ನರೇಗಲ್ಲ: ಮನುಷ್ಯ ಜೀವನದಲ್ಲಿ ಹಿಮಾಲಯದೆತ್ತರಕ್ಕೆ ಬೆಳೆದರೂ ಅವನ ಕಾಲು ನೆಲದ ಮೇಲಿರಬೇಕು. ಅಂದರೆ ಅವನ ವ್ಯಕ್ತಿತ್ವಕ್ಕೊಂದು ಅರ್ಥ ಬರುತ್ತದೆ. ಬದಲಾಗಿ ಬೆಳೆದೆನೆಂದು ಅಹಂಕಾರ ತೋರಿದರೆ ಅಂದೇ ಅವನ ಅವನತಿ ಪ್ರಾರಂಭವಾಗುತ್ತದೆ. ಆದ್ದರಿಂದ ನೀವುಗಳೆಲ್ಲ ವಿನಯವಂತಿಕೆಯನ್ನು, ವಿಧೇಯತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಿರಿ ಎಂದು ಅಗ್ನಿಶಾಮಕ ಡಿಐಜಿಪಿ ರವಿ ಚನ್ನಣ್ಣವರ ತಿಳಿಸಿದರು.
ಜೀವನದಲ್ಲಿ ಬಡತನ. ಸಿರಿತನ ಎಂದಿಗೂ ಶಾಶ್ವತವಲ್ಲ. ನಿಮ್ಮ ಮುಂದೆ ಗುರಿಯಿರಬೇಕು, ಮನದಲ್ಲಿ ಅದನ್ನು ಸಾಧಿಸುವ ಛಲ ಇರಬೇಕು. ಅದರೊಂದಿಗೆ ಪ್ರಾಮಾಣಿಕ ಪರಿಶ್ರಮವೂ ಬೆರೆತರೆ ನಿಮ್ಮನ್ನು ಹಿಡಿದವರೇ ಇಲ್ಲ. ಈಗ ನಿಮ್ಮ ಜೀವನದ ತುಂಬ ಬರೀ ಶಿಕ್ಷಣದ ಕನಸೇ ತುಂಬಿರಬೇಕು. ಅದನ್ನು ನನಸು ಮಾಡಿಕೊಳ್ಳುವತ್ತ ಲಕ್ಷ್ಯವಹಿಸಿ ನೀವುಗಳು ತಪಸ್ಸಿನಂತೆ ಅಧ್ಯಯನವನ್ನು ಮಾಡಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಸಾನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿ, ನಿಶ್ಚಿತ ಗುರಿಯೊಂದಿಗೆ ನಿಶ್ಚಿತ ಮನಸ್ಸಿಟ್ಟು ಅಭ್ಯಾಸ ಮಾಡಿ. ಸೋಲು ನಿಮ್ಮ ಬಳಿ ಸುಳಿಯದು ಎಂದರು.ಮಿಥುನ್ ಪಾಟೀಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಎಸ್. ಕಳಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು. ಎಂ.ಎಸ್. ದಢೇಸೂರಮಠ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್. ಆರ್. ಗೌಡರ, ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಉಪಸ್ಥಿತರಿದ್ದರು. ಡಾ. ಕಲ್ಲಯ್ಯ ಹಿರೇಮಠ, ಮುಖ್ಯ ಶಿಕ್ಷಕ ಬಿ.ಬಿ. ಕುರಿ ನಿರ್ವಹಿಸಿದರು.