ಕನ್ನಡ ವಿವಿಗೆ ಅನುದಾನ ದೊರೆಯಲಿ: ಡಾ. ಬಿಕೆ ರವಿ

KannadaprabhaNewsNetwork | Updated : Jan 10 2024, 01:23 PM IST

ಸಾರಾಂಶ

ನಾಡಿನ ಅಭಿವೃದ್ಧಿಗೆ ಕನ್ನಡ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ಹಾಗಾಗಿ ಸರ್ಕಾರಕ್ಕೆ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಿದರೆ ಕನ್ನಡ ವಿವಿಗೆ ಅನುದಾನ ದೊರೆಯುವ ಅವಕಾಶ ಇದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ತಿಳಿಸಿದರು.

ಹೊಸಪೇಟೆ: ನಾಡಿನ ಅಭಿವೃದ್ಧಿಗೆ ಕನ್ನಡ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ಹಾಗಾಗಿ ಸರ್ಕಾರಕ್ಕೆ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಿದರೆ ಕನ್ನಡ ವಿವಿಗೆ ಅನುದಾನ ದೊರೆಯುವ ಅವಕಾಶ ಇದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ- 32ರ ಪ್ರಯುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಮಂಟಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 51 ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಷ್ಟ್ರದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಕೀರ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಜನವಾಗಿದೆ. ಗ್ರಾಮೀಣ ಮತ್ತು ಇತರ ಬೇರೆ ಭಾಗಗಳ ಜ್ಞಾನವನ್ನು ದಾಖಲೆ ಮಾಡುವಂತಹ ಹಾಗೂ ನಾಡಿನ ಅನೇಕ ವಿಷಯಗಳ ಬಗ್ಗೆ ಅಧ್ಯಯನ ಮಾಡುವ ವಿನೂತನ ವಿವಿಯಾಗಿದೆ. 

ಇಲ್ಲಿನ ವಿವಿಧ ವಿಭಾಗಗಳು, ಸಂಶೋಧನೆಗಳು ನೋಡಿದರೆ ಇದು ಕೇವಲ ಪದವಿ, ಸ್ನಾತಕೋತ್ತರ ಪದವಿ ನೀಡುವ ಅಥವಾ ಪಾಠ ಬೋಧಿಸುವ ವಿವಿಯಲ್ಲ. ದೇಶದಲ್ಲೇ 1600 ಪುಸ್ತಕಗಳನ್ನು ಪ್ರಕಟಣೆ ಮಾಡಿದೆ. ಜತೆಗೆ ಭಾಷೆ, ಹಸ್ತಪ್ರತಿ, ಲಿಪಿಗಳು, ಬುಡಕಟ್ಟು ಅಧ್ಯಯನ, ಸಾಮಾಜಿಕ ಕ್ಷೇತ್ರ, ಸಂಸ್ಕೃತಿ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಸಂಶೋಧನೆ ಕೈಗೊಂಡಿದೆ ಎಂದರು.

ಹಿರಿಯ ಇತಿಹಾಸತಜ್ಞ ಪ್ರೊ. ಲಕ್ಷ್ಮಣ್‌ ತೆಲಗಾವಿ ಮಾತನಾಡಿ, ಪ್ರತಿಯೊಂದು ವಿಶ್ವವಿದ್ಯಾಲಯಕ್ಕೆ ಪ್ರಸಾರಾಂಗ ಮತ್ತು ಗ್ರಂಥಾಲಯ ಎರಡು ಕಣ್ಣುಗಳು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ದೃಷ್ಟಿಯಂತೆ ಕೆಲಸ ಮಾಡುವರು. ಕನ್ನಡ ವಿಶ್ವವಿದ್ಯಾಲಯದ ಪುಸ್ತಕ ಸಂಸ್ಕೃತಿಗೆ ಸಾವಿಲ್ಲ. 

ಗ್ರಂಥಾಲಯದ ಮಹತ್ವ ಹಿಂದೆಯೂ ತಗ್ಗಿಲ್ಲ, ಮುಂದೆಯೂ ತಗ್ಗಲ್ಲ. ಕನ್ನಡ ವಿವಿ ಗ್ರಂಥಾಲಯವು ಅತ್ಯಂತ ಅಪರೂಪದ ಪುಸ್ತಕಗಳನ್ನು ಒಳಗೊಂಡಿದೆ. ಪ್ರಸಾರಾಂಗವು ಅನುವಾದ ಸಾಹಿತ್ಯ, ವಿಶ್ವಕೋಶ, ಹೊರನಾಡು ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಕುರಿತ ಕೃತಿಗಳನ್ನು ಪ್ರಕಟಿಸುವ ಕಡೆ ಕಾರ್ಯೋನ್ಮುಖ ಆಗಬೇಕಿದೆ ಎಂದರು.

ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ೧೦೦ ವರ್ಷಗಳಲ್ಲಿ ಮಾಡಿರುವ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯ ೩೨ ವರ್ಷಗಳಲ್ಲಿ ಮಾಡಿದೆ. ಪುಸ್ತಕಗಳು ನಮ್ಮ ಅಹಂ ಕಳೆಯುತ್ತವೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ೫೧ ಪುಸ್ತಕಗಳ ಕುರಿತು ಡಾ. ಜಾಜಿ ದೇವೇಂದ್ರಪ್ಪ ಮತ್ತು ಡಾ. ಜೆ. ಕೃಷ್ಣ ಅವರು ಪರಿಚಯ ಮಾಡಿಕೊಟ್ಟರು. ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜಾ ಇಂ. ಹಿರೇಮಠ ಸ್ವಾಗತಿಸಿದರು. ಸಹಾಯಕ ಕುಲಸಚಿವ ಡಾ. ಎಂ. ಶಿವಪ್ರಕಾಶ್, ಡಾ. ಮೋಹನ್‌ ನಿರ್ವಹಿಸಿದರು. ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ ಇದ್ದರು.

Share this article