ಬಿರುಬೇಸಿಗೆಯಲ್ಲೂ ಗದಗ ಝೂ ಪ್ರಾಣಿಗಳು ಕೂಲ್ ಕೂಲ್!

KannadaprabhaNewsNetwork |  
Published : Apr 29, 2026, 02:15 AM IST
ಝೂ ನಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ಬೇಗೆ ತಪ್ಪಿಸಲು ಸ್ಪ್ರಿಂಕ್ಲರ್ ಅಳವಡಿಸಿರುವುದು.  | Kannada Prabha

ಸಾರಾಂಶ

ಪ್ರತಿ ಬೇಸಿಗೆಯಲ್ಲಿಯೂ ಗದಗ ಝೂದಲ್ಲಿ ಈ ಸಮ್ಮರ್ ಫೀಡ್ ಎನ್ರಿಚ್‌ಮೆಂಟ್ ಕಾರ್ಯಕ್ರಮದ ಮೂಲಕ ಪ್ರಾಣಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಶಿವಕುಮಾರ ಕುಷ್ಟಗಿ

ಗದಗ: ಬೇಸಿಗೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಜಿಲ್ಲೆಯ ಉಷ್ಣಾಂಶ ಕಳೆದೊಂದು ವಾರದಲ್ಲಿ 40 ಡಿಗ್ರಿಗೆ ತಲುಪಿದ್ದು, ಬಿಸಿಲ ತಾಪ ಸಾರ್ವಜನಿಕರು ಅಷ್ಟೇ ಅಲ್ಲದೇ ಇಲ್ಲಿನ ಬಿಂಕದಕಟ್ಟಿ ಝೂನಲ್ಲಿನ ಪ್ರಾಣಿಗಳಿಗೂ ತಟ್ಟಿದ್ದು, ಪ್ರಾಣಿಗಳ ಆರೋಗ್ಯ ಹಾಗೂ ಪ್ರವಾಸಿಗರ ಸೌಕರ್ಯಕ್ಕಾಗಿ ಹಲವು ವಿಶೇಷ ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ಬೇಸಿಗೆಯಲ್ಲಿಯೂ ಗದಗ ಝೂದಲ್ಲಿ ಈ ಸಮ್ಮರ್ ಫೀಡ್ ಎನ್ರಿಚ್‌ಮೆಂಟ್ ಕಾರ್ಯಕ್ರಮದ ಮೂಲಕ ಪ್ರಾಣಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಬಿಸಿಲು ಹೆಚ್ಚಾಗಿರುವ ಹಿನ್ನೆಲೆ ಪ್ರಾಣಿಗಳಿಗೆ ತಂಪು ನೀಡುವ ಉದ್ದೇಶದಿಂದ ಹಿಮಗಡ್ಡೆ ಸೇರಿಸಿದ ನೀರಿನಲ್ಲಿ ಹಣ್ಣುಗಳು, ವಿಶೇಷ ತಂಪಿನ ಆಹಾರ ಪದಾರ್ಥಗಳು ಹಾಗೂ ಮಾಂಸಾಹಾರಿ ಪ್ರಾಣಿಗಳಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಾಣಿಗಳಿಗೆ ತಂಪು ಸಿಗುವುದರ ಜತೆಗೆ ಅವುಗಳ ಸಹಜ ಆಹಾರ ಹುಡುಕುವ ಹಾಗೂ ಬೇಟೆಯಾಡುವ ಸ್ವಭಾವಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ.

ಸ್ಪ್ರಿಂಕ್ಲರ್ ಅಳವಡಿಕೆ: ಮೃಗಾಲಯದಲ್ಲಿರುವ ಅನೇಕ ಪ್ರಾಣಿಗಳ ವಾಸಿಸುವ ಆವರಣಗಳಲ್ಲಿರುವ ನೀರಿನ ತೊಟ್ಟಿಗಳಿಗೆ ಐಸ್ ಕ್ಯೂಬ್‌ಗಳನ್ನು ಹಾಕಲಾಗಿದ್ದು, ಪ್ರಾಣಿಗಳು ಕುಡಿಯುವ ನೀರು ಕೂಡಾ ಕೊಂಚ ತಂಪಾಗಿರುತ್ತದೆ. ಇನ್ನು ಪ್ರಾಣಿಗಳಿಗೆ ಸಹಜವಾಗಿ ಮೈಮೇಲೆ ನೀರು ಬೀಳಲಿ ಎನ್ನುವ ಕಾರಣಕ್ಕಾಗಿ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದ್ದು. ಚುಕ್ಕೆ ಜಿಂಕೆ, ಒಂಟೆಹಕ್ಕಿ, ಕಪ್ಪು ಜಿಂಕೆ, ಸಾಂಬಾರ್ ಜಿಂಕೆ, ನೀಲಗಾಯ್ ಸೇರಿದಂತೆ ಹಲವು ಪ್ರಾಣಿಗಳ ಆವರಣಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳು ಕೂಡಾ ಬಿರುಬಿಸಿಲಿನಲ್ಲಿ ತಂಪು ನೀರು ಸ್ನಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಹುಲಿಗಳಿಗೆ ವಿಶೇಷ ಕ್ರಮ: ಮಾಂಸಾಹಾರಿ ದೊಡ್ಡ ಪ್ರಾಣಿಗಳಾದ ಹುಲಿ ಮತ್ತು ಸಿಂಹಗಳಿಗೆ ವಿಶೇಷ ಗಮನ ನೀಡಲಾಗಿದೆ. ಹುಲಿ ಇರುವ ಆವರಣಗಳಲ್ಲಿ ನೀರಿಗೆ ಮತ್ತು ಅದು ಆಹಾರ ತಿನ್ನುವ ಸ್ಥಳದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಾಡಿನ ವಾತಾವರಣದ ಅನುಭವ ನೀಡುವಂತೆ ರೂಪಿಸಲಾಗಿದೆ. ಹುಲಿಗಳು ನೀರಿನಲ್ಲಿ ಮುಳುಗಿ ತಮ್ಮ ಮೈಯನ್ನು ತಂಪಾಗಿಸಲು ತೊಟ್ಟಿಗಳಲ್ಲಿ ಸದಾ ತಂಪಾದ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ರೀತಿ ವಿವಿಧ ಪ್ರಾಣಿಗಳ ಬೋನುಗಳಲ್ಲಿ ಒಣಹುಲ್ಲುಗಳಿಂದ ಗುಡಿಸಲು ಮಾದರಿಗಳನ್ನು ನಿರ್ಮಿಸಲಾಗಿದ್ದು, ಮಧ್ಯಾಹ್ನದ ಬಿಸಿಲಿನ ವೇಳೆಯಲ್ಲಿ ಹುಲಿಗಳು ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಪಕ್ಷಿಗಳಿಗೂ ಆದ್ಯತೆ: ಪ್ರಾಣಿ ಸಂಗ್ರಹಾಲಯದಲ್ಲಿ ಬೋನುಗಳಲ್ಲಿರುವ ಪ್ರಾಣಿಗಳಿಗೆ ಮಾತ್ರವಲ್ಲ, ಮುಕ್ತವಾಗಿ ಸಂಚರಿಸುವ ಪಕ್ಷಿಗಳಿಗೂ ಮೃಗಾಲಯದಲ್ಲಿ ವಿಶೇಷ ಆದ್ಯತೆ ನೀಡಲಾಗಿದ್ದು, ಆವರಣದ ವಿವಿಧ ಕಡೆಗಳಲ್ಲಿ ನೀರಿನ ಪಾತ್ರೆಗಳನ್ನು ಇಡಲಾಗಿದೆ. ಇದರಿಂದ ಪಕ್ಷಿಗಳು ದಾಹ ನೀಗಿಸಿಕೊಳ್ಳಲು ಸಾಧ್ಯವಾಗಿದೆ. ಪಕ್ಷಿಗಳಿಗೂ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದ್ದು, ಅವುಗಳು ಕೂಡಾ ಬಿಸಿಲಿನ ತಾಪದಿಂದ ನೀರಿನಲ್ಲಿ ಮುಳುಗಲು ಅನುಕೂಲ ಕಲ್ಪಿಸಲಾಗಿದೆ.

ವಿಶೇಷ ವ್ಯವಸ್ಥೆ: ಬಿಸಿಲಿನ ಪ್ರಮಾಣದಲ್ಲಿ ವ್ಯಾಪಕ ಹೆಚ್ಚಳವಾಗಿದ್ದು, ಝೂದಲ್ಲಿರುವ ಪ್ರಾಣಿಗಳನ್ನು ತಂಪಾಗಿಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರೊಟ್ಟಿಗೆ ಝೂಗೆ ಆಗಮಿಸುವ ಪ್ರವಾಸಿಗರ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದ್ದು, ಮೃಗಾಲಯದ ಆವರಣದಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆಯ್ದ ಪ್ರದೇಶಗಳಲ್ಲಿ ಫಾಗರ್‌ಗಳನ್ನು ಅಳವಡಿಸಿ ತಂಪಾದ ಮಂಜಿನ ವಾತಾವರಣ ಸೃಷ್ಟಿಸಲಾಗಿದೆ ಎಂದು ಗದಗ ಡಿಸಿಎಫ್ ಸಂತೋಷಕುಮಾರ ಕೆಂಚಪ್ಪನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ಸದೃಢ: ವಿವೇಕ ಯಾವಗಲ್‌
ವಿಮಾನ ನಿಲ್ದಾಣಗಳಿಗೆ ಸಾಧಕರ ಹೆಸರಿಡಲು ಆಗ್ರಹ