ಪಾಲಕರು ಆಂಗ್ಲ ಮಾಧ್ಯಮಕ್ಕೆ ಮಾರುಹೋಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದಾಗ ಕನ್ನಡ ಭಾಷಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ನ್ಯಾಯವಾದಿ ಎಂಎಂಜೆ ಶರತ್ ಚಂದ್ರ ಅಭಿಪ್ರಾಯಪಟ್ಟರು.
ಕೊಟ್ಟೂರು: ಪಾಲಕರು ಆಂಗ್ಲ ಮಾಧ್ಯಮಕ್ಕೆ ಮಾರುಹೋಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದಾಗ ಕನ್ನಡ ಭಾಷಾಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ನ್ಯಾಯವಾದಿ ಎಂ.ಎಂ.ಜೆ. ಶರತ್ ಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಕಸಾಪ ತಾಲೂಕು ಘಟಕದ ವತಿಯಿಂದ ಶ್ರೀ ಕೋಲಶಾಂತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯವಹಾರ ದೃಷ್ಟಿಯಿಂದ ಹಲವು ಭಾಷೆಗಳನ್ನು ಕಲಿತರೂ ಮಾತೃಭಾಷೆಯನ್ನು ಮರೆಯದೆ ಬಳಸಬೇಕು, ಬೆಳೆಸಬೇಕು ಎಂದರು.
ಪತ್ರಕರ್ತ ಎಸ್.ಎಂ. ಗುರುಪ್ರಸಾದ್ ಮಾತನಾಡಿ, ಮೂಲ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕೆಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಎಂದರು.
ಶಿಕ್ಷಕರನ್ನು ಇತರೆ ಚಟುವಟಿಕೆಗಳಿಗೆ ನಿಯೋಜಿಸದೆ ಬೋಧನೆಗೆ ಮಾತ್ರ ಸೀಮಿತಗೊಳಿಸಿದಾಗ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪುಸ್ತಕಗಳ ಹೊರೆ ಕಡಿಮೆ ಮಾಡಿದಾಗ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.
ನಿವೃತ್ತ ಗ್ರಂಥಪಾಲಕ ಎಸ್.ಡಿ. ಈರಗಾರ, ಮುಖ್ಯ ಶಿಕ್ಷಕ ಎ.ಎಸ್. ವೀರೇಶ್ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ್, ಜೆಸಿಐ ಕೊಟ್ಟೂರು ಕಾಟನ್ ಮಾಜಿ ಅಧ್ಯಕ್ಷ ಅಂಗಡಿ ಪಂಪಾಪತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ತಾಲೂಕು ಘಟಕಾಧ್ಯಕ್ಷ ದೇವರಮನಿ ಕೊಟ್ರೇಶ್ ವಹಿಸಿದ್ದರು. ಕವಿಗಳು ಹಾಗೂ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳಾದ ಅರವಿಂದ ಬಸಾಪುರ, ಎಸ್. ರಾಜಣ್ಣ, ಈಶ್ವರಪ್ಪ ತುರಕಾಣಿ, ಹೊನ್ನಮ್ಮ ತುರಕಾಣಿ, ಕೆ. ಶಶಿಕಲಾ, ಪದ್ಮ ಜಾಗಟಗೆರೆ, ರಾಜೇಂದ್ರಗೌಡ ಹಾಗೂ ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.