ಹುಬ್ಬಳ್ಳಿ: ಅರಣ್ಯ ಭೂಮಿ ಒತ್ತುವರಿ ಮಾಡಿದವರು ಪ್ರಭಾವಿಗಳಾಗಿದ್ದರೂ ಕಾರ್ಯಾಚರಣೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ. ಒತ್ತುವರಿ ಭೂಮಿಯಲ್ಲಿ ಬಡವರು ಜೀವಿಸುತ್ತಿದ್ದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಒತ್ತುವರಿ ಭೂಮಿ ತೆರವುಗೊಳಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಧಾರವಾಡ ಅರಣ್ಯ ವೃತ್ತದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಒತ್ತುವರಿ ಅರಣ್ಯ ಭೂಮಿಯನ್ನು ಎ ಹಾಗೂ ಬಿ ವರ್ಗಗಳನ್ನಾಗಿ ವರ್ಗೀಕರಿಸಿ ತೆರವು ಮಾಡಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಬೇಕು. ಕೆಲವೆಡೆ ಕಂದಾಯ ಇಲಾಖೆ ಭೂಮಿ ಇರುವ ಸಾಧ್ಯತೆ ಇದ್ದು, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಬೇಕು ಎಂದು ಹೇಳಿದರು.ಧಾರವಾಡ ಅರಣ್ಯ ವೃತ್ತ ವ್ಯಾಪ್ತಿಯಲ್ಲಿ 3 ಎಕರೆಗಿಂತ ಕಡಿಮೆ ಇರುವ 239 ಪ್ರಕರಣಗಳಿದ್ದು, ಧಾರವಾಡದಲ್ಲಿ 11 ಪ್ರಕರಣಗಳಿವೆ. ಗದಗನಲ್ಲಿ ಒಟ್ಟು ಮೂರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಗಳಿದ್ದವು. ಅವುಗಳಲ್ಲಿ ಎರಡು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನು ಕಲಘಟಗಿಯಲ್ಲಿ ಮೂರು ಎಕರೆ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಧಾರವಾಡ ಅರಣ್ಯ ವಿಭಾಗದಲ್ಲಿ 3,100 ಕೆಜಿ ಶ್ರೀಗಂಧವನ್ನು ಈಗಾಗಲೇ ಹರಾಜು ಮಾಡಲಾಗಿದೆ. ಇನ್ನೂ 6,600 ಕೆಜಿ ಶ್ರೀಗಂಧ ಉಳಿದಿದೆ. ಅದೇ ರೀತಿ 91.13 ಕೆಜಿ ಶ್ರೀಗಂಧದ ಎಣ್ಣೆ ವಶಕ್ಕೆ ಪಡೆದಿದ್ದು, ಶೀಘ್ರವೇ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದರಿಂದ ಅಂದಾಜು ₹7-8 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರ ಖಂಡ್ರೆ ಇವುಗಳನ್ನು ಕಂದಾಯ ಇಲಾಖೆಯೊಂದಿಗೆ ಪರಿಶೀಲಿಸಿ ಕ್ರಮವಹಿಸಬೇಕು ಎಂದರು.ಅರಣ್ಯ ಪ್ರದೇಶ ಭಾಗದಲ್ಲಿ ಪ್ರಾಣಿಗಳಿಂದ ರೈತರ ಬೆಳೆ ಹಾನಿ ಆಗುತ್ತಿರುವ ದೂರಗಳಿವೆ. ಸಮರ್ಪಕವಾಗಿ ಹಾನಿಯಾದ ರೈತರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು. ಅಲ್ಲದೇ, ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮ ವಿಸ್ತರಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.