ಕನ್ನಡಪ್ರಭ ವಾರ್ತೆ ಅರಕಲಗೂಡು
ಆರೋಗ್ಯವಂತ ಸಮ ಸಮಾಜ ನಿರ್ಮಾಣ ಹೆಣ್ಣಿಗೆ ಕೊಡುವ ಅವಕಾಶಗಳಿಂದ ಮಾತ್ರ ಸಾಧ್ಯ ಎಂದು ಖ್ಯಾತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಎ.ಸಾವಿತ್ರಿ ತಿಳಿಸಿದರು.ತಾಲೂಕಿನ ರಾಮನಾಥಪುರದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳಾ ಸಾಧಕಿಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದಿಗೂ ಕೂಡ ಹೆಣ್ಣಿನ ಮೇಲಿನ ಶೋಷಣೆ ಬೇರೆ ಬೇರೆ ರೂಪದಲ್ಲಿ ನಿತ್ಯವೂ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ನಮ್ಮ ಹೆಣ್ಣುಮಕ್ಕಳು ಕೂಡ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತಿದ್ದಾರೆ. ಅಲ್ಲದೆ ಎಲ್ಲಾ ಹಂತದ ವಿದ್ಯೆಯನ್ನು ಪಡೆದವರೇ ಆಗಿದ್ದಾರೆ. ಇಷ್ಟೊಂದು ಪ್ರಬುದ್ಧತೆಯನ್ನು ಹೊಂದಿದ್ದರೂ ಕೂಡ ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಹ ಕಂಡುಬಂದಿದೆ. ಸ್ವಾತಂತ್ರ್ಯ ಭಾರತದಲ್ಲಿ ಸಮಾನವಾದ ಸಂವಿಧಾನದ ಹಕ್ಕುಗಳನ್ನು ಹೊಂದಿದ್ದೇವೆ. ಇವುಗಳನ್ನು ಬಳಕೆ ಮಾಡಿಕೊಂಡು ಎದುರಾಗುವ ಸಮಸ್ಯೆ, ಶೋಷಣೆಗಳನ್ನು ಮೆಟ್ಟಿನಿಲ್ಲಬೇಕಿದೆ ಎಂದು ಹೇಳಿದರು.ಪ್ರಮುಖವಾಗಿ ಹೆಣ್ಣಿನ ಭ್ರೂಣಹತ್ಯೆ ನಡೆಯುತ್ತಿರುವುದು ಅತೀವ ನೋವನ್ನುಂಟು ಮಾಡುತ್ತಿದೆ. ಕೆಲವೊಂದು ದಂಪತಿಗಳು ಸಹ ಪ್ಲಾನಿಂಗ್ ಮಾಡಿಕೊಂಡು ಆರಂಭದಲ್ಲಿಯೇ ಶಿಶುವನ್ನು ತೆಗೆಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಈ ಎಲ್ಲಾ ಬೆಳವಣಿಗೆ ಮುಂದುವರಿಯುತ್ತಾ ಬರುತ್ತಿದೆ. ಹೆಣ್ಣು ಮಕ್ಕಳಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಈ ಕ್ಯಾನ್ಸರ್‌ನ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡುವ ವ್ಯವಸ್ಥೆ ಸಹ ಇದೆ. ಇದನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಮುಂದಾಗಬೇಕಿದೆ. ಹೆಣ್ಣುಮಕ್ಕಳಿಗೆ ಪ್ರಮುಖವಾಗಿ ಬರುತ್ತಿರುವುದು ಸ್ತನ ಕ್ಯಾನ್ಸರ್ ಆಗಿದೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆಗೆ ಬ್ರೆಸ್ಟ್ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದರಿಂದ ಪ್ರತಿ 14 ಲಕ್ಷಕ್ಕೆ ಒಬ್ಬ ಮಹಿಳೆ ಸಾವನಪ್ಪುತಿದ್ದಾಳೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕೆಂದು ಅವರು ಸಲಹೆ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಮಹಿಳೆಯರ ಸಬಲೀಕರಣ ಕೇವಲ ವೇದಿಕೆ ಕಾರ್ಯಕ್ರಮಗಳ ಮೂಲಕ ಆಗುವುದಿಲ್ಲ, ಬದಲಾಗಿ ಪ್ರತಿ ಕ್ಷೇತ್ರಗಳಲ್ಲಿಯೂ ಸಮಾನವಾದ ಅವಕಾಶಗಳು ಸಿಕ್ಕಿದಾಗ ಮಾತ್ರ ಮಹಿಳೆಯರ ಸಬಲೀಕರಣ ಕಾಣಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಸ್ಥ ಸಮಾಜ ನಿರ್ಮಾಣ ವೇದಿಕೆಯ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಅವರು, ಸಮಿತಿ ರಚನೆಗೊಂಡಾಗಿನಿಂದಲೂ ಕೂಡ ಪರಿಸರ, ಶಿಕ್ಷಣ ಹಾಗೂ ಸಾಮಾಜಿಕ ಸಮಾನ ಅವಕಾಶಗಳು ದೊರೆಯುವ ಕುರಿತು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇವತ್ತಿನ ಕಾರ್ಯಕ್ರಮದ ವಿಶೇಷತೆಯೇ ಮಹಿಳೆಯರನ್ನು ಗೌರವಿಸುವುದು ಮತ್ತು ಕಾರ್ಯಕ್ರಮ ಕುರಿತು ಮಹಿಳೆಯರಿಂದಲೇ ತಿಳಿವಳಿಕೆ ನೀಡುವ ಕಾರ್ಯ ಇದಾಗಿದೆ. ಸಮಾಜದಲ್ಲಿ ತೊಡಗಿಕೊಂಡು ಸಮಾಜಕ್ಕೆ ತನ್ನದೇ ಆದ ರೂಪದಲ್ಲಿ ಸೇವೆ, ಕೊಡುಗೆ ನೀಡುತ್ತಿರುವ ಮಹಿಳೆಯರನ್ನು ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದು ತಿಳಿಸಿದರು.ಆರಕ್ಷಕ ಉಪ ನಿರೀಕ್ಷಕರಾದ ಕಾವ್ಯ ಅವರು ಮಾತನಾಡಿ, ಇವತ್ತಿನ ಸಮಾಜದಲ್ಲಿ ವಿದ್ಯಾವಂತ ಯುವಕರು, ಯುವತಿಯರು ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳದಿರುವುದಕ್ಕೆ ಪೋಷಕರೇ ನೇರ ಕಾರಣವಾಗಿದ್ದಾರೆ. ಮಕ್ಕಳ ಪಾಲನೆ, ಪೋಷಣೆಯನ್ನು ಪಾಠ ಹೇಳುವ ಶಿಕ್ಷಕರು, ಕೆಲಸ ಕೊಡುವ ಸಂಸ್ಥೆಗಳು ಮತ್ತು ರಕ್ಷಣೆ ಕೊಡುವ ಅಧಿಕಾರಿಗಳ ಮೇಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಮಕ್ಕಳಿಗೆ ಮೊದಲ ಪಾಠಶಾಲೆ ಮನೆ, ತಾಯಿಯೇ ಮೊದಲ ಗುರು ಎಂಬುದುವನ್ನು ಮರೆತಿರುವುದೇ ಸಮಾಜದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಘಟನಾವಳಿಗಳಿಗಳಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಬೇಕು, ಬದಲಾವಣೆಯನ್ನು ನೈತಿಕ ಶಿಕ್ಷಣದಿಂದ ಮಾತ್ರ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಪತ್ನಿ ಆಶಾರಾಣಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಕವಿತಾ ಇತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆಗೈದಿರುವ 40ಕ್ಕೂ ಹೆಚ್ಚು ಮಹಿಳೆಯರನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಮಾಡಿರುವ ಮರಿಯಾನಗರ ಶಾಲೆಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.