ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಆಗಿ 34ನೇ ವಾರ್ಡ್ ಸದಸ್ಯರಾದ ಮೆಹೇಜಬಿನ್ ಹೊರ್ತಿ ಹಾಗೂ ಉಪಮೇಯರ್ ಆಗಿ 18ನೇ ವಾರ್ಡ್ ಸದಸ್ಯ ದಿನೇಶ ಹಳ್ಳಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸಚಿವ ಎಂ.ಬಿ.ಪಾಟೀಲ ಅವರ ತಂತ್ರಗಾರಿಕೆ ಫಲಿಸುವ ಮೂಲಕ ಮಹಾನಗರ ಪಾಲಿಕೆಯಲ್ಲಿ ಕೈ ದಿಗ್ವಿಜಯ ಸಾಧಿಸಿತು. ಆದರೆ, ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದರೂ ಅಧಿಕಾರ ಪಡೆಯುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಯತ್ನ ಕೈಗೂಡದೇ ಸೋಲೊಪ್ಪಿಕೊಳ್ಳಬೇಕಾಯಿತು.
ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 14 ತಿಂಗಳು ಗತಿಸಿದ್ದವು. ಆದರೆ, ಮೇಯರ್ ಮತ್ತು ಉಪಮೇಯರ್ ಚುನಾವಣೆಯನ್ನು ಜ.9ರಂದು ನಿಗದಿಪಡಿಸಲಾಗಿತ್ತು. ಹೀಗಾಗಿ ಸಹಜವಾಗಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಪಾಲಿಕೆಯಲ್ಲಿ ಬಿಜೆಪಿ ಒಟ್ಟು 35 ಸದಸ್ಯ ಬಲದ ಪೈಕಿ 17 ಸ್ಥಾನಗಳನ್ನು ತನ್ನದಾಗಿಸಿಕೊಂಡು ಸರಳವಾಗಿ ಅಧಿಕಾರ ಹಿಡಿಯಬಹುದಿತ್ತು. ಆದರೆ, ಕಾಂಗ್ರೆಸ್‌ನ ಶಕ್ತಿಪ್ರದರ್ಶನದ ಎದುರು ಸುಲಭವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.ಮೇಯರ್‌ಗೆ ಮಾತ್ರ ಪೈಪೋಟಿ:
ಒಟ್ಟು ೩೫ ಸದಸ್ಯ ಬಲದ ಮಹಾನಗರ ಪಾಲಿಕೆಗೆ ೨೦೨೨ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೧೦, ಎಐಎಂಐಎಂ ೨, ಜೆಡಿಎಸ್ ೧ ಹಾಗೂ ಪಕ್ಷೇತರರು ೫ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಸಂಖ್ಯಾಬಲದಲ್ಲಿ ಹೆಚ್ಚಿತ್ತು.
ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದು ಹೊರ ನಡೆದರು. ಕೋರಂ ಅನ್ವಯ ೧೪ ಜನರ ಸದಸ್ಯರ ಹಾಜರಾತಿ ಇದ್ದ ಪರಿಣಾಮ ಚುನಾವಣಾ ಪ್ರಕ್ರಿಯೆ ಸರಾಗವಾಗಿ ಸಾಗಿತು. ಕೈ ಎತ್ತುವ ಮೂಲಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ೨೨ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ನೀಡಿದರು. ಹೀಗಾಗಿ ಮೇಯರ್ ಆಗಿ ಮಹೇಜಬಿನ್ ಹೊರ್ತಿ ಆಯ್ಕೆಯಾದರು. ಉಪಮೇಯರ್ ಸ್ಥಾನಕ್ಕೆ ದಿನೇಶ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಕೂಡ ಅವಿರೋಧವಾಗಿ ಆಯ್ಕೆಯಾದರು.
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮುಂದೂಡುವ ವಿಷಯವಾಗಿ ನೋಟಿಸ್ ಜಾರಿಯಾಗಿದ್ದರೂ ತರಾತುರಿಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರು ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಹೈಕೋರ್ಟ್‌ನಲ್ಲೂ ಪ್ರಶ್ನೆ ಮಾಡಲಾಗಿತ್ತು:ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ, ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ ೧೪ ತಿಂಗಳಿಂದ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಈ ಮಧ್ಯೆ ಇತ್ತೀಚೆಗಷ್ಟೇ ಬಿಜೆಪಿ ಪಾಲಿಕೆ ಸದಸ್ಯರೊಬ್ಬರ ಅಕಾಲಿಕ ನಿಧನದಿಂದಾಗಿ ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದ್ದವು. ಈ ವಿಷಯವಾಗಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಮಂಗಳವಾರ ಮಾತ್ರ ಚುನಾವಣೆ ನಿಗದಿಯಂತೆ ನಡೆಯಿತು.
ಹೈಕೋರ್ಟ್‌ನಲ್ಲೂ ಪ್ರಶ್ನೆ ಮಾಡಲಾಗಿತ್ತು:ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ, ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ ೧೪ ತಿಂಗಳಿಂದ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಈ ಮಧ್ಯೆ ಇತ್ತೀಚೆಗಷ್ಟೇ ಬಿಜೆಪಿ ಪಾಲಿಕೆ ಸದಸ್ಯರೊಬ್ಬರ ಅಕಾಲಿಕ ನಿಧನದಿಂದಾಗಿ ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದ್ದವು. ಈ ವಿಷಯವಾಗಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಮಂಗಳವಾರ ಮಾತ್ರ ಚುನಾವಣೆ ನಿಗದಿಯಂತೆ ನಡೆಯಿತು.
ನಗರದ ಅಭಿವೃದ್ಧಿಗೆ ಬದ್ಧ
ನಗರದ ಅಭಿವೃದ್ಧಿಗಾಗಿ ನಾನು ಬದ್ಧ. ಸಚಿವ ಡಾ.ಎಂ.ಬಿ. ಪಾಟೀಲ ಸೇರಿದಂತೆ ಎಲ್ಲ ಹಿರಿಯ ಸಚಿವರು, ಶಾಸಕರು, ಹಿರಿಯ ಮುಖಂಡರು, ಪಾಲಿಕೆ ಸದಸ್ಯರ ಮಾರ್ಗದರ್ಶನದಿಂದ ನಗರವನ್ನು ಸುಂದರವಾಗಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಜಯಪುರ ನಗರವನ್ನು ಒಂದು ಅಭಿವೃದ್ಧಿ ಹಾಗೂ ಮಾದರಿ ನಗರವನ್ನಾಗಿಸುವ ಸಂಕಲ್ಪ ಮಾಡಿ, ಈ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುವೆ. ಸಮಸ್ತ ಕಾರ್ಯಕರ್ತರ ಬಂಧುಗಳು, ಮತದಾರರ ಆಶೀರ್ವಾದ ಫಲವಾಗಿ ಈ ದೊಡ್ಡ ಹುದ್ದೆ ದೊರಕಿದೆ.-ಮಹೇಜಬಿನ್ ಹೊರ್ತಿ, ವಿಜಯಪುರ ನಗರದ ನೂತನ ಮೇಯರ್.