ಕಾಮಗಾರಿ ವಿಳಂಬಕ್ಕೆ ಆಡಳಿತ ಯಂತ್ರ ನಿಷ್ಕ್ರಿಯತೆ ಕಾರಣ: ಪ್ರಹ್ಲಾದ ಜೋಶಿ

KannadaprabhaNewsNetwork | Updated : Jan 10 2024, 02:22 PM IST

ಸಾರಾಂಶ

ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಅಧಿಕಾರಿಗಳೇ ಹೊಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಹಾನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿರುವುದಕ್ಕೆ ಆಡಳಿತ ಯಂತ್ರದ ನಿಷ್ಕ್ರೀಯತೆಯೇ ಕಾರಣ. ಅಧಿಕಾರಿಗಳು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ತರದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಡಕ್‌ ವಾರ್ನಿಂಗ್‌ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು. ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಅಧಿಕಾರಿಗಳೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದ ಸಂಚಾರ ದಟ್ಟನೆ ಕಡಿಮೆ ಮಾಡುವ ಉದ್ದೇಶದಿಂದ ಫ್ಲೈಓವರ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ವಿಳಂಬದಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಸಂಚಾರ ಸಮಸ್ಯೆ ಸರಳ ಮಾಡುವ ನಿಟ್ಟಿನಲ್ಲಿ ಜಂಕ್ಷನ್‌ ಸ್ಥಳದಲ್ಲಿ ವ್ಯವಸ್ಥಿತವಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದರು.

ಪೊಲೀಸ್‌ ಅಧಿಕಾರಿಗಳು, ಗುತ್ತಿಗೆದಾರರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಕಾಮಗಾರಿ ನಡೆಯುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಸಂಚಾರ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರಕಾರದಿಂದ ವಿವಿಧ ಇಲಾಖೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ರೀತಿಯ ಕಾರಣ ಹೇಳದೇ ವೇಗವಾಗಿ ಪೂರ್ಣಗೊಳಿಸಬೇಕು. ಈ ಕಾಮಗಾರಿಗಳ ಪ್ರಗತಿ ಯಾವ ರೀತಿ ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು 15 ದಿನಕ್ಕೊಮ್ಮೆ ಪಾಲಿಕೆ, ಹೆಸ್ಕಾಂ, ಎನ್‌ಎಚ್‌ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಎಲ್‌ ಆ್ಯಂಡ್‌ ಟಿ ಹಾಗೂ ಪೊಲೀಸ್‌ ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಮ್ಮಿಗಟ್ಟಿ, ವರೂರ, ಛಬ್ಬಿ, ಪರಸಾಪುರ ಹಾಗೂ ನೂಲ್ವಿ ಬಳಿ ನಡೆಯುತ್ತಿರುವ ಮೇಲ್ಸುತುವೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ರೈಲ್ವೆ ಇಲಾಖೆಯಿಂದ ಅಳ್ನಾವರ, ಅಣ್ಣಿಗೇರಿಯಲ್ಲಿ ನಡೆಯುತ್ತಿರುವ ಕಳೆಸೇತುವೆ ನಿರ್ಮಾಣ ಯೋಜನೆ ಡಿಪಿಆರ್‌ ಹಂತದಲ್ಲಿವೆ. ಆದಷ್ಟು ಬೇಗ ಆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಧೂಳು ಮುಕ್ತಗೊಳಿಸಿ: ಎಲ್ಲೆಡೆ ಅರ್ಧಂಬರ್ದ ಕಾಮಗಾರಿ ನಡೆದ ಪರಿಣಾಮ ಮಹಾನಗರ ಧೂಳುಮಯವಾಗಿವೆ. ಪಾಲಿಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಧೂಳು ಮುಕ್ತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಾಲಕೆ ಆಯುಕ್ತರಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಮೇಯರ್‌ ವೀಣಾ ಬಾರದ್ವಾಡ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಪೊಲೀಸ್‌ ಕಮೀಷನರ್‌ ರೇಣುಕಾ ಸುಕುಮಾರ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಕರಣ ದಾಖಲಿಸುವೆ: ನವಲೂರು ಬಳಿ ನಡೆಯುತ್ತಿರುವ ಬಿಆರ್‌ಟಿಎಸ್‌ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಬಿಆರ್‌ಟಿಎಸ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Share this article