ಕನ್ನಡಪ್ರಭ ವಾರ್ತೆ ಪಾವಗಡ
ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಇಲ್ಲಿನ ಎಸ್‌ಎಸ್‌ಕೆ ರಂಗಮಂದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬಕ್ಕೆ ಮುಂಚಿತವಾಗಿ ರೈತರಿಗೆ ಬರಪರಿಹಾರ ತಲುಪಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ ಸಹ ಸೂಚಿಸಿರುತ್ತಾರೆ. ಈ ನಿಟ್ಟಿನಲ್ಲಿ ರೈತರ ದಾಖಲಾತಿ ಪಡೆದು ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಾರಗೊಳ್ಳಬೇಕೆಂದರೆ ಇಂತಹ ಕಾರ್ಯಕ್ರಮಗಳು ನಡೆಯಬೇಕು. ತುಮಕೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ 8 ಜನತಾ ದರ್ಶನ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಪಾವಗಡ ತಾಲೂಕು ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಜನ ಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ. ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಕೇಳಿ ಪರಿಹರಿಸಬಹುದಾದಂತಹ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.ಅಧಿಕಾರಿಗಳು ಜನರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಿ ಜನರ ದೃಷ್ಟಿಯಲ್ಲಿ ಉತ್ತಮ ಅಧಿಕಾರಿಗಳಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಿವಿ ಮಾತು ಹೇಳಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಈ ಐದು ಗ್ಯಾರಂಟಿ ಯೋಜನೆಗಳು ಇನ್ನೂ ಯಾರು ಯಾರಿಗೆ ಸಿಕ್ಕಿಲ್ಲ ಅವರು ಇವತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆಧಾರ್ ಜೋಡಣೆ ಅಥವಾ ಅಕೌಂಟ್ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಅಧಿಕಾರಿಗಳು ಇಲ್ಲೇ ಇರುವುದರಿಂದ ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆಯಬೇಕು ಎಂದು ಹೇಳಿದರು.
ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ವಾರದಲ್ಲಿ ೨ ಪಂಚಾಯ್ತಿಗಳಲ್ಲಿ ಜನತಾ ದರ್ಶನ ಮಾಡುತ್ತಿದ್ದು, ಜನರ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮ ಇದಾಗಿದ್ದು, ಜನರು ಕಚೇರಿಗಳಿಗೆ ಓಡಾಡುವುದನ್ನು ತಪ್ಪಿಸಲು ಮಾನ್ಯ ಮುಖ್ಯಮಂತ್ರಿಗಳು ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಲು ಸೂಚಿಸಿದ್ದಾರೆ. ಅದರಂತೆ ಅಧಿಕಾರಿಗಳು ಬಹಳ ನಿಷ್ಠೆಯಿಂದ ಈ ಕಾರ್ಯವನ್ನು ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ವಿಶೇಷ ಭೂ ಸ್ವಾಧೀನ ಅಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿ ರಿಷಿ ಆನಂದ್, ಡಿಸಿಎಫ್ ಅನುಪಮ, ಪಾವಗಡ ತಾಲೂಕಿನ ತಹಶೀಲ್ದಾರ್ ವರದರಾಜ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್....
ಪಾವಗಡದಲ್ಲಿ ಅಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ ಎಂಬ ಅನೇಕ ದೂರುಗಳನ್ನು ಕೇಳಿದ್ದೇನೆ. ಅಧಿಕಾರಿಗಳು ನಿಗದಿತ ಸಮಯಕ್ಕೆ ಜನರಿಗೆ ಲಭ್ಯವಿದ್ದು, ಜನರು ಅಲೆದಾಡುವುದನ್ನು ತಪ್ಪಿಸಿ ಜನಮಾನಸದಲ್ಲಿ ಉಳಿಯುವಂತೆ ಕೆಲಸ ಮಾಡಬೇಕು. ಜನರ ಬಳಿ ಆಡಳಿತ ಹೋಗಬೇಕು ಎಂಬುದೇ ಜನತಾ ದರ್ಶನದ ಉದ್ದೇಶ. ಜಿಲ್ಲೆಯಲ್ಲಿ ಒಟ್ಟು 2800 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 2400 ಅರ್ಜಿಗಳಿಗೆ ಈಗಾಗಲೇ ಪರಿಹಾರ ರೂಪಿಸಲಾಗಿದೆ.
ಜಿ. ಪ್ರಭು ಜಿಲ್ಲಾ ಪಂಚಾಯತ್ ಸಿಇಒ