ಸರ್ಕಾರ ಪಾಪರ್‌ ಆದರೂ ಕೈ ಶಾಸಕರು ವಿದೇಶಕ್ಕೆ: ಅಶೋಕ್‌

KannadaprabhaNewsNetwork |  
Published : Feb 19, 2026, 02:00 AM IST
ಅಶೋಕ್‌ | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಹಣವಿಲ್ಲದೆ ಪಾಪರ್‌ ಆಗಿದೆ. ಸಿದ್ದರಾಮಯ್ಯ ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಶಾಸಕರು ಮಾತ್ರ ವಿದೇಶ ಯಾತ್ರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಸರ್ಕಾರ ಹಣವಿಲ್ಲದೆ ಪಾಪರ್‌ ಆಗಿದೆ. ಸಿದ್ದರಾಮಯ್ಯ ಪಾಪರ್‌ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಶಾಸಕರು ಮಾತ್ರ ವಿದೇಶ ಯಾತ್ರೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್‌ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಸಲಹಲು ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಸಹಯೋಗದಲ್ಲಿ ತಂದ ಯೋಜನೆಯಡಿ 26,334 ಮಕ್ಕಳಿದ್ದಾರೆ. ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಸಿಗುವ 4,000 ರು.ಗಳಿಂದ ಮಕ್ಕಳು ಊಟ ಮಾಡುತ್ತಾರೆ. ಅಂದರೆ ಒಬ್ಬರಿಗೆ 10-15 ರು. ಸಿಗುತ್ತದೆ. ಕೊಪ್ಪಳದಲ್ಲಿ 2,220, ಬಳ್ಳಾರಿಯಲ್ಲಿ 1059, ಧಾರವಾಡದಲ್ಲಿ 2650 ಮಕ್ಕಳಿದ್ದಾರೆ. ಕಾಂಗ್ರೆಸ್‌ ಶಾಸಕರಿಗೆ ಅನ್ನ ಜಾಸ್ತಿಯಾಗಿ ವಿದೇಶ ಯಾತ್ರೆ ಮಾಡುತ್ತಿದ್ದಾರೆ. ಆದರೆ ಈ ಬಡ ಮಕ್ಕಳಿಗೆ 7 ತಿಂಗಳಿಂದ ಒಟ್ಟು 75 ಕೋಟಿ ರು. ನೀಡಿಲ್ಲ. ಬಡ ಮಕ್ಕಳು ಉಪವಾಸದಿಂದ ಸಾಯುವ ಸ್ಥಿತಿ ಬಂದಿದೆ ಎಂದರು.ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರು.ಗೆ, ಅನ್ನಭಾಗ್ಯದ 750 ಕೋಟಿ ರು.ಗೆ ನಾಮ ಹಾಕಿದ್ದಾರೆ. ಈಗ ಅನಾಥ ಮಕ್ಕಳ ಹಣವನ್ನೂ ನುಂಗಿ ಹಾಕಿದ್ದಾರೆ. ಕಳೆದ ಬಜೆಟ್‌ನಲ್ಲಿ ಮೀಸಲಾದ ಹಣವನ್ನೇ ಯೋಜನೆಗಳಿಗೆ ನೀಡುತ್ತಿಲ್ಲ. ಈಗ ಹೊಸ ಬಜೆಟ್‌ ಮಾಡಲು ತಯಾರಿ ನಡೆಸಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ ಎಂದು ತಿಳಿಸಿದರು.ನಾನು ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೋ, ಲಾಭವಿತ್ತೋ ಎಂಬ ಮಾಹಿತಿ ಬಿಡುಗಡೆ ಮಾಡಲಿ. ಶಾಲಾ ಮಕ್ಕಳಿಗೆ ಬಸ್‌ ಸಿಗದೆ ಟಿಪ್ಪರ್‌ನಲ್ಲಿ ಹೋಗುತ್ತಿದ್ದಾರೆ. ಹಣ ಇಲ್ಲವಾದರೆ ಪಾಪರ್‌ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಳ್ಳಲಿ. ನೌಕರರನ್ನು ಕೆಲಸದಿಂದ ವಜಾ ಮಾಡಲಾಗುವುದೆಂದು ಎಸ್ಮಾ ಜಾರಿ ಮಾಡಲಾಗಿದೆ. ನೌಕರರು ಇದಕ್ಕೆ ಬೆಲೆ ನೀಡಿಲ್ಲ ಎಂದು ಹೇಳಿದರು.ಸಿಎಂ ಡಿಸಿಎಂ ಕಚ್ಚಾಟವನ್ನು ನಾಯಿಗಳ ಕಿತ್ತಾಟ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ಡಿ.ಕೆ.ಸುರೇಶ್‌ ಅವರು ನಿಯತ್ತಿನ ನಾಯಿಗಳು ಎಂದಿದ್ದಾರೆ. ಅಂದಮೇಲೆ ಬೀದಿ ನಾಯಿಗಳು ಯಾರು ಎಂದು ಉತ್ತರ ಕೊಡಬೇಕಿದೆ. ಕಾಂಗ್ರೆಸ್‌ನಲ್ಲಿ ಬೀದಿ ನಾಯಿ ಮತ್ತು ನಿಯತ್ತಿನ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ವಿದೇಶ ಪ್ರವಾಸ ಹೋಗಿರುವವರು ಸಿದ್ದರಾಮಯ್ಯ ಅವರ ಬೆಂಬಲಿಗರೇ ಆಗಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರ ವಿರುದ್ಧ ಹೀಗೆ ನಡೆದುಕೊಳ್ಳುತ್ತಾರೆ. ಒಪ್ಪಂದ ಆಗಿದ್ದರೆ ಎಷ್ಟು ವರ್ಷ ಒಪ್ಪಂದ ಆಗಿದೆ ಎಂದು ಸಿದ್ದರಾಮಯ್ಯ ಹೇಳಬೇಕು. ಇದು ಬೆದರಿಕೆಯ ರಾಜಕೀಯವೇ ಎಂದು ತಿಳಿಸಬೇಕು. ಪವಿತ್ರವಾದ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಹುದ್ದೆಯ ಘನತೆ ಕಾಂಗ್ರೆಸ್‌ನ ಒಳ ರಾಜಕಾರಣದಿಂದ ಮಣ್ಣುಪಾಲಾಗಿದೆ ಹಾಗೂ ನಗೆಪಾಟಲಿಗೀಡಾಗಿದೆ. ಕಾಂಗ್ರೆಸ್‌ನ ಒಳಜಗಳದಿಂದಾಗಿ ಆಡಳಿತ ಕುಸಿದಿರುವಾಗ ಯಾವ ಕಾರಣಕ್ಕಾಗಿ ಬಜೆಟ್‌ ಮಂಡನೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.

ಜಿಬಿಎ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಎಚ್ಡಿಕೆ ಜತೆ ಚರ್ಚಿಸಿದ್ದೇನೆ:ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜತೆ ಮಾತನಾಡಿದ್ದೇನೆ. ಶೀಘ್ರ ಚರ್ಚಿಸಿ ಗೊಂದಲ ಬಗೆಹರಿಸಿಕೊಳ್ಳುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಜತೆ ನಾನು ನಿನ್ನೆ ಮಾತಾಡಿದೆ. ಆದಷ್ಟು ಶೀಘ್ರ ಅವರೊಂದಿಗೆ ಚರ್ಚಿಸಿ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ‌ ನಡುವೆ ಯಾವುದೇ ದೊಡ್ಡ ಸಮಸ್ಯೆಗಳು ಇಲ್ಲ ಎಂದು ಹೇಳಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸುಲಲಿತವಾಗಿ ಜೆಡಿಎಸ್ ಜತೆ ಜಿಬಿಎ ಹೊಂದಾಣಿಕೆ ಆಗಲಿದೆ. ಹೈಕಮಾಂಡ್ ‌ತೀರ್ಮಾನ ಅಂತಿಮ. ನಮ್ಮ ನಡುವೆ ಹೊಂದಾಣಿಕೆ ಬಗ್ಗೆ ಸಮಸ್ಯೆ ಇಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಸುಬ್ಬಾರೆಡ್ಡಿ ಅನರ್ಹ: ಪ್ರಜಾಪ್ರಭುತ್ವಕ್ಕೆ ಸಂದ ಜಯ
ಮಹಿಳೆ ಮುಂದಿಟ್ಟು ಹನಿಟ್ರ್ಯಾಪ್‌ಗೆ ಮುಂದಾಗಿದ್ದ ವಕೀಲೆ ಬಂಧನ