ಖಾಜಾಮೈನುದ್ದೀನ್ ಪಟೇಲ್
ಕಮಲದ ಕೋಟೆಯಲ್ಲಿ ಕೈ ರಣತಂತ್ರಕ್ಕೆ ಕಮಲ ಮುದುಡಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ 16 ಸ್ಥಾನಗಳನ್ನು (17 ಸ್ಥಾನಗಳಲ್ಲಿ ಒಬ್ಬ ಸದಸ್ಯನ ನಿಧನರಾಗಿದ್ದಾರೆ) ಬಾಚಿಕೊಂಡರೂ ಪಾಲಿಕೆ ಗದ್ದುಗೆ ಏರಲು ವಿಫಲವಾಗಿದೆ. ಹೀಗಾಗಿ ಬಿಜೆಪಿ ಕೈಗೆ ಬಂದ ಕಾಂಗ್ರೆಸ್ ಪಾಲಾಗಿದೆ.
ಆದರೆ, ಮಹಾನಗರ ಪಾಲಿಕೆಯ ೧೦ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರೂ ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರ ಸದಸ್ಯರು, ಎಐಎಂಐಎಂ ಹಾಗೂ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪರವಾಗಿದ್ದರಿಂದ ಗೆಲವು ಕೂಡ ಸರಳವಾಯಿತು. ಈ ಹಿಂದೆಯೂ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಅನೇಕ ಬಾರಿ ಮೇಯರ್ ಹುದ್ದೆಯಿಂದ ವಂಚಿತವಾಗಿತ್ತು. ಈಗ ಅದೇ ಇತಿಹಾಸ ಮರುಕಳಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಹೆಣೆದ ರಣತಂತ್ರಕ್ಕೆ ಕಮಲ ಪಾಳಯಕ್ಕೆ ಈ ಬಾರಿಯೂ ಬಿಜೆಪಿ ಪಾಲಿಕೆ ಗದ್ದುಗೆ ಏರಲು ವಿಫಲವಾಗಿದೆ.
ತಡವಾಗಿ ಎಚ್ಚೆತ್ತುಕೊಂಡ ಬಿಜೆಪಿ:
ಪಾಲಿಕೆ ಸದಸ್ಯ ಚುನಾವಣೆಯಲ್ಲಿ ಯಾವ ಪಕ್ಷವೂ ಸ್ಪಷ್ಟಬಹುಮತ ಬಾರದ ಕಾರಣ ಮೇಯರ್ ಹುದ್ದೆ ಅಲಂಕರಿಸಲು ಪಕ್ಷೇತರರ ಬೆಂಬಲ ಅಗತ್ಯವಾಗಿತ್ತು. ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಶೋಕ ನ್ಯಾಮಗೌಂಡ, ಅಲ್ತಾಫ್ ಇಟಗಿ, ವಿಮಲಾ ರಫೀಕ್‌ಅಹ್ಮದ್ ಖಾಣೆ, ಸುಮೀತ್ರಾ ರಾಜು ಜಾಧವ, ನಿಷಾತ್ ಹೈದರಲಿ ನದಾಫ್ ಹಾಗೂ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಏಕೈಕ ಸದಸ್ಯ ರಾಜು ಚವ್ಹಾಣ, ಎಐಎಂಎಐಎಂ ಪಕ್ಷದಿಂದ ಆಯ್ಕೆಯಾಗಿದ್ದ ಸುಫೀಯಾ ಅಬ್ದುಲ್ ರಹಿಮಾನ ವಾಟಿ, ರಿಜ್ವಾನಾಬಾನು ಕೈಸರ್ ಇನಾಮದಾರ ಹೀಗೆ ೮ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ಪರಿಣಾಮ ಹಾಗೂ ಸಚಿವ ಡಾ.ಎಂ.ಬಿ. ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ಅವರ ಪ್ರಾತಿನಿಧಿ ಮತವೂ ಕಾಂಗ್ರೆಸ್‌ಗೆ ಬಿದ್ದ ಪರಿಣಾಮ ಕೈ ಗೆಲುವು ಸುಲಭವಾಯಿತು.