ಹಠ ಮಾಡಿ ಟಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು ಬಿಡು: ಸಿಎಂ

KannadaprabhaNewsNetwork | Published : Jun 7, 2024 12:31 AM

ಸಾರಾಂಶ

ಏನಯ್ಯಾ ಎಲ್ಲರೂ ಸೇರಿ ಗೆಲ್ಸಿದ್ರಾ, ಏನೇ ಆಗಲಿ, ಕೊನೆಗೂ ಗೆದ್ದಿಯಲ್ಲ, ಹಠ ಮಾಡಿ ಟಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು ಬಿಡು.

ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಭೇಟಿ

ಏನಯ್ಯಾ ಎಲ್ಲರೂ ಸೇರಿ ಗೆಲ್ಸಿದ್ರಾ: ಸಿದ್ದರಾಮಯ್ಯ

ಕೊನೆಗೂ ಗೆದ್ದೆಯಲ್ಲ ಬಿಡು

ಕನ್ನಡಪ್ರಭ ವಾರ್ತೆ ಕೊಪ್ಪಳ

ಏನಯ್ಯಾ ಎಲ್ಲರೂ ಸೇರಿ ಗೆಲ್ಸಿದ್ರಾ, ಏನೇ ಆಗಲಿ, ಕೊನೆಗೂ ಗೆದ್ದಿಯಲ್ಲ, ಹಠ ಮಾಡಿ ಟಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು ಬಿಡು.

ಇದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು.

ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದ ರಾಜಶೇಖರ ಹಿಟ್ನಾಳ ಜಿಲ್ಲೆಯ ನಾಯಕರೊಂದಿಗೆ ಬೆಂಗಳೂರಿನ ಸಿಎಂ ಗೃಹಕಚೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ವೇಳೆಯಲ್ಲಿ ಈ ಮೇಲಿನಂತೆ ಹೇಳಿದರು.

ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದರಿಂದಲೇ ಗೆಲ್ಲಲು ಸಾಧ್ಯವಾಯಿತು. ಯಾರು ಕೈಕೊಟ್ಟಿಲ್ಲ ತಾನೆ ಎಂದಾಗ ಎಲ್ಲರೂ ನಗಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಿ.ಎಂ. ನಾಗರಾಜ, ಬಸನಗೌಡ ತುರ್ವಿಹಾಳ, ವಿಪ ಸದಸ್ಯ ಬಸನಗೌಡ ಬಾದರ್ಲಿ, ಮಾಜಿ ಸಂಸದ ಸಂಗಣ್ಣ ಕರಡಿ ಇದ್ದರು.

ಸಿಎಂ ಸಿದ್ದರಾಮಯ್ಯ ಬಳಿ ಕ್ಷೇತ್ರದ ಗೆಲುವಿನ ಸಂತಸ ಹಂಚಿಕೊಂಡು, ಹದಿನೈದು ವರ್ಷಗಳ ಬಳಿಕ ಕ್ಷೇತ್ರ ಮರಳಿ ಕಾಂಗ್ರೆಸ್‌ ತೆಕ್ಕೆಗೆ ಬಂದಿರುವ ಬಗ್ಗೆ ಸಿಎಂ ಗಮನಕ್ಕೆ ತರಲಾಯಿತು.

ಇದಾದ ಮೇಲೆ ಎಲ್ಲ ನಾಯಕರನ್ನೊಳಗೊಂಡ ತಂಡ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಗೆಲುವಿನ ಲೆಕ್ಕಾಚಾರ ಒಪ್ಪಿಸಿತು. ಡಿ.ಕೆ. ಶಿವಕುಮಾರ ಸಹ ಗೆಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ಆದೇಶ ಪಾಲಿಸಿದ್ದೇವೆ: ನಿಮ್ಮ ಆದೇಶದಂತೆ ಗೆಲ್ಲಿಸಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಕ್ಷೇತ್ರದ ಹಾಲಿ, ಮಾಜಿ ಶಾಸಕರು, ಪಕ್ಷದ ಅಧ್ಯಕ್ಷರು ಶಕ್ತಿಮೀರಿ ಶ್ರಮಿಸಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಗೆಲುವಿನ ವಿವರಣೆಯನ್ನು ಸಿಎಂ ಹಾಗೂ ಡಿಸಿಎಂ ಅವರಿಗೆ ನೀಡಿದರು.

Share this article