ಬರದ ಬಿಸಿಗೆ ಈಜುಗೊಳವೂ ಸ್ತಬ್ಧ!

KannadaprabhaNewsNetwork |  
Published : Mar 24, 2024, 01:40 AM ISTUpdated : Mar 24, 2024, 01:41 AM IST
ಈಜುಕೊಳದ ಹೊರನೋಟ | Kannada Prabha

ಸಾರಾಂಶ

ಈ ಬಾರಿಯ ತೀವ್ರ ಬರಗಾಲಕ್ಕೆ ಜಲಮೂಲಗಳೆಲ್ಲ ಬರಿದಾಗಿ ಜನ-ಜಾನುವಾರು, ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಇದರೊಟ್ಟಿಗೆ ಬೇಸಿಗೆಯಲ್ಲಿ ಈಜುಪ್ರಿಯರಿಗೆ ಹಿತಾನುಭವು ನೀಡುತ್ತಿದ್ದ ನಗರದ ಬಹುತೇಕ ಈಜುಗೊಳದಲ್ಲಿ ನೀರಿಲ್ಲದೇ ಭಣಗುಡುತ್ತಿದೆ. ಇದರಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಒಳಾಂಗಣ ಈಜುಗೊಳ ಕೂಡ ಇದೆ ಪರಿಸ್ಥಿತಿಯಲ್ಲಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಬಾರಿಯ ತೀವ್ರ ಬರಗಾಲಕ್ಕೆ ಜಲಮೂಲಗಳೆಲ್ಲ ಬರಿದಾಗಿ ಜನ-ಜಾನುವಾರು, ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಇದರೊಟ್ಟಿಗೆ ಬೇಸಿಗೆಯಲ್ಲಿ ಈಜುಪ್ರಿಯರಿಗೆ ಹಿತಾನುಭವು ನೀಡುತ್ತಿದ್ದ ನಗರದ ಬಹುತೇಕ ಈಜುಗೊಳದಲ್ಲಿ ನೀರಿಲ್ಲದೇ ಭಣಗುಡುತ್ತಿದೆ. ಇದರಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಒಳಾಂಗಣ ಈಜುಗೊಳ ಕೂಡ ಇದೆ ಪರಿಸ್ಥಿತಿಯಲ್ಲಿದೆ.

ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿರುವ ಈಜುಗೊಳಕ್ಕೆ ಪುರುಷರು, ಸ್ತ್ರೀಯರು, ಮಕ್ಕಳು ಸೇರಿದಂತೆ ಪ್ರತಿದಿನ 130 ರಿಂದ 150 ಜನ ಸ್ವಿಮ್ಮಿಂಗ್ ಮಾಡಲು ಬರುತ್ತಿದ್ದಾರೆ. ಆದರೆ ಇದೀಗ ಬೇಸಿಗೆ ಸಮಯ ಇರುವುದರಿಂದ ಈಜಾಡಲು ಬರುವವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಈಜುಗೊಳಕ್ಕೆ ಜಲಮೂಲದ ಕೊರತೆ ಎದುರಾಗಿದೆ. ಕಳೆದ ಎಂಟತ್ತು ದಿನಗಳಿಂದ ಇಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿಲ್ಲ. ಈಜುಗೊಳದಲ್ಲಿ ಇರಬೇಕಿದ್ದ ನಿಗದಿತ ಎತ್ತರ ಮಟ್ಟದಲ್ಲಿ (ಕಪ್ಪು ಬಣ್ಣದ ಟಿ ಆಕಾರದ ಗುರುತಿನ ಮೇಲೆ ನೀರು ಇರಬೇಕು) ನೀರು ಇಲ್ಲದಿರುವುದರಿಂದ ಇದ್ದಷ್ಟು ನೀರಿನಲ್ಲಿಯೇ ಈಜಾಡುವ ಸ್ಥಿತಿ ಇಲ್ಲಿನ ಜನರಿಗೆ ಬಂದಿದೆ.

ನಿಯಮಗಳ ಪಾಲನೆಗೂ ನೀರಿಲ್ಲ:

ಈಜುಗೊಳಕ್ಕೆ ಹೋಗುವ ಮೊದಲು ಪ್ರತಿಯೊಬ್ಬರು ಕಡ್ಡಾಯವಾಗಿ ಸ್ನಾನ ಮಾಡಿಕೊಂಡು ಹೋಗಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಬರುವವರಿಗೆ ಸ್ನಾನಕ್ಕೇ ನೀರಿಲ್ಲ. ಮುಖ ತೊಳೆಯಲು, ಬ್ರೆಶ್‌ ಮಾಡಲು, ಸ್ನಾನ ಮಾಡಲು, ಶೌಚಕ್ಕೆ ಹೋಗಲು ಯಾವುದಕ್ಕೂ ನೀರಿಲ್ಲ. ಈಜುಗೊಳದ ಒಳಾಂಗಣದಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ತೊಳೆದು, ಒರೆಸಿ ಸ್ವಚ್ಛವಾಗಿಡಲು ನೀರಿಲ್ಲ. ಪ್ರತಿದಿನ ನೀರು ಸ್ವಚ್ಛಗೊಳಿಸಲು ಸೆಕ್ಷನ್/ಫಿಲ್ಟರ್/ಬ್ಯಾಕ್‌ವಾಶ್ ಮಾಡಲು ನೀರಿಲ್ಲದಂತಾಗಿದೆ.

ಎಲ್ಲವೂ ಖಾಲಿ ಖಾಲಿ:

ನೀರು ಸಂಗ್ರಹಕ್ಕಾಗಿ ನೆಲದ ಅಡಿಯಲ್ಲಿರುವ ಎರಡು ದೊಡ್ಡದಾದ ಟಾಕಿಗಳು (ಸಂಪ್) ಸಂಪೂರ್ಣ ಖಾಲಿಯಾಗಿವೆ. ಸ್ನಾನಕ್ಕೆ, ಶೌಚಕ್ಕೆ ಎಂದು ಇದ್ದ 8 ಸಿಂಟೆಕ್ಸ್‌ಗಳು ಖಾಲಿ ಇವೆ. 7 ಲಕ್ಷ ಲೀ. ನೀರು ಸಂಗ್ರಹಣೆಯ ಸಾಮರ್ಥ್ಯ ಇರುವ ಈಜುಗೊಳದಲ್ಲಿ, ಟಿ ಆಕಾರದ ಗುರುತಿಗಿಂತಲೂ ಒಂದೂವರೆ ಅಡಿಯಷ್ಟು ನೀರು ಕೆಳಕ್ಕೆ ಸರಿದಿದೆ. ಪ್ರತಿದಿನ ಬರುವ 150ಕ್ಕೂ ಅಧಿಕ ಈಜುಗಾರರಿಗೆ ಬೇಕಾದಷ್ಟು ನೀರಿನ ಸೌಲಭ್ಯವಿಲ್ಲ.

ಸಾಂಕ್ರಾಮಿಕ ಕಾಯಿಲೆಗೆ ದಾರಿ:

ಈಜುಗೊಳದಲ್ಲಿನ ನೀರನ್ನು ಫಿಲ್ಟರ್ ಮಾಡಿ ಈಜುಗೊಳಕ್ಕೆ ನೀರು ಒದಗಿಸಬೇಕು. ಆದರೆ ಇಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಇದ್ದ ನೀರಿನಲ್ಲೇ ಈಜಾಡಲು ಬಿಡಲಾಗುತ್ತಿದೆ. ಪ್ರತಿಯೊಬ್ಬರೂ ಸ್ನಾನ ಮಾಡಿ ಈಜುಗೊಳಕ್ಕೆ ಹೋಗಬೇಕಿದೆ, ನೀರು ಇಲ್ಲದ್ದರಿಂದ ಹಾಗೆಯೇ ಹೋಗುತ್ತಿದ್ದಾರೆ. ಈ ರೀತಿಯಾದಾಗ ಒಬ್ಬರಿಂದ ಒಬ್ಬರಿಗೆ ಇನ್‌ಫೆಕ್ಷನ್ ಆಗಿ, ಚರ್ಮರೋಗ, ಕೂದಲಿನ ಸಮಸ್ಯೆ, ಸಾಂಕ್ರಾಮಿಕ ಕಾಯಿಲೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಈಜಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಬಂದವರೆಲ್ಲ ಫಿಲ್ಟರ್ ಮಾಡದ ನೀರಿನಲ್ಲಿ ಈಜಾಡಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

---

ಕ್ರೀಡಾ ಇಲಾಖೆಯಿಂದ ನೀರು ಸರಬರಾಜು ಮಂಡಳಿಗೆ ಪತ್ರ

ಈಜುಗೊಳದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಈಜಾಡಲು ತೊಂದರೆ ಆಗುತ್ತಿದೆ. ನೀರನ್ನು ಫಿಲ್ಟರ್ ಮಾಡಿ ನೀರು ಸಂಗ್ರಹಿಸಲು 2 ಅಥವಾ 3ದಿನಕ್ಕೊಮ್ಮೆ 1 ಲಕ್ಷ ಲೀಟರ್ ನೀರು ಅವಶ್ಯವಿದ್ದು, ನೀರು ಸರಬರಾಜು ಮಾಡುವಂತೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮಾರ್ಚ್ 11ರಂದು ಪತ್ರ ಬರೆಯಲಾಗಿದೆ.

---

ಕೋಟ್‌....

ಕಳೆದ ಎಂಟತ್ತು ದಿನಗಳಿಂದ ಇಲ್ಲಿ ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲವಾಗಿದೆ. ಈಜಾಡಲು ಸಹ ಕೊಳದಲ್ಲಿ ಇರಬೇಕಾದಷ್ಟು ಪ್ರಮಾಣದಲ್ಲಿ ನೀರು ಇಲ್ಲ. ಇದ್ದ ಗಲೀಜು ನೀರಿನಲ್ಲಿ ಈಜಾಡುವಂತಾಗಿದ್ದು, ಇದರಿಂದಾಗಿ ಒಬ್ಬರಿಂದ ಒಬ್ಬರಿಗೆ ಇನ್‌ಫೆಕ್ಷನ್ ಬರಲಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೆ ₹100 ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಸರಿಯಾದ ಸೌಲಭ್ಯ ಒದಗಿಸುತ್ತಿಲ್ಲ. ತಕ್ಷಣ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು.

-ಡಾ.ವಿರೇಂದ್ರ ಬಿರಾದಾರ, ಈಜು ಪ್ರಿಯರು

---

ಕಳೆದ 10ದಿನಗಳಿಂದ ಈಜುಗೊಳದಲ್ಲಿ ಸಮಸ್ಯೆ ಆಗಿದೆ, ಈಗಾಗಲೇ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪತ್ರ ಬರೆಯಲಾಗಿದ್ದು, ತಕ್ಕಮಟ್ಟಿಗೆ ನೀರು ಒದಗಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಒದಗಿಸುವಂತೆ ಮನವಿ ಮಾಡಲಾಗಿದೆ, ಜೊತೆಗೆ ಒಂದು ಸ್ವಂತ ಬೋರ್‌ವೆಲ್ ಕೊರೆಸುವ ಯೋಜನೆಯೂ ನಡೆದಿದೆ. ಏನಾದರೂ ವ್ಯವಸ್ಥೆ ಮಾಡಿ ಆದಷ್ಟು ಶೀಘ್ರದಲ್ಲಿ ಈಜುಗೊಳದ ನೀರಿನ ಸಮಸ್ಯೆ ಬಗೆಹರಿಸಲಾಗುವುದು.

-ಎಸ್.ಜಿ.ಲೋಣಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

---

ಇಲಾಖೆಯವರ ಮನವಿ ಮೇರೆಗೆ ಈ ಹಿಂದೆಯೂ ಒಮ್ಮೆ ಈಜುಗೊಳಕ್ಕೆ ನೀರು ಒದಗಿಸಲಾಗಿದೆ. ಅಲ್ಲದೇ ಎರಡು ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ಏರಿಯಾಗೆ ನೀರು ಬಿಟ್ಟ ಸಮಯದಲ್ಲಿ ಸ್ವಿಮ್ಮಿಂಗ್ ಫೂಲ್‌ಗೂ ನೀರು ಬರುತ್ತದೆ. ಹೆಚ್ಚಿನ ನೀರು ಬೇಕಾದಲ್ಲಿ ಬೇಸಿಗೆ ಇರುವುದರಿಂದ ಬಡಾವಣೆಗಳಲ್ಲಿ ಮೊದಲು ಕುಡಿಯುವ ನೀರಿಗೆ ಆಧ್ಯತೆ ಕೊಟ್ಟ ಬಳಿಕ, ನೀರಿನ ಪೂರೈಕೆ ನೋಡಿಕೊಂಡು ಒದಗಿಸಲಾಗುವುದು.

-ಮಹೇಶ ಹೊನ್ನಾಕಟ್ಟಿ, ಎಇಇ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ