ಕಡ್ಡಾಯ ಕರವಸೂಲಿಗೆ ಸಿಇಒ ಆದೇಶ
ಕರ ವಸೂಲಿಗಾಗಿ ಗ್ರಾಪಂ ಸಿಬ್ಬಂದಿ ಯಿಂದ ಒತ್ತಾಯದ ಮೂಲಕ ಕರವಸೂಲಿಮನೆ, ನಲ್ಲಿ ನೀರು ಸೇರಿದಂತೆ ಮೊದಲಾದ ಕರ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಭೀಕರ ಬರದಿಂದ ರೈತ ಸಮುದಾಯ ತತ್ತರಿಸಿ ಹೋಗಿದೆ. ಕೂಲಿ ಕಾರ್ಮಿಕರು ಖಾತ್ರಿ ಯೋಜನೆಯಲ್ಲಿಯೂ ಕೆಲಸ ಸಿಗದೆ ಗುಳೆ ಹೋಗಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಕರವಸೂಲಿಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ, ನಲ್ಲಿ ನೀರು, ಖಾಲಿ ನಿವೇಶನ ಸೇರಿದಂತೆ ಗ್ರಾಮ ಪಂಚಾಯಿತಿ ವಿಧಿಸುವ ವಿವಿಧ ಕರಗಳನ್ನು ವಸೂಲಿ ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲ, ದಂಡ ಸಮೇತ ವಸೂಲಿ ಮಾಡಲೇಬೇಕು ಎಂದು ಬಿಗಿಪಟ್ಟು ಹಿಡಿದಿರುವುದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದ ಕೆಲಸ ಬಿಟ್ಟು ಕರ ವಸೂಲಿ ಮಾಡುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ಜನರು ಬರದಿಂದ ತತ್ತರಿಸಿದ ವೇಳೆಯಲ್ಲಿ ಈ ರೀತಿಯಾಗಿ ಕರವಸೂಲಿಯ ಅಗತ್ಯವಿತ್ತೆ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.
ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ಹೋಗಿ ಕರವಸೂಲಿ ಮಾಡಲೇಬೇಕು ಎಂದು ಮೌಖಿಕವಾಗಿ ಕಟ್ಟಾಜ್ಞೆ ಇರುವುದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿ ತಮ್ಮೆಲ್ಲ ಕೆಲಸ ಬಿಟ್ಟು ಕರವಸೂಲಿ ಮಾಡುತ್ತಿದ್ದಾರೆ. ವಸೂಲಿ ಸಂದರ್ಭದಲ್ಲಿಯೂ ಮಾನವೀಯತೆ ಮರೆತು ಕಠೋರವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.ದಂಡ ಗ್ಯಾರಂಟಿ:
ನಿಗದಿತ ಅವಧಿಯೊಳಗಾಗಿ ಕರವಸೂಲಿ ಮಾಡಬೇಕು. ಇಲ್ಲದಿದ್ದರೆ ಸಾವಿರಕ್ಕೆ ₹80 ದಂಡ ಹಾಕಲಾಗುವುದು ಎಂದೆಲ್ಲಾ ಹೇಳಿ ಸಿಬ್ಬಂದಿಯಿಂದ ವಸೂಲಿ ಮಾಡಲಾಗುತ್ತಿದೆ.ಆದರೆ, ಭೀಕರ ಬರ ಇರುವುದರಿಂದ ಬೆಳೆಯೂ ಬಾರದಿರುವುದರಿಂದ ಹಾಗೂ ಕೂಲಿ ಕೆಲಸವೂ ಸಿಗದೆ ಇರುವ ಈ ಸಂದರ್ಭದಲ್ಲಿ ಕರ ಎಲ್ಲಿಂದ ಪಾವತಿ ಮಾಡುವುದು ಎಂದು ಗ್ರಾಮೀಣ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜೀವನ ನಡೆಸುವುದೇ ಕಷ್ಟವಾಗಿರುವ ಈ ವೇಳೆಯಲ್ಲಿ ಸರ್ಕಾರಕ್ಕೆ ನಮ್ಮ ಕರವೇ ಬೇಕಾಗಿತ್ತೆ ಎಂದು ಕಿಡಿಕಾರುತ್ತಿದ್ದಾರೆ.
ಆಂದೋಲನ:ಕರವಸೂಲಿ ಆಂದೋಲನವನ್ನು ಸಹ ಪ್ರಾರಂಭಿಸಲಾಗಿದೆ. ಮಾ. 22ರ ವರೆಗೂ ಕರವಸೂಲಿಯನ್ನು ಕಡ್ಡಾಯವಾಗಿ ಮಾಡಿ, ಶೇ.100ರಷ್ಟು ವಸೂಲಿ ಮಾಡುವಂತೆ ಆಂದೋಲನವನ್ನೇ ಮಾಡಲಾಗಿದೆ. ಆದರೆ, ಈಗ ಅವಧಿ ಮುಗಿದಿದ್ದರೂ ವಸೂಲಿಯಾಗದೆ ಇರುವುದರಿಂದ ಕರವಸೂಲಿಯನ್ನೂ ಮುಂದುವರೆಸಲಾಗಿದೆ.