಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈಗಾಗಲೇ 101 ಕಲಾವಿದರು ಮಾಸಾಶನ ಪಡೆಯುತ್ತಿದ್ದು, ಈ ಪೈಕಿ 7 ವಿಧವಾ ಮಾಸಾಶನ (ಕಲಾವಿದ ಮೃತ ಬಳಿಕ ಪತ್ನಿಗೆ ಮಾಸಾಶನ) ಪಡೆಯುತ್ತಿದ್ದಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಕಲೆಯನ್ನೇ ಬದುಕಾಗಿಸಿಕೊಂಡು ಜೀವನ ನಿರ್ವಹಣೆಗೂ ಒದ್ದಾಡುತ್ತಿರುವ ಕಲಾವಿದರು ಕಳೆದ ಮೂರು ವರ್ಷಗಳಿಂದ ಮಾಸಾಶನಕ್ಕಾಗಿ ಎದುರು ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಕಲಾವಿದರ ಬಗ್ಗೆ ಹೆಚ್ಚಿನ ಆಸ್ಥೆ ವಹಿಸದಿರುವುದು ಬಣ್ಣದ ಬದುಕು ನೆಚ್ಚಿಕೊಂಡವರ ಸ್ಥಿತಿ ಮತ್ತಷ್ಟು ಡೋಲಾಯಮಾನವಾಗಿದೆ.

ಮಾಸಾಶನಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರ ಪೈಕಿ 60ರಿಂದ 70 ವರ್ಷದವರು ಇದ್ದು, ಇಳಿ ವಯಸ್ಸಿನಲ್ಲೂ ಪುಡಿಗಾಸಿಗೆ ಅವರಿವರನ್ನು ಆಶ್ರಯಿಸುವಂತಾಗಿದೆ.

2021/22, 2022/23, 2023/24ನೇ ಸಾಲಿನವರೆಗೆ ಜಿಲ್ಲೆಯ 25 ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಯಲಾಟ, ಜಾನಪದ, ನಾಟಕ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅರ್ಜಿ ಸಲ್ಲಿಸಿದ ಕಲಾವಿದರ ಸಂದರ್ಶನವೂ ಆಗಿದೆ. ಆದರೆ, ಕಲಾವಿದರ ಆಯ್ಕೆ, ರಾಜ್ಯಮಟ್ಟದ ಮಾಸಾಶನ ಶಿಫಾರಸು ಸಮಿತಿ ರಚನೆಯಾಗಿಲ್ಲ. ಕಲಾವಿದರ ಮಾಸಾಶನ ಪ್ರಕ್ರಿಯೆ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಲಾವಿದರ ಹಿತ ಕಾಯುವ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ 101 ಕಲಾವಿದರು ಮಾಸಾಶನ ಪಡೆಯುತ್ತಿದ್ದು, ಈ ಪೈಕಿ 7 ವಿಧವಾ ಮಾಸಾಶನ (ಕಲಾವಿದ ಮೃತ ಬಳಿಕ ಪತ್ನಿಗೆ ಮಾಸಾಶನ) ಪಡೆಯುತ್ತಿದ್ದಾರೆ. ಕಲಾವಿದರ ಮಾಸಿಕ ₹2 ಸಾವಿರ, ವಿಧವಾ ಮಾಸಾಶನ ₹500 ನೀಡಲಾಗುತ್ತಿದೆ. ಮಾಸಾಶನ ಕೋರಿ ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿರುವ ಕಲಾವಿದರ ಪೈಕಿ ಕೆಲವರ ಆರ್ಥಿಕ ಪರಿಸ್ಥಿತಿ ತೀವ್ರ ಬಿಗಡಾಯಿಸಿದ್ದು ಸರ್ಕಾರದ ಮಾಸಾಶನಕ್ಕಾಗಿ ಕಾಯುತ್ತಿದ್ದಾರೆ.

ಕಲಾವಿದರ ಮಾಸಾಶನ ಹೆಚ್ಚಳ ಮಾಡಬೇಕು ಎಂಬ ಕಲಾವಿದರ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರ ಕೊಡುವ ₹2 ಸಾವಿರ ಮಾಸಾಶನದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯ. ಕೆಲ ಕಲಾವಿದರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೆಲ ನಗರ ಪ್ರದೇಶದ ಕಲಾವಿದರು ಬಾಡಿಗೆ ಮನೆಯಲ್ಲಿದ್ದು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಮಾಸಾಶನ ಹೆಚ್ಚಳ ಮಾಡಬೇಕು. ನನೆಗುದಿಗೆ ಬಿದ್ದ ಮಾಸಾಶನ ಪ್ರಕ್ರಿಯೆ ಪೂರ್ಣಗೊಳಿಸಿ, ಕಲಾವಿದರಿಗೆ ನೆರವಾಗಬೇಕು ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಒತ್ತಾಯಿಸಿದೆ.

ಅಲೆದಾಟ ನಿಂತಿಲ್ಲ: 58 ವರ್ಷ ತುಂಬಿದ ಹಿರಿಯ ಕಲಾವಿದರ ನೆರವಿಗೆ ಸರ್ಕಾರ ಮಾಸಾಶನ ನೀಡುತ್ತದೆ. ಕನಿಷ್ಠ 25 ವರ್ಷಗಳ ಕಲಾಸೇವೆಗೈದವರು, ವಾರ್ಷಿಕ ₹1 ಲಕ್ಷದೊಳಗೆ ಆದಾಯವುಳ್ಳವರು, ಯಾವುದೇ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಪಡೆದುಕೊಳ್ಳದವರು ಮಾಸಾಶನಕ್ಕೆ ಅರ್ಹರು. ಆದರೆ, 65 ವರ್ಷ ಮೇಲ್ಪಟ್ಟವರೂ ಮಾಸಾಶನಕ್ಕಾಗಿ ಅಲೆದಾಡುವಂತಾಗಿದೆ.

ಮಾಸಾಶನಕ್ಕೆ ಬಂದ ಹೊಸ ಅರ್ಜಿಗಳನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಿಂದ 25 ಹೊಸ ಅರ್ಜಿ ಕಳಿಸಲಾಗಿದೆ. ಈ ಕುರಿತು ಸರ್ಕಾರವೇ ಕ್ರಮ ವಹಿಸಬೇಕು ಎನ್ನುತ್ತಾರೆ ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್.

ಎಂ.ಪಿ. ಪ್ರಕಾಶ್ ಡಿಸಿಎಂ ಆಗಿದ್ದ ವೇಳೆ ಕಲಾವಿದರಿಗೆ ಮಾಸಾಶನ ಶುರು ಮಾಡಿದರು. ಮೊದಲಿಗೆ ₹500 ನೀಡಲಾಗುತ್ತಿತ್ತು. ಈಗ ₹2 ಸಾವಿರ ಕೊಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಹೊಸ ಮಾಸಾಶನ ನೀಡಿಲ್ಲ. ಕಲಾವಿದರು ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ಗಮನ ಹರಿಸಬೇಕು ಎನ್ನುತ್ತಾರೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ಎಚ್‌. ತಿಪ್ಪೇಸ್ವಾಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!