ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ದಿ.ಕೆ.ಎಸ್.ಪುಟ್ಟಣ್ಣಯ್ಯನವರಿಗೆ ರಂಗನಮನ । ನಾಟಕಗಳ ಪ್ರದರ್ಶನ
ರೈತ ನಾಯಕ ದಿ.ಕೆ.ಎಸ್ .ಪುಟ್ಟಣ್ಣಯ್ಯ ರೈತ ಪರ ಹೋರಾಟಗಾರರು ಮಾತ್ರವಲ್ಲದೇ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರೊ. ಪ್ರತಾಪ್ ಲಿಂಗಯ್ಯ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಮಂಗಲದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಹಾಗೂ ನೀನಾಸಂ ತಿರುಗಾಟ ನಾಟಕಗಳು ವತಿಯಿಂದ ನಡೆದ ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗ ನಮನ, ನಾಟಕಗಳ ಪ್ರದರ್ಶನದಲ್ಲಿ ಅವರು ಮಾತನಾಡಿದರು.ಕೆ.ಎಸ್ .ಪುಟ್ಟಣ್ಣಯ್ಯನವರು ಶಾಸಕರಾಗಿದ್ದ ವೇಳೆ ವಿಧಾನಸಭೆ ಅಧಿವೇಶನಗಳಲ್ಲಿ ನಿರ್ಗಳವಾಗಿ ಮಾತನಾಡುವ ಮೂಲಕ ಹಲವು ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆಯುತ್ತಿದ್ದರು. ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಿದ್ದರು. ಕ್ರೀಡೆ, ನಾಟಕ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದರು.
ಈ ವೇಳೆ ಅವರು ನಾಟಕಗಳ ಬಗ್ಗೆ ಮಾತನಾಡಿ, ಸಮಾಜದ ಹಲವಾರು ಸಮಸ್ಯೆಗಳಿಗೆ ನಾಟಕದ ಮೂಲಕ ಪರಿಹಾರ ದೊರಕುತ್ತದೆ. ಸಾವಿರಕ್ಕೂ ಹೆಚ್ಚು ನಾಟಕಗಳನ್ನು ನೀನಾಸಂ ಸಂಸ್ಥೆ ನಿರ್ವಹಣೆ ಮಾಡುತ್ತಾ ಬರುತ್ತಿದೆ. ಹಲವಾರು ಕಲಾವಿದರಿಗೆ ನಿರ್ಮಾಪಕರಾಗಿ, ರಂಗಭೂಮಿ ಕಲಾವಿದರನ್ನು ನೀನಾಸಂ ಸಂಸ್ಥೆ ತಯಾರು ಮಾಡಿದೆ. ಈ ಸಂಸ್ಥೆಯಲ್ಲಿ ಅಭಿನಯಿಸಿದ ಕಲಾವಿದರು ದೊಡ್ಡ ವ್ಯಕ್ತಿಗಳಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೆ.ಎಸ್ .ಪುಟ್ಟಣ್ಣಯ್ಯ ಕಲಾವಿದರಾಗಿ, ಕ್ರೀಡಾಪಟುವಾಗಿ, ಉತ್ತಮ ಭಾಷಣಕಾರರಾಗಿದ್ದರು. ಅವರಲ್ಲಿ ಹಾಸ್ಯ ಮನೆ ಮಾತಾಗಿತು. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಟಕ ಪ್ರದರ್ಶನ ನೀಡುವವರಿಗೆ 25 ಸಾವಿರ ರು. ಪ್ರೋತ್ಸಾಹ ಧನ ಸಿಗುತ್ತಿರುವುದು ಪುಟ್ಟಣ್ಣಯ್ಯನವರ ಶ್ರಮದಿಂದ ಎಂದು ತಿಳಿಸಿದರು.
--------------
ಮಂಡ್ಯ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗ ನಮನ ಹಾಗೂ ನಾಟಕಗಳ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು.