ಹೊಸಪೇಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಕುರ್ಚಿ ಕದನದಲ್ಲಿ ಯಾವುದೇ ಸಂದರ್ಭದಲ್ಲಿ ಬೀಳಲಿದೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಜರುಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಬಿಹಾರ ಮಾದರಿಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ಒದಗಿಸಲು ಸಂಘಟನೆಗೆ ಒತ್ತು ನೀಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ವಾಲ್ಮೀಕಿ ನಿಗಮದ ₹187 ಕೋಟಿ ಹಗರಣ, ಮುಡಾ ಹಗರಣ, ವಕ್ಫ್ ಕಾಯ್ದೆ ವಿರುದ್ಧ ಬಿಜೆಪಿ ಗಂಭೀರ ಹೋರಾಟ ನಡೆಸಿದೆ. ಇದರ ಪರಿಣಾಮ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಎಂ ಮುಡಾದಿಂದ ಪಡೆದ ಸೈಟುಗಳನ್ನು ಹಿಂದಿರುಗಿಸಿದರು ಎಂದರು.
ರಾಜ್ಯ ಸರ್ಕಾರದ ಯೋಜನೆಗಳಿಂದ ಜನತೆ ಗೊಂದಲದಲ್ಲಿ ಸಿಲುಕಿದ್ದಾರೆ. ಒಂದು ಕಡೆ ಬಿಟ್ಟಿ ಯೋಜನೆಗಳನ್ನು ನೀಡುವ ಸರ್ಕಾರ ಮತ್ತೊಂಡು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಎಲ್ಲ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಜನರ ಸುಲಿಗೆ ಮಾಡುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲ. ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಗಳಿಲ್ಲ. ಮೆಕ್ಕೆಜೋಳಕ್ಕೆ ಕೇಂದ್ರ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದರು.ತುಂಗಭದ್ರಾ ಜಲಾಶಯದಿಂದ ರೈತರ ಎರಡನೇ ಬೆಳೆಗೆ ನೀರು ನೀಡುತ್ತಿಲ್ಲ. ಜಲಾಶಯದ ಗೇಟುಗಳ ಅಳವಡಿಕೆ ಕೂಡ ವಿಳಂಬ ಮಾಡುತ್ತಿದೆ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬಿಜೆಪಿ ಮುಖಂಡ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಈಗಾಗಲೇ ಬಿಹಾರದಲ್ಲಿ ಕೇಂದ್ರ ಚುನಾವಣೆ ಆಯೋಗ ನಡೆಸಿದ ಮತಪಟ್ಟಿ ಪರಿಷ್ಕರಣೆಯಲ್ಲಿ 67 ಲಕ್ಷ ಮತದಾರರನ್ನು ಪತ್ತೆ ಹಚ್ಚಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ 12 ರಾಜ್ಯಗಳ ಮತಪಟ್ಟಿ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ, ಮುಖಂಡ ಸಂದೀಪ್ ಸಿಂಗ್ ಮಾತನಾಡಿದರು. ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ್, ಉಪಾಧ್ಯಕ್ಷ ಬಿ. ಜೀವರತ್ನಂ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ ಜೀರೆ, ಬಲ್ಲಾಹುಣ್ಸಿ ರಾಮಣ್ಣ, ಕಿಚಿಡಿ ಕೊಟ್ರೇಶ್, ಶಂಕರ್ ಮೇಟಿ, ಕೆ.ಎಸ್. ರಾಘವೇಂದ್ರ, ಬಸವರಾಜ ನಾಲತ್ವಾಡ, ರೇವಣಸಿದ್ದಪ್ಪ, ಜಗದೀಶ್ ಕಾಮಟಗಿ, ಮಧುರಚನ್ನ ಶಾಸ್ತ್ರಿ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.