ಉತ್ತಮ ಆರೋಗ್ಯಕ್ಕೆ ಯೋಗ ರಾಮಬಾಣ: ಕೆ.ಎಸ್.ಆನಂದ್

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಆಯುಷ್ ಇಲಾಖೆ ಚಿಕ್ಕಮಗಳೂರು ಅವರ ಸಹಯೋಗದಲ್ಲಿ ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ ದೈಹಿಕ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕ ಆನಂದ್‌ ಅಡ್ಡ ಪರಿಣಾಮಗಳು ಇಲ್ಲದ ಆಯುರ್ವೇದಿಕ್ ಚಿಕಿತ್ಸೆ ಜೊತೆ ಒತ್ತಡ ನಿವಾರಣೆಯಾಗಲು ವಿಶ್ವ ಮಾನ್ಯತೆ ಪಡೆದಿರುವ ಯೋಗ ರಾಮಬಾಣವಾಗಿದೆ ಎಂದರು.

- ಲಯನ್ಸ್ ಕ್ಲಬ್ ನಲ್ಲಿ ಸರ್ಕಾರಿ ದೈಹಿಕ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಯೋಗ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಕಡೂರು

ಅಡ್ಡ ಪರಿಣಾಮಗಳು ಇಲ್ಲದ ಆಯುರ್ವೇದಿಕ್ ಚಿಕಿತ್ಸೆ ಜೊತೆ ಒತ್ತಡ ನಿವಾರಣೆಯಾಗಲು ವಿಶ್ವ ಮಾನ್ಯತೆ ಪಡೆದಿರುವ ಯೋಗ ರಾಮಬಾಣವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.ಆಯುಷ್ ನಿರ್ದೇಶನಾಲಯ, ಬೆಂಗಳೂರು, ಆಯುಷ್ ಇಲಾಖೆ ಚಿಕ್ಕಮಗಳೂರು ಅವರ ಸಹಯೋಗದಲ್ಲಿ ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ ದೈಹಿಕ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ವೈದ್ಯ ಪದ್ಧತಿಯಲ್ಲಿ ಯೋಗ, ಪ್ರಾಣಯಾಮ ಬಳಕೆಯಲ್ಲಿದ್ದು ಇತ್ತೀಚೆಗೆ ಆಯುಷ್ ಇಲಾಖೆ ಔಷಧಿಗಳತ್ತ ಜನರು ಒಲವು ತೋರುತ್ತಿದ್ದಾರೆ. ಆಯುಷ್ ಪದ್ಧತಿ ಚಿಕಿತ್ಸೆಯಿಂದ ಅನೇಕ ರೋಗಗಳನ್ನು ಗುಣಪಡಿಸಲಾಗುತ್ತಿದೆ ಎಂದರು.

ಪ್ರಾಚೀನ ವಿದ್ಯೆಯಾದ ಯೋಗದಿಂದ ಭಾರತ ವಿಶ್ವ ಗುರುವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರತಿ ಶಾಲೆಯಲ್ಲೂ ಯೋಗ ಕಲಿಸುವ ಮೂಲಕ ಮಕ್ಕಳಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸುವತ್ತ ಸಾಗಿ. ತಾಲೂಕಿನ ದೈಹಿಕ ಶಿಕ್ಷಕರಿಗೆ ಆಯುಷ್ ಇಲಾಖೆ 2 ದಿನಗಳ ತರಬೇತಿ ಆಯೋಜಿಸಿ ಮಕ್ಕಳ ಯೋಗ ಶಿಕ್ಷಣಕ್ಕೆ ಪೂರಕವಾಗಿದೆ. ಇಂತಹ ಶಿಬಿರಗಳು ನಡೆಯುತ್ತಿದ್ದರೆ ಯೋಗ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ತಾಲೂಕಿನ ಆಯುರ್ವೇದ ಆಸ್ಪತ್ರೆಗಳ ಬಗ್ಗೆ ಯಾವುದೇ ದೂರುಗಳಿಲ್ಲ. ಜನ ಸಾಮಾನ್ಯರು ಹೇಳುವಂತೆ ಉತ್ತಮ ಚಿಕಿತ್ಸೆ ದೊರಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆಯುಷ್ ವೈದ್ಯರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕಲಿ ಎಂದರು.

ಅದ್ಯಕ್ಷತೆ ವಹಿಸಿದ್ದ ಆಯುಷ್ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಡಾ.ಗೀತಾ ಮಾತನಾಡಿ, ಇಲಾಖೆ ಮಕ್ಕಳಿಗೆ ಯೋಗ ಕಲಿಕೆಗೆ ಪ್ರೇರಣೆಯಾಗಲು ಸರ್ಕಾರಿ ಶಾಲೆಗಳ ಸುಮಾರು 50ಕ್ಕೂ ಹೆಚ್ಚಿನ ದೈಹಿಕ ಶಿಕ್ಷಕರಿಗೆ ಹಮ್ಮಿಕೊಂಡಿರುವ 2 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಏಕಾಗ್ರತೆ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಗಳನ್ನು ಕಲಿಸಿ ಕೊಡಲಾಗುವುದು. ಕಡೂರು ತಾಲೂಕಿನಲ್ಲಿ 22 ಆಯುಷ್ ಆಸ್ಪತ್ರೆಗಳಿದ್ದು, 8 ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 48 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಪಾಲು ಕಡೂರು ತಾಲೂಕಿಗೆ ಇಲ್ಲಿನ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದು ಸಾರ್ವಜನಿಕರಿಂದ ಪ್ರಶಂಸೆ ಕೇಳಿ ಬರುತ್ತಿದೆ ಎಂದರು.

ಆಯುಷ್ ಹಿರಿಯ ವೈದ್ಯಾಧಿಕಾರಿ ಡಾ.ದೊಡ್ಡಗುಣಿ ಮಾತನಾಡಿ, ಮನೆ ಮದ್ದನ್ನು ಹೆಚ್ಚಿಗೆ ಬಳಕೆ ಮಾಡುವುದರಿಂದ ರೋಗ ಗಳನ್ನು ದೂರ ಮಾಡಲು ಸಾಧ್ಯ ಕೋವಿಡ್ ಸಂದರ್ಭದಲ್ಲಿ ಆಯುಷ್ ಇಲಾಖೆ ಪರಿಣಾಮಕಾರಿ ಚಿಕಿತ್ಸೆಯಿಂದ ನೂರಾರು ಜನರ ಜೀವ ಉಳಿಸುವ ಕಾರ್ಯಮಾಡುವ ಮೂಲಕ ಜನರ ಗಮನ ಸೆಳೆಯಿತು ಹಾಗೂ ಹೆಚ್ಚಿನ ಔಷಧಿ ಸಹ ನೀಡ ಲಾಯಿತು ಎಂದರು.

ಕಾರ್ಯಾಗಾರದಲ್ಲಿ ತರಬೇತಿಯನ್ನು ಕಡೂರಿನ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ಯೋಗ ಶಿಕ್ಷಕಿ ವಿಜಯಾ ಗಿರೀಶ್ ಮತ್ತು ಗಿರೀಶ್ ನೀಡಿದರು, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಡಾ.ಮಂಜುನಾಥ್ ಬಿಳುವಾಲ, ಡಾ. ಸೋಮಶೇಖರ್ ರಾಥೋಡ್, ಡಾ.ಹೇಮಂತ್‍ಕುಮಾರ್, ಡಾ.ಮಧು, ಡಾ.ಶ್ರೀನಿವಾಸನಾಯ್ಕ, ಡಾ.ರತ್ನಶೇಖರ್, ಡಾ.ಬಸವರಾಜ್ ತಳವಾರ, ಡಾ.ಪರುಶರಾಮ್ ದೇವರಗುಡ್ಡ, ಡಾ.ಲಕ್ಷ್ಮಣ್ ಮಾಣೆ, ಡಾ.ಪ್ರಮೀಳಾ, ಡಾ.ಅರವಿಂದ್ ,ಯುವಜನ ಸೇವಾ ಇಲಾಖೆ ಅಧಿಕಾರಿ ಶಿವಕುಮಾರ್ ಮತ್ತಿತರರು ಇದ್ದರು.

9ಕೆಕೆಡಿಯು1.ಕಡೂರು ಪಟ್ಟಣದ ಲಯನ್ಸ್ ಕ್ಲ್ ಬ್ ನಲ್ಲಿ ಜಿಲ್ಲಾ ಆಯುಷ್ ಇಲಾಖೆ ಆಯೋಜಿಸಿದ್ದ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿ ಶಿಬಿರವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಡಾ.ಗೀತಾ, ಡಾ.ದೊಡ್ಡಗುಣಿ,ಯೋಗ ಶಿಕ್ಷಕಿ ವಿಜಯಾಗಿರೀಶ್ ಮತ್ತಿತರರು ಇದ್ದರು.

Share this article