ಸರ್ಕಾರ ಬದಲಾದರೂ ಅಭಿವೃದ್ಧಿಯ ತೇರು ನಿಲ್ಲಬಾರದು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ

KannadaprabhaNewsNetwork |  
Published : Oct 20, 2024, 02:09 AM ISTUpdated : Oct 20, 2024, 12:16 PM IST
ಚಿಕ್ಕಮಗಳೂರಿನ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಸದಸ್ಯರುಗಳಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಸರ್ಕಾರ ಬದಲಾದರೂ ಅಭಿವೃದ್ಧಿಯ ತೇರು ನಿಲ್ಲಬಾರದು. ಸಂಘಟಿತ ರೂಪದಲ್ಲಿ ಪ್ರಯತ್ನ ಮಾಡಿ ವಿಶೇಷ ಅನುದಾನ ತರಬೇಕಾಗುತ್ತದೆ. ಇದಕ್ಕಾಗಿ ಆಡಳಿತ ಪಕ್ಷದ ಜೊತೆಗೆ ಸಹಕಾರವನ್ನು ಕೊಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

  ಚಿಕ್ಕಮಗಳೂರು : ಸರ್ಕಾರ ಬದಲಾದರೂ ಅಭಿವೃದ್ಧಿಯ ತೇರು ನಿಲ್ಲಬಾರದು. ಸಂಘಟಿತ ರೂಪದಲ್ಲಿ ಪ್ರಯತ್ನ ಮಾಡಿ ವಿಶೇಷ ಅನುದಾನ ತರಬೇಕಾಗುತ್ತದೆ. ಇದಕ್ಕಾಗಿ ಆಡಳಿತ ಪಕ್ಷದ ಜೊತೆಗೆ ಸಹಕಾರವನ್ನು ಕೊಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಶನಿವಾರ ನಗರದ ಬೇಲೂರು ರಸ್ತೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ವಿವೇಕ ಯೋಜನೆಯಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಯಾವುದಾದರೂ ಎರಡು ಶಾಲೆಗಳ ಕಾಮಗಾರಿ ಪಟ್ಟಿ ಕೊಡುವಂತೆ ಕೇಳಿದ್ದರು. 

ಆಗ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತಲಾ ಒಂದು ಕೋಟಿ ರು.ಅನುದಾನ ಕೋರಿ ಪ್ರಸ್ತಾವನೆ ಕಳುಹಿಸಿದ್ದೆವು. ಅದಕ್ಕೆ ಮಂಜೂರಾತಿ ದೊರೆತಿತ್ತು. ತದ ನಂತರ ತಮ್ಮಯ್ಯ ಅವರು ಶಾಸಕರಾದ ನಂತರ ಟೆಂಡರ್ ಕರೆದು ಇಂದು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಸರ್ಕಾರಿ ಜೂನಿಯರ್ ಕಾಲೇಜು ಕಳೆದ ನಾಲ್ಕು ದಶಕಗಳಿಂದ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಪೈಪೋಟಿ ಕೊಡುತ್ತಾ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ಪ್ರವೇಶದ ಸಂದರ್ಭದಲ್ಲಿ ಖಾಸಗಿ ಕಾಲೇಜಿನ ರೀತಿಯಲ್ಲಿ ಈ ಕಾಲೇಜಿನಲ್ಲೂ ಕೂಡ ಬೇಡಿಕೆ ಹೆಚ್ಚಾಗುತ್ತದೆ. ಹಂತ ಹಂತವಾಗಿ ಆ ಕಾಲೇಜಿನ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿಗೆ ಒಂದು ಕೋಟಿ ರು. ನೀಡಲಾಗಿದೆ. ಕಳಸಾಪುರ, ಸಖರಾಯಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿರುವ ಕಾಲೇಜುಗಳಿಗೆ ಒಂದಲ್ಲಾ ಒಂದು ರೀತಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದೇವೆ ಎಂದು ಹೇಳಿದರು.ಶಿಕ್ಷಣವಿಲ್ಲದೆ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣವನ್ನು ಮರೆತು ದೇಶ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ತುಂಬುವ ಕೆಲಸ ಆಗಬೇಕು. ಬುದ್ಧಿವಂತನಾಗಿದ್ದು ನೈತಿಕ ಮೌಲ್ಯ, ಪ್ರಾಮಾಣಿಕತೆ ಇಲ್ಲವಾದರೆ ಸಾರ್ಥಕತೆ ಬರುವುದಿಲ್ಲ ಎಂದರು

.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ, ಖಾಸಗಿ ಕಾಲೇಜುಗಳಿಗೆ ಸವಾಲೊಡ್ಡುವ ಗುಣಮಟ್ಟದ ಉಪನ್ಯಾಸಕರು ಇದ್ದಾರೆ. ಇಲ್ಲಿ ರೈತರ ಮಕ್ಕಳು ಸೇರಿದಂತೆ ಹಲವು ಅಧಿಕಾರಿಗಳ ಮಕ್ಕಳೂ ಇದ್ದಾರೆ. ಅಗತ್ಯ ಇರುವ ಎಲ್ಲಾ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಂದರ್ಭವಾಗಿರುತ್ತದೆ. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ಎಚ್ಚರಿಕೆಯಿಂದ ಭವಿಷ್ಯ ರೂಪಿಸಿಕೊಳ್ಳಬೇಕು. ವಿವೇಕಾನಂದರ ಹೆಸರಿನ ಯೋಜನೆಯಲ್ಲಿ ಇಲ್ಲಿ ನೂತನ ಕೊಠಡಿ ನಿರ್ಮಾಣ ವಾಗುತ್ತಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವೇಕಾನಂದರ ರೀತಿ ಸಂಸ್ಕಾರಯುತವಾಗಿ, ಅಸಾಮಾನ್ಯರಾಗಿ ರೂಪುಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಬದುಕಿನಲ್ಲಿ ಬಹಳ ಮುಖ್ಯ, ಆರೋಗ್ಯ ಚೆನ್ನಾಗಿದ್ದರೆ ಒಳ್ಳೆಯ ಶಿಕ್ಷಣ ಗಳಿಸಲು ಸಾಧ್ಯವಾಗುತ್ತದೆ. ಅವೆರಡು ಬರೀ ಉಳ್ಳವರ ಪಾಲಾಗಬಾರದು. ಹಳ್ಳಿಗಳಿಂದ ಬಂದ, ರೈತ ಕುಟುಂಬದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಶೇ.100 ರಷ್ಟು ಸಿಗುತ್ತದೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸೌಲಭ್ಯಗಳ ಕೊರತೆ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಪೂರಕವಾಗಿ ಉತ್ತಮ ಸವಲತ್ತುಗಳನ್ನು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್‌, ನಗರಸಭಾ ಸದಸ್ಯರಾದ ಮಂಜುಳಾ, ಗೋಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟಾನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಗವಿರಂಗಪ್ಪ, ಕಾಲೇಜು ಪ್ರಾಂಶುಪಾಲ ವಿರೂಪಾಕ್ಷಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು