ದೀನರ ಸೇವೆಯಲ್ಲಿ ದೇವರನ್ನು ಕಾಣಿರಿ: ರಾಮಾಚಾರ್ಯ ಘಂಟಿ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಬಡವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕು. ಸಮಾಜದಲ್ಲಿನ ಉಳ್ಳವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗಬೇಕು ಎಂದು ಉತ್ತರಾದಿಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಮಾಜ ಸೇವೆಯೇ ನಿಜವಾದ ಭಗವಂತನ ಪೂಜೆ ಎಂದು ಉತ್ತರಾದಿಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ ಹೇಳಿದರು.

ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಜಯತೀರ್ಥ ವೆಲಫೇರ್, ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ವಿಪ್ರಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ದೀನರ ಸೇವೆಯಲ್ಲಿಯೇ ದೇವರನ್ನು ಕಾಣಬೇಕು. ಬಡವರಿಗೆ ಸಹಾಯ ಮಾಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕು. ಸಮಾಜದಲ್ಲಿನ ಉಳ್ಳವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗಬೇಕು. ವಿದ್ಯಾವಂತರ ಸಂಖ್ಯೆ ಬೆಳದಂತೆ ಬಡತನ ನಿರ್ಮೂಲನೆಯಾಗಲು ಸಾಧ್ಯವೆಂದು ಘಂಟಿ ಅಭಿಪ್ರಾಯಪಟ್ಟರು.

ಸಾಧಕರನ್ನು ಗುರುತಿಸಿ ತಂದೆ ಮತ್ತು ತಾಯಿ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವ ಬಾಲಕೃಷ್ಣ ಲಾತೂರಕರ ಹಾಗೂ ರವಿ ಲಾತೂರಕರ್ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

ಧಾರ್ಮಿಕವಾಗಿ ಹತ್ತಾರು ಕೃತಿ ರಚಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಹಿರಿಯ ವಿದ್ವಾಂಸ ವಸಂತ ಮಾಧವಾಚಾರ್ಯರಿಗೆ ದಿ.ಭೀಮಸೇನರಾವ ಲಾತೂರಕರ ಸ್ಮರಣಾರ್ಥ ಹಾಗೂ ವೃದ್ಧಾಶ್ರಮದಂತಹ ಸಮಾಜಮುಖಿ ಸೇವಾ ಕಾರ್ಯದಲ್ಲಿ ತಮ್ಮನ್ನು ಕಳೆದ 2 ದಶಕದಿಂದ ತೊಡಗಿಸಿಕೊಂಡಿರುವ ಸುಧಾ ಕರಲಗಿಕರಿಗೆ ಶಾಂತಾಬಾಯಿ ಲಾತೂರಕರ್ ಸ್ಮರಣಾರ್ಥ ವಿಪ್ರಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಾಂತ ನಗರ ಹನುಮಾನ ಮಂದಿರದ ಆರ್ಚಕ ಗುಂಡಾಚಾರ್ಯ ನರಬೋಳಿ, ಗೋಪ್ರೇಮಿ ಕಿಶೋರ ದೇಶಪಾಂಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಾಧಕರಿಗೆ ಗುರುತಿಸಿ ಪ್ರೋತ್ಸಾಹ ನೀಡಿದಲ್ಲಿ ಇನ್ನೂ ಹೆಚ್ಚಿನ ಸೇವೆಗೆ ಅವರನ್ನು ಅಣಿಗೊಳಿಸಿದಂತಾಗುತ್ತದೆ. ಈ ದಿಶೆಯಲ್ಲಿ ಲಾತೂರಕರ್‌ ಪರಿವಾರದವರ ಸೇವಾ ಕಾರ್ಯ ಮಹತ್ವದ್ದಾಗುತ್ತದೆ ಎಂದು ಶ್ಲಾಘಿಸಿದರು.

ಪಂ.ಪ್ರಸನ್ನದನಾಚಾರ್ಯ ಜೋಶಿ, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಭುರ್ಲಿ ಪ್ರಹ್ಲಾದ, ವ್ಯಾಸರಾಜ ಸಂತೆಕೆಲ್ಲೂರ, ಕೆಬಿ ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ನರಸಿಂಗರಾವ ಕುಲಕರ್ಣಿ, ರಾಮಾಚಾರ್‌ ಮೋಗರೆ, ಲಕ್ಷ್ಮೀನಾರಾಯಣ್ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ ಲಾತೂರಕರ, ಉಷಾ ಲಾತೂರಕರ, ಛಾಯಾ ಮುಳುರ, ಜಾನಕಿ ದೇಶಪಾಂಡೆ, ಶಾಂತಿ ದೇಸಾಯಿ, ಅನಿಲ ಕುಲಕರ್ಣಿ, ಸುರೇಶ್ ಕುಲಕರ್ಣಿ, ವಿನೂತ ಜೋಶಿ ಸೇರಿ ವಿಪ್ರ ಸಮಾಜದ ಪ್ರಮುಖರು, ಪಾರಾಯಣ ಸಂಘಗಳ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಟ್ರಸ್ಟ್‌ ಮುಖ್ಯಸ್ಥ ಬಾಲಕೃಷ್ಣ ಲಾತೂರಕರ ಸಮಾರಂಭಧ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷಿ ಲಾತೂರಕರ, ಮಾಧುರಿ ಥಿಟೆ ಪ್ರಾರ್ಥಿಸಿದರು. ಪತ್ರಕರ್ತ ಶಾಮಸುಂದರ ಕುಲಕರ್ಣಿ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ರವಿಲಾತೂರಕರ ಕಾರ್ಯಕ್ರಮ ನಿರೂಪಿಸಿದರು.

Share this article