ಅಜೀಜಅಹ್ಮದ ಬಳಗಾನೂರ
ಬದುಕು ಕೆಲವೊಮ್ಮೆ ವಿಧಿಯಾಟದ ಮೂಲಕ ಕನಸುಗಳನ್ನೇ ಕಸಿದುಕೊಳ್ಳುತ್ತದೆ. ಆದರೆ, ಕಳೆದುಕೊಂಡಿದ್ದನ್ನು ನೆನೆದು ಕುಸಿಯುವ ಬದಲು ಇರುವ ಸಾಮರ್ಥ್ಯವನ್ನೇ ಬಂಡವಾಳವಾಗಿಸಿಕೊಂಡರೆ ಅಸಾಧ್ಯವೂ ಸಾಧ್ಯವಾಗುತ್ತದೆ. ಇದಕ್ಕೆ ಸಾಕ್ಷಿ ತಾಲೂಕಿನ ಕುಸುಗಲ್ಲಿನ ಪ್ರೊ. ರಮೇಶ ಸಂಕರಡ್ಡಿ.
ಬಾಲ್ಯದಲ್ಲಿ ಕ್ರಿಕೆಟ್ ಆಡುವಾಗ ಕಣ್ಣಿಗೆ ಬಡಿದ ಕಾರ್ಕ್ ಬಾಲ್ ದೃಷ್ಟಿಯನ್ನೇ ಕಸಿದುಕೊಂಡರೂ ಅವರಲ್ಲಿನ ಕಲಿಯುವ ಹಂಬಲವನ್ನಾಗಲಿ, ಸಾಧಿಸುವ ಛಲವನ್ನಾಗಲಿ ಕುಂದಿಸಲಿಲ್ಲ. ಇಂದು ದೃಷ್ಟಿಹೀನತೆಯ ಸವಾಲನ್ನು ಮೆಟ್ಟಿ ನಿಂತು ರಾಜ್ಯಶಾಸ್ತ್ರದ 31 ಕೃತಿಗಳನ್ನು ರಚಿಸಿರುವ ಅವರು, ಜ್ಞಾನದ ಬೆಳಕಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.ಕಣ್ಣಿನ ಬೆಳಕು ಆರಿದರೂ ಜ್ಞಾನದ ಬೆಳಕು ಆರಬಾರದು ಎಂಬಂತೆ ಬದುಕು ಕಟ್ಟಿಕೊಂಡ ರಮೇಶ ಅವರ ಹಾದಿ ಸುಲಭದ್ದಾಗಿರಲಿಲ್ಲ. ಕುಸುಗಲ್ಲಿನ ಈ ರಮೇಶ್ 5ನೇ ತರಗತಿ ವರೆಗೆ ಸಾಮಾನ್ಯ ಮಕ್ಕಳಂತೆಯೇ ಶಾಲೆಗೆ ಹೋಗಿದ್ದರು. 1991ರಲ್ಲಿ ಕ್ರಿಕೆಟ್ ಆಡುವಾಗ ಕಾರ್ಕ್ ಬಾಲ್ ಕಣ್ಣಿಗೆ ಬಡಿದು ದೃಷ್ಟಿ ಕಳೆದುಕೊಂಡರು. ಈ ಅನಿರೀಕ್ಷಿತ ಆಘಾತದಿಂದ 5 ವರ್ಷ ಮನೆಯಲ್ಲಿಯೇ ಉಳಿಯಬೇಕಾಯಿತು. ನಂತರ ಚಿಕ್ಕಮಗಳೂರಿನ ಅಂಧ ಮಕ್ಕಳ ಶಾಲೆಗೆ ಸೇರಿ ಬ್ರೈಲ್ ಲಿಪಿ ಹಾಗೂ ಅಗತ್ಯ ವಿಶೇಷ ಕೌಶಲ್ಯ ಕಲಿತರು. 1998ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿ, ಗದಗದ ರೆಡ್ಡಿ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.
ಹುಬ್ಬಳ್ಳಿಯ ಆರೂಢ ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ದೂರಶಿಕ್ಷಣದ ಮೂಲಕ ಬಿಎ, ಎಂಎ ಹಾಗೂ ಬಿಎಡ್ ಪದವಿ ಗಳಿಸಿದರು. ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎರಡೂ ವಿಷಯಗಳಲ್ಲಿ ಕೆ-ಸೆಟ್ ಉತ್ತೀರ್ಣರಾದರು. 2001ರಿಂದ 2008ರ ವರೆಗೆ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ, ನಂತರ 2017ರ ವರೆಗೆ ಪಿಯು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 2017ರಲ್ಲಿ ಕೆಇಎ ಪರೀಕ್ಷೆಯಲ್ಲಿ ಆಯ್ಕೆಯಾಗಿ ಸಹಾಯಕ ಪ್ರಾಧ್ಯಾಪಕರಾದರು. ಸದ್ಯ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ರಾಜ್ಯಶಾಸ್ತ್ರದ ವಿವಿಧ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಒಂದೇ ಪುಸ್ತಕದಲ್ಲಿ ಸಮಗ್ರ ಮಾಹಿತಿ ದೊರೆಯಬೇಕು ಎಂಬ ಉದ್ದೇಶದಿಂದ 2021ರಲ್ಲಿ ಬರವಣಿಗೆ ಆರಂಭಿಸಿದರು. ಕೇವಲ 5 ವರ್ಷಗಳಲ್ಲಿ 31 ಕೃತಿಗಳನ್ನು ಹೊರತಂದಿದ್ದು, ಅವುಗಳಲ್ಲಿ 22 ಕೃತಿಗಳು ಪದವಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾಗಿವೆ.
ತಂತ್ರಜ್ಞಾನವೇ ಕಣ್ಣು, ಛಲವೇ ಶಕ್ತಿ:
ಕೋವಿಡ್ ಸಂದರ್ಭದಲ್ಲಿ ಸಮಯ ಸದುಪಯೋಗಪಡಿಸಿಕೊಂಡು ಪುಸ್ತಕ ರಚನೆ ಆರಂಭಿಸಿದೆ. ಸ್ಕ್ರೀನ್ ರೀಡರ್ ತಂತ್ರಜ್ಞಾನದ ನೆರವಿನಿಂದ ಸ್ವತಃ ಟೈಪ್ ಮಾಡಿ ಇದುವರೆಗೆ 31 ಕೃತಿಗಳನ್ನು ಪ್ರಕಟಿಸಿದ್ದೇನೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಧ್ಯಯನ ಸಾಮಗ್ರಿ ಒದಗಿಸುವುದೇ ನನ್ನ ಬರವಣಿಗೆಯ ಉದ್ದೇಶ.