ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಚಲವಾದಿ ನಾರಾಯಣ ಸ್ವಾಮಿ

KannadaprabhaNewsNetwork |  
Published : Dec 07, 2025, 03:30 AM IST
ಮುಂಡಗೋಡ: ವಿಧಾನಪರಿಷತ್ ವಿರೋದ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಶನಿವಾರ ಪಟ್ಟಣದಲ್ಲಿ ಅಂಬೇಡ್ಕರ ಪುತ್ತಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿದರು. | Kannada Prabha

ಸಾರಾಂಶ

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದ ಜನತೆ ಅಷ್ಟೊಂದು ರೋಸಿಹೋಗಿದ್ದಾರೆ ಎಂದು ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಮುಂಡಗೋಡ: ರಾಜ್ಯವನ್ನು ಆಳುತ್ತಿರುವುದು ಗಂಡಾಗುಂಡಿ ಸರ್ಕಾರ. ಅಧಿಕಾರಕ್ಕಾಗಿ ಡಿನ್ನರ್, ಬ್ರೇಕ್‌ಫಾಸ್ಟ್ ಪಾರ್ಟಿ ಮಾಡುವ ಮೂಲಕ ಟೈಮ್ ಪಾಸ್ ಮಾಡುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಲಿ, ರಾಜ್ಯದ ಅಭಿವೃದ್ಧಿಗಾಗಿ ಒಂದು ದಿನ ಕೂಡ ಕುಳಿತು ಮಾತನಾಡಿದ್ದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಶನಿವಾರ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಧಿಕಾರ ಮಾತ್ರ ಮುಖ್ಯ. ಚುನಾವಣೆ ಬಂದಾಗ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರೆ ಬಡವರು ಮತ ಹಾಕಿಬಿಡುತ್ತಾರೆ ಎಂದುಕೊಂಡಿದ್ದಾರೆ. ನಮ್ಮ ಜನರಿಗೆ ಬಡತನವಿದ್ದರೂ ಸ್ವಾಭಿಮಾನವಿದೆ. ಕಳೆದ ಬಾರಿ ಕಾರಣಾಂತರದಿಂದ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆಯೇ ಹೊರತು ಗ್ಯಾರಂಟಿಗಾಗಿ ಅಲ್ಲ. ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದ ಜನತೆ ಅಷ್ಟೊಂದು ರೋಸಿಹೋಗಿದ್ದಾರೆ ಎಂದರು.

ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಸಂಚರಿಸಲು ಯೋಗ್ಯವಿಲ್ಲದಂತಾಗಿವೆ. ಮಳೆ ಹೆಚ್ಚಾಗಿ ಅಡಕೆ, ಗೋವಿನ ಜೋಳ ಬೆಳೆ ಹಾನಿಗೊಳಗಾಗಿದೆ. ಇನ್ನೊಂದು ಕಡೆ ಕಬ್ಬು ಬೆಳಗಾರರು ಹೋರಾಟ ಮಾಡುತ್ತಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತರು ಆಗ್ರಹಿಸುತ್ತಿದ್ದರೆ, ಇವರು ಮಾತ್ರ ಶಾಸಕರ ಖರೀದಿ ಕೇಂದ್ರಗಳನ್ನು ತೆರೆದು ಕುಳಿತಿದ್ದಾರೆ. ಈ ಹಿಂದೆ ಅಧಿಕಾರ ಹಿಡಿಯಲು ಬೇರೆ ಬೇರೆ ಪಕ್ಷದ ಶಾಸಕರನ್ನು ಖರೀದಿಸುವುದನ್ನು ನೋಡಿದ್ದೆವು. ಆದರೆ ಇಂದು ಅಧಿಕಾರಕ್ಕಾಗಿ ಸ್ವಪಕ್ಷದವರನ್ನೇ ಖರೀದಿಸುವ ಕಾರ್ಯದಲ್ಲಿ ನಿರತರಾಗಿರುವ ಇವರು ರಾಜ್ಯದ ಜನರ ಸಮಸ್ಯೆ ಬಗ್ಗೆ ಏನು ಚಿಂತನೆ ನಡೆಸುತ್ತಾರೆ? ದಲಿತರ ಅಭಿವೃದ್ಧಿಗೆ ₹೪೨ ಸಾವಿರ ಕೋಟಿ ಎಂದು ಸುಳ್ಳು ಭಾಷಣ ಮಾಡುವ ಮೂಲಕ ದಲಿತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಹೊರಟಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಮೂರು ಕಾಸು ಕೂಡ ನೀಡಿಲ್ಲ. ಯಾವುದೇ ಒಂದು ನಿಗಮದಲ್ಲಿ ಚಟುವಟಿಕೆ ಇಲ್ಲ. ಹಾಗಾಗಿ, ಅವರು ಹೇಳುವ ಸುಳ್ಳುಗಳಿಗೆ ದಲಿತರು ಮರುಳಾಗದೆ ಕೆಲಸ ಮಾಡುವರನ್ನು ಗುರುತಿಸಿ ಬೆಂಬಲಿಸಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಚಿದಾನಂದ ಹರಿಜನ ಮುಂತಾದವರು ಉಪಸ್ಥಿತರಿದ್ದರು.

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ

ಶಿರಸಿ: ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ. ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜನರ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

ಅವರು ಶನಿವಾರ ಮಾಧ್ಯಮದವರ ಜತೆ ಮಾತನಾಡಿ, ಕೇವಲ ಕಾಂಗ್ರೆಸ್‌ ನಾಯಕರು ಬ್ರೇಕ್‌ ಫಾಸ್ಟ್‌ ಮಾಡಿದರೆ ಸಾಲುವುದಿಲ್ಲ. ಜನರಿಗೂ ಬ್ರೇಕ್‌ ಫಾಸ್ಟ್ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆಯಾಗಬೇಕು. ಬೆಂಗಳೂರಿನ ವಿಷಯ ಇಲ್ಲಿ ಚರ್ಚೆ ಬೇಡ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಉತ್ತರ ಕರ್ನಾಟಕ ರೈತರ, ದಲಿತರ ಅನೇಕ ಸಮಸ್ಯೆಗಳಿದ್ದು, ಅಭಿವೃದ್ಧಿ ಆಗಿಲ್ಲ. ನೀರಾವರಿ ಸಮಸ್ಯೆಗಳಿವೆ. ರೈತರ ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ನಮಗೆ ನ್ಯಾಯ ನೀಡದಿದ್ದರೆ ಬೇರೆ ರಾಜ್ಯ ಕೇಳುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್‌ ಪಕ್ಷದ ಶಾಸಕರೇ ಹೇಳಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಉತ್ತರ ಭಾಗಕ್ಕೆ ನ್ಯಾಯ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ. ಈ ಎಲ್ಲ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಬೇಕಿದೆ ಎಂದರು.

ಅಧಿಕಾರದ ಕಿತ್ತಾಟದಲ್ಲಿ ಜನರ ಸಮಸ್ಯೆ ಬದಿಗಿಡಬಾರದು, ರಾಜ್ಯಕ್ಕೆ ಅನ್ಯಾಯ ಮಾಡಬಾರದು. ವಾಚ್‌ ವಿಚಾರವಾಗಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡುವುದು ಬೇಡ, ನನ್ನ ಚಾಲೆಂಜ್‌ನಿಂದ ಅಧಿಕಾರ ತಪ್ಪುತ್ತದೆ. ಆ ಅನ್ಯಾಯ ಮಾಡಲು ನಾನು ತಯಾರಿಲ್ಲ. ಅದಕ್ಕೆ ನಾನು ಚಾಲೆಂಚ್‌ ಸ್ವೀಕಾರ ಮಾಡುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರಿಗೆ ನೂರು ವಾಚ್‌ ಕಟ್ಟುವಷ್ಟು ಶಕ್ತಿ ಭಗವಂತ ನೀಡಿದ್ದಾನೆ. ಅವರು ರಾಜೀನಾಮೆ ನೀಡಿದರೆ ಬಹಳ ಅನ್ಯಾಯವಾಗುತ್ತದೆ. ಅದು ನನಗೆ ಶಾಪ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಸರ್ಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡಲು ಬಿಜೆಪಿಯಲ್ಲಿ ನಾಯಕರಿಲ್ಲ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ ಅಭಿಪ್ರಾಯಕ್ಕೆ ಉತ್ತರ ನೀಡುವುದಿಲ್ಲ. ಅವರು ಪಕ್ಷದಲ್ಲಿದ್ದರೆ ಅವರ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿ. ಅವರು ಈಗ ನಮ್ಮ ಪಕ್ಷದಲ್ಲಿಲ್ಲ. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾರೂ ನನಗೆ ಅವಾಜ್‌ ಹಾಕಿಲ್ಲ. ಅವರು ಯಾವ ಉದ್ದೇಶಕ್ಕೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಪ್ರಜ್ಞೆ ಇದೆ. ಬಾಬಾ ಸಾಹೇಬ್‌ ಅಂಬೇಡ್ಕರ್ ಅನುಯಾಯಿ. 45 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಎಲ್ಲಿ ಮಾತನಾಡಬೇಕು ಎಂಬುದು ಗೊತ್ತಿದೆ. ಯತ್ನಾಳ ಇದ್ದಾಗ ಗೌರವಿಸಿದ್ದೇನೆ. ಈಗಲೂ ಗೌರವಿಸುತ್ತೇನೆ. ಅವರ ಹೇಳಿಕೆ ಸ್ವಂತದ್ದಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶವಿಭಜಕ ಶಕ್ತಿಗಳ ವಿರುದ್ಧ ಜಾಗೃತರಾಗಿ: ಸಚಿನ್ ಕುಳಗೇರಿ
ಅಂಬೇಡ್ಕರ್ ತತ್ವಗಳು ವಿಕಸಿತ ಭಾರತ ನಿರ್ಮಾಣಕ್ಕೆ ದಾರಿದೀಪ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ