ಕಟ್ಟಡ ಪೂರ್ಣವಾಗಿ 6 ತಿಂಗಳಾದ್ರೂ ಅಂಗನವಾಡಿ ಆರಂಭವಾಗಿಲ್ಲ

KannadaprabhaNewsNetwork |  
Published : Sep 28, 2026, 01:15 AM IST
ಚಿತ್ರ 27ಬಿಡಿಆರ್54 | Kannada Prabha

ಸಾರಾಂಶ

ಅಂಗನವಾಡಿ ಕಟ್ಟಡ ಪೂರ್ಣಗೊಂಡು ಸುಮಾರು ಆರು ತಿಂಗಳು ಕಳೆದರೂ ಇದುವರೆಗೂ ಕಾರ್ಯಾರಂಭವಾಗಿಲ್ಲ. ಕಟ್ಟಡ ಬಳಕೆಗೆ ಬಾರದಿರುವುದರಿಂದ ಅಂಗನವಾಡಿ ಮಕ್ಕಳಿಗೆ ಅಗತ್ಯ ಸೌಲಭ್ಯಗಳೂ ದೊರೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕಮಲನಗರ

ಅಂಗನವಾಡಿ ಕಟ್ಟಡ ಪೂರ್ಣಗೊಂಡಿದ್ದರೂ ಮಕ್ಕಳಿಗೆ ಅದರ ಸೌಲಭ್ಯ ದೊರೆಯದಿರುವುದು ಬೇಸರದ ಸಂಗತಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಮಲನಗರ ಪಟ್ಟಣದ ಇಂದಿರಾನಗರ-1ರ ಸಮೀಪ 2023-24ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 22.50 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಪೂರ್ಣಗೊಂಡು ಸುಮಾರು ಆರು ತಿಂಗಳು ಕಳೆದರೂ ಇದುವರೆಗೂ ಕಾರ್ಯಾರಂಭವಾಗಿಲ್ಲ. ಕಟ್ಟಡ ಬಳಕೆಗೆ ಬಾರದಿರುವುದರಿಂದ ಅಂಗನವಾಡಿ ಮಕ್ಕಳಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಅಂಗನವಾಡಿ ಕಟ್ಟಡದ ಮೇಲೆ ಅಳವಡಿಸಿರುವ ನೀರಿನ ಟ್ಯಾಂಕ್ ಕಂಡು ಬರುತ್ತಿದ್ದು, ಮಕ್ಕಳಿಗೆ ನೀರು ಪೂರೈಸಲು ಮಾಡಿರುವ ನೀರಿನ ಟ್ಯಾಂಕ್ ಕಾಮಗಾರಿಯ ಮತ್ತೊಂದು ಭಾಗ ಕೆಳಗೆ ಬಿದ್ದಿರುವ ದೃಶ್ಯವೂ ಕಂಡುಬಂದಿದೆ. ಕಟ್ಟಡ ಸಿದ್ಧಗೊಂಡಿದ್ದರೂ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಕಟ್ಟಡ ಪೂರ್ಣಗೊಂಡಿದ್ದರೂ ಕೇಂದ್ರ ಆರಂಭ ವಾಗದಿರುವುದರಿಂದ ಸರ್ಕಾರದ ಉದ್ದೇಶವೇ ಈಡೇರದಂತಾಗಿದೆ. ಕಟ್ಟಡ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಅಂಗನವಾಡಿ ಆರಂಭಿಸದಿರುವುದಕ್ಕೆ ಕಾರಣವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಿ ಅಂಗನವಾಡಿ ಕೇಂದ್ರವನ್ನು ಶೀಘ್ರ ಆರಂಭಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು, ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ಇಂದಿರಾನಗರ ವಾರ್ಡ್‌ ಸಂಖ್ಯೆ ಒಂದರಲ್ಲಿ ನಡೆಯುತ್ತಿದ್ದು 6 ತಿಂಗಳಾದರೂ ಸ್ವಂತ ನೂತನ ಅಂಗನವಾಡಿ ಕೇಂದ್ರದ ಕಟ್ಟಡದಲ್ಲಿ ವರ್ಗಾವಣೆ ಮಾಡಲು ಏಕೆ ವಿಳಂಬ ಮಾಡುತ್ತಿದೆ? ಗರ್ಭಿಣಿ, ಕಿಶೋರಿ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ನೂತನ ಅಂಗನವಾಡಿ ಕೇಂದ್ರದ ಕಟ್ಟಡದಲ್ಲಿ ವರ್ಗಾವಣೆ ಮಾಡಬೇಕು ಎನ್ನುತ್ತಾರೆ ಇಂದಿರಾನಗರ ಬಡಾವಣೆ ನಿವಾಸಿ ಗಣೇಶ ಟೊಣ್ಣೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನಾ ಅಧಿಕಾರಿ ಯಶೋದಾ ಯಾದವ ಮಾತನಾಡಿ, ಈ ಅಂಗನವಾಡಿ ಬಗ್ಗೆ ಮೇಲ್ವಿಚಾರಕಿಯಾದ ವಿಜಯಲಕ್ಷ್ಮೀ ಅವರಿಗೆ ಎಇಇ ಅವರಿಂದ ಕಟ್ಟಡ ಹಸ್ತಾಂತರ ಪತ್ರ ಪಡೆದು ಆದಷ್ಟು ಬೇಗ ನೂತನ ಸ್ವಂತ ಅಂಗನ ವಾಡಿ ಕೇಂದ್ರದಲ್ಲಿಯೇ ಶಾಲೆ ನಡೆಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಯಾರದೇ ತಕರಾರು ಬಂದರೆ ಅಂತಹವರ ವಿರುದ್ಧ ಕಾನೂನಿನ ಕ್ರಮ ಸಹ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದು, ಆದಷ್ಟು ಬೇಗ ಸ್ವಂತ ಕಟ್ಟಡದಲ್ಲಿಯೇ ಶಾಲೆ ನಡೆಸುವ ಪ್ರಯತ್ನ ಮಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್