ಶಿವಮೊಗ್ಗ: ರಕ್ತ ಚೆಲ್ಲಿಯಾದರೂ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗವನ್ನು ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಜಾಗವನ್ನು ಈದ್ಗಾ ಮೈದಾನವೆಂದು ಯಾರೂ ಕರೆಯಬಾರದು. ಇದು ವಕ್ಫ್ ಮಂಡಳಿಗೆ ಸೇರಿದೆ ಎಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. ಅದರ ಬದಲು ಇದು ಸೂಡಾಕ್ಕೆ ಸೇರಿದ ಜಾಗವಾಗಿದೆ. ಇಲ್ಲಿ ಆಟದ ಮೈದಾನ ಅಥವಾ ಪಾರ್ಕ್ ನಿರ್ಮಿಸಬಹುದೇ ಹೊರತು ನಮಾಜ್ ಮಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಯಾವ ಅಪ್ಪ ಅಮ್ಮನೂ ಇಲ್ಲ. ವಿಳಾಸವೂ ಇಲ್ಲ. ಅಜರ್ ಮೊಹಲ್ ಎಂದಿದೆ. ಅದು ಎಲ್ಲಿದೆಯೋ ಗೊತ್ತಿಲ್ಲ. ಅದಕ್ಕೂ ಈ ಆಟದ ಮೈದಾನಕ್ಕೂ ಸಂಬಂಧವೇ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ಧ ಕಿಡಿ ಕಾರಿದ ಈಶ್ವರಪ್ಪ, ನನ್ನ ಮೇಲೆ ಯಾವುದೇ ಆಧಾರಗಳಿಲ್ಲದಿದ್ದರೂ ಸತ್ಯ ಮಾತಾಡಿದ್ದರೂ ಸುಮೊಟೊ ಪ್ರಕರಣ ದಾಖಲಿಸಿಕೊಂಡ್ರಿ. ಈಗ ಈ ಜಾಗದಲ್ಲಿ ಬೇಲಿ ಹಾಕಲು ಬಿಟ್ಟಿದ್ದೀರಾ. ನೀವು ಐಪಿಎಸ್ ಓದಿರಬಹುದು. ಕಾಂಗ್ರೆಸ್ ಚೇಲಾಗಳಂತೆ ವರ್ತಿಸಬೇಡಿ. ನ್ಯಾಯದ ಪರ ಮಾತಾಡಿ. ನಾವು ದನ ಕಾಯಲು ಬಂದಿಲ್ಲ. ಜಿಲ್ಲಾಧಿಕಾರಿಗಳಾಗಲೀ, ಜಿಲ್ಲಾ ರಕ್ಷಣಾಧಿಕಾರಿಗಳೇ ಆಗಲಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಡಿಸಿ ಎದುರಿನಲ್ಲಿಯೇ ಎಸ್‌ಪಿ ಮಿಥುನ್ ಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡರು.ರಾಷ್ಟ್ರ ಭಕ್ತ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಶ್ರೀಕಾಂತ್ ಮುಂತಾದವರು ಮಾತನಾಡಿ, ನಮ್ಮ ರಕ್ತ ಕುದಿಯುತ್ತಿದೆ. ರಕ್ತ ಕೊಟ್ಟೇವು. ಈ ಜಾಗ ಬಿಡುವುದಿಲ್ಲ. ಇದು ಹಿಂದೂಗಳ ಜಾಗ. ಕದ್ದು ಮುಚ್ಚಿ ರಾತ್ರೋ ರಾತ್ರಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಸಮಯದಲ್ಲಿ ಕೆಲವೇ ಅಧಿಕಾರಿಗಳು ಈ ಜಾಗವನ್ನು ವಕ್ಫ್ ಆಸ್ತಿಯೆಂದು ಬರೆದಿದ್ದಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಆ ಸಮಯದಲ್ಲಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೆಕು. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ವಕೀಲ ವಾಗೀಶ್, ಶ್ರೀಕಾಂತ್, ಮಹಾಲಿಂಗ ಶಾಸ್ತ್ರಿ, ಮೋಹನ್ ಜಾಧವ್, ರಾಜು, ಕಾಚಿನಕಟ್ಟೆ ಸತ್ಯನಾರಾಯಣ, ರವಿ, ಬಾಲು ಮುಂತಾದವರು ಇದ್ದರು.
----ಎಸ್ಪಿಗೆ ತರಾಟೆಗೆ ತೆಗೆದುಕೊಂಡ ಈಶ್ವರಪ್ಪ
ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನ ವಿವಾದ ಸಂಬಂಧ ಪ್ರತಿಭಟನೆ ವೇಳೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಶನಿವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನ ವಿವಾದ ಸಂಬಂಧ ಜಿಲ್ಲಾಧಿಕಾರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆರಳಿದ ಈಶ್ವರಪ್ಪನವರು, ನಿಮ್ಮ ಇಲಾಖೆ ಬದುಕಿದೆಯೋ ಇಲ್ಲವೊ ಗೊತ್ತಿಲ್ಲ. ರೈಲ್ವೆ ಇಲಾಖೆಯ ಕಂಬಿ ತಂದು ಮೈದಾನಕ್ಕೆ ಬೇಲಿ ಹಾಕಿದ್ದರು. ಅವರನ್ನು ಈತನಕ ಬಂಧಿಸಿಲ್ಲ. ಮತ್ಯಾಕೆ ನೀವು ಎಸ್ಪಿ ಆಗಿದ್ದೀರ ? ನಾವೇನು ಇಲ್ಲಿ ದನ ಕಾಯೋಕೆ ಬಂದಿದ್ದೇವಾ? ಈ ಹಿಂದೆ ನಾನು ಭಾಷಣ ಮಾಡಿದ್ದಕ್ಕೆ ಏಕೆ ಪ್ರಕರಣ ದಾಖಲಿಸಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಆಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮನವಿ ನೀಡುವಂತೆ ತಿಳಿಸಿದರು. ಇದರಿಂದ ಕೆರಳಿದ ಈಶ್ವರಪ್ಪ, ಮನವಿ ಕೊಡಬೇಕು ಎಂದು ನೀವು ಹೇಳಬೇಕಾ? ನಿಮಗೆ ಕಣ್ಣು ಕಾಣುವುದಿಲ್ಲವೆ?. ನಾನು ವಾದ ಮಾಡಲು ಇಷ್ಟ ಪಡಲ್ಲ, ನಾನು ಮನವಿ ಕೊಡುವುದಾದರೆ ನೀವ್ಯಾಕೆ ಇರಬೇಕು. ನೀವು ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.