ಡ್ಯಾಂ, ಕೆರೆಗಳಲ್ಲಿ ಹೂಳು ತುಂಬಿದ್ದರೂ ಶಾಸಕರಿಗೆ ಅರಿವಿಲ್ಲ

KannadaprabhaNewsNetwork | Updated : Dec 14 2023, 01:31 AM IST

ಸಾರಾಂಶ

ಹಲವು ಪ್ರಮುಖ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದಾರೆ. ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ತಲುಪಿಸದೇ ನಿರ್ಲಕ್ಷಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ರೂಪಿಸಲಾಗಿದೆ. ಪುರಸಭೆಯಲ್ಲಿ ಇ-ಸ್ವತ್ತು, ಪೌತಿ ಖಾತೆ ಸೌಲಭ್ಯಗಳಿಗೆ ಜನರನ್ನು ವರ್ಷಗಟ್ಟಲೆ ಅಲೆದಾಡುವ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ತಾಲೂಕಿನಾದ್ಯಂತ ಹಲವು ಕೆರೆ-ಕಟ್ಟೆಗಳು ಒತ್ತುವರಿಯಾಗಿದ್ದು, ರೈತರ ಜೀವನಾಡಿಯಾದ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಹೂಳು ವಿಪರೀತ ಸಂಗ್ರಹವಾಗಿದೆ. ಸ್ಥಳೀಯ ಸಮಸ್ಯೆ ಬಗೆಹರಿಸಬೇಕಾದ ಕ್ಷೇತ್ರದ ಶಾಸಕರು ಮಾತ್ರ ರಾಜ್ಯ,ಅಂತರ ರಾಜ್ಯಗಳ ಪ್ರವಾಸದ ಮೂಲಕ ಕ್ಷೇತ್ರದ ಜನತೆಯನ್ನು ಅಣಕವಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಟೀಕಿಸಿದರು.

ಮಂಗಳವಾರ ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಹಲವು ಕೆರೆ-ಕಟ್ಟೆಗಳು ಒತ್ತುವರಿಯಾಗಿದೆ. ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿಯೂ ಹೂಳು ತುಂಬಿದೆ. ಈ ಬಗ್ಗೆ ಕ್ಷೇತ್ರದ ಶಾಸಕರಿಗೆ ಅರಿವು ಇಲ್ಲವಾಗಿದೆ ಎಂದರು.

ಕಾಗಿನಲ್ಲಿ, ಗೊಗ್ಗ ಮತ್ತಿತರ ಕಡೆಗಳಲ್ಲಿ ಚಿರತೆ ಹಾವಳಿಯಿಂದ ಗ್ರಾಮಸ್ಥರು ಜೀವಭಯದಿಂದ ತತ್ತರಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಪಂಪ್‌ಸೆಟ್ ಸ್ವಿಚ್ ಹಾಕಲು ಸಹ ಹಿಂದೇಟು ಹಾಕುವಂತಾಗಿದೆ. ಎರೆಕೊಪ್ಪ ಗ್ರಾಮದಲ್ಲಿ 3 ಕಾಡಾನೆಗಳು ಕಾಣಿಸಿಕೊಂಡು, ಅಡಕೆ, ಬಾಳೆ ಮತ್ತಿತರ ತೋಟಗಳಿಗೆ ದಾಳಿ ಮಾಡಿವೆ. ಹಲವು ಸಮಸ್ಯೆಗಳಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಹಲವು ಪ್ರಮುಖ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದಾರೆ. ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ತಲುಪಿಸದೇ ನಿರ್ಲಕ್ಷಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ರೂಪಿಸಲಾಗಿದೆ. ಪುರಸಭೆಯಲ್ಲಿ ಇ-ಸ್ವತ್ತು, ಪೌತಿ ಖಾತೆ ಸೌಲಭ್ಯಗಳಿಗೆ ಜನರನ್ನು ವರ್ಷಗಟ್ಟಲೆ ಅಲೆದಾಡುವ ಸ್ಥಿತಿ ಇದೆ. ರಿಂಗ್ ರಸ್ತೆ ನೆಪದಲ್ಲಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಬೆಂಬಲಿಗ ಸಣ್ಣ ಹಿಡುವಳಿದಾರರ ಭೂಸ್ವಾಧೀನ ಪ್ರಕ್ರಿಯೆ ಮೂಲಕ ಕಿರುಕುಳ ನೀಡಲಾಗುತ್ತಿದೆ. ದೊಡ್ಡ ಹಿಡುವಳಿದಾರರಿಗೆ ಎಸ್‌.ಆರ್. ದರಕ್ಕಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಿ, ರಿಂಗ್ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಳ್ಳಿ ದರ್ಶನ್, ರೋಷನ್, ಜಯಶ್ರೀ, ಕಮಲಮ್ಮ, ಶಕುಂತಲಮ್ಮ, ಮುಖಂಡ ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

- - -

ಕೋಟ್‌ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶವಿದ್ದರೂ, ಆಪರೇಷನ್ ಕಮಲದ ಮೂಲಕ ಕಳ್ಳಹಾದಿಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಸಂಪೂರ್ಣ ಆಡಳಿತ ಹದಗೆಡಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಆಗಿರುವವರ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ

- ಮಹೇಶ್‌ ಹುಲ್ಮಾರ್‌, ಅಧ್ಯಕ್ಷ

- - -

-12ಕೆಎಸ್.ಕೆಪಿ3: ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಹುಲ್ಮಾರ್ ಮಾತನಾಡಿದರು. ವಿವಿಧ ಮುಖಂಡರು ಇದ್ದರು.

Share this article