ದೊಡ್ಡಬಳ್ಳಾಪುರ: ಫೆಂಗಲ್ ಚಂಡಮಾರುತದ ಪರಿಣಾಮ ದೊಡ್ಡಬಳ್ಳಾಪುರದಲ್ಲಿ ಸೋಮವಾರ ದಿನವಿಡೀ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಸುಕಿನಲ್ಲೂ ಆರಂಭಗೊಂಡ ಜಿಟಿಜಿಟಿ ಮಳೆ ದಿನಪೂರ್ತಿ ಮುಂದುವರಿದಿತ್ತು.
ಸದಾ ಕಿಕ್ಕಿರಿದು ತುಂಬಿರುತ್ತಿದ್ದ ದೊಡ್ಡಬಳ್ಳಾಪುರ-ಯಲಹಂಕ, ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗದ ಬಿಎಂಟಿಸಿ ಬಸ್ಸುಗಳು ಸಾಧಾರಣ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ಸಂಚರಿಸಿದವು. ಆದರೆ ಬೆಂಗಳೂರು-ಕಾವೇರಿ ಭವನ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಮಯಕ್ಕೆ ಬಾರದೆ ಮಳೆಯಲ್ಲೂ ಬಸ್‌ಗಾಗಿ ಕಾಯುವ ಸ್ಥಿತಿ ಇತ್ತು. ಮೊದಲೇ ಚಲನಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳ ಕಡೆ ಸುಳಿಯದ ಸಂದರ್ಭ ಇರುವಾಗ ಮಳೆ-ಛಳಿಯ ಪರಿಣಾಮ ಇಲ್ಲಿನ ಕೆಲ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಲ್ಲದೆ ಚಿತ್ರ ಪ್ರದರ್ಶನ ಸ್ಥಗಿತವಾಗಿತ್ತು. ಗುಂಡಂಗೆರೆ ವಿದ್ಯುತ್ ಕೇಂದ್ರದಲ್ಲಿ ರಿಪೇರಿ ಕಾರ್ಯದ ಹಿನ್ನೆಲೆ ತಾಲೂಕಿನ ಕೆಲ ಭಾಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿತ್ತು.
ಕೆಲ ಶಾಲೆಗಳಿಗೆ ರಜೆ:ಚಳಿ ಮಳೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಆದಾಗ್ಯೂ ಕೆಲ ಖಾಸಗಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಮುನ್ನೆಚ್ಚರಿಕೆಯಿಂದ ಕ್ರಮವಹಿಸಿ ರಜೆ ಘೋಷಿಸಿದ್ದವು. ಇಲ್ಲಿನ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಪ.ಪೂ ಹಂತದವರೆಗಿನ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು. ಆದರೆ ವಿದ್ಯಾರ್ಥಿಗಳ ಹಾಜರಾತಿ ಕ್ಷೀಣವಾಗಿತ್ತು.
ಮಳೆ, ಗಾಳಿಯ ಪರಿಣಾಮ ಸರ್ಕಾರಿ ಕಚೇರಿಗಳಲ್ಲೂ ಜನಸಂದಣಿ ಕಡಿಮೆ ಇತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ನಗರಸಭೆ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಜನ ವಿರಳವಾಗಿದ್ದರು. ಬ್ಯಾಂಕುಗಳು, ಡಿಮಾರ್ಟ್ ಸೇರಿದಂತೆ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲೂ ಗ್ರಾಹಕರ ಕೊರತೆ ಕಾಡುತ್ತಿತ್ತು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಂತುರು ಮಳೆ ಮತ್ತು ಚಳಿಯ ವಾತಾವರಣ ಮಂಗಳವಾರವೂ ಜಿಲ್ಲಾದ್ಯಂತ ಮುಂದುವರಿಯುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.
ಶೀತ, ಗಾಳಿ ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ
2ಕೆಡಿಬಿಪಿ4-
2ಕೆಡಿಬಿಪಿ5-
2ಕೆಡಿಬಿಪಿ6-
ಮಳೆ ನಡುವೆ ಬಾರದ ಬಸ್‌ಗಾಗಿ ಪ್ರಯಾಣಿಕರ ಪರಿತಾಪ.