ಕನ್ನಡಪ್ರಭ ವಾರ್ತೆ ಮದ್ದೂರುವರ್ಷದಲ್ಲಿ ಕೇವಲ 36 ಗಂಟೆಗಳ ಕಾಲ ನಿಜ ದರ್ಶನ ನೀಡುವ ತಾಲೂಕಿನ ಹೆಮ್ಮನಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಮಾ.28 ರಿಂದ ಎರಡು ದಿನಗಳ ಕಾಲ ನಡೆಯಲಿದೆ.
ಮಾ.28ರಂದು ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ರಕ್ಷಾ ಬಂಧನ, ಅಂಕುರಾರ್ಪಣ, ಧ್ವಜ ಸ್ಥಾಪನೆ, ಕಳಸರಾದನ ಹಾಗೂ ಮಹಾ ಚಂಡಿ ಹೋಮ, ಗಣ ಹೋಮ, ನವಗ್ರಹ, ಮೃತ್ಯುಂಜಯ, ನವದುರ್ಗ, ಶಾಂತಿ ಹೋಮಗಳ ಕಾರ್ಯಗಳ ನಂತರ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ.
ನಂತರ ಮಧ್ಯಾಹ್ನ 12 ಗಂಟೆಗೆ ಅಮೃತ ಮಣ್ಣಿನಿಂದ ಮುಚ್ಚಲಾಗಿರುವ ಚೌಡೇಶ್ವರಿ ಅಮ್ಮನವರ ಗರ್ಭಗುಡಿಯ ಬಾಗಿಲನ್ನು ತೆರೆಯುವ ಮೂಲಕ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ.ಸಂಜೆ 5 ಗಂಟೆಗೆ ಚೌಡೇಶ್ವರಿ ಅಮ್ಮನವರ ಬಂಡಿ ಉತ್ಸವ ಮಹಾಭಿಷೇಕ, ರಾತ್ರಿ 11 ಗಂಟೆಗೆ ಅಮ್ಮನವರ ಕರಗ ಮಹೋತ್ಸವ ಜರುಗಲಿದೆ. ಮಾ.29 ರಂದು ಶುಕ್ರವಾರ ಬೆಳಗಿನ ಜಾವ 4.30ಕ್ಕೆ ಅಗ್ನಿಕೊಂಡ ಮಹೋತ್ಸವ. ಮಧ್ಯಾಹ್ನ 12 ಗಂಟೆಗೆ ಶ್ರೀ ಚೌಡೇಶ್ವರಿ ಅಮ್ಮನವರ ದಿವ್ಯ ಮಹಾರಥೋತ್ಸವ ನೆರವೇರಲಿದೆ.
ಎರಡು ದಿನಗಳ ಕಾಲ ನಡೆಯುವ ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ವಸತಿ, ಶೌಚಾಲಯ, ಕುಡಿಯುವ ನೀರು ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಜಯಶಂಕರ್ ತಿಳಿಸಿದ್ದಾರೆ.