ಕನ್ನಡಪ್ರಭ ವಾರ್ತೆ ಮಡಿಕೇರಿ/ಸುಂಟಿಕೊಪ್ಪ
ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದ್ದು, ರಣ ಬಿಸಿಲಿಗೆ ಬಸವಳಿದಿದ್ದ ಜನತೆಯಲ್ಲಿ ಹರ್ಷ ಮೂಡಿಸಿತು.ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅಸ್ಸಾಂ ಕಾರ್ಮಿಕ ಪ್ರಮಾತ್ ಗರ್ಮಾನಿ (37) ಮೃತ ವ್ಯಕ್ತಿ. ಈತ ಶುಕ್ರವಾರ ಸಂಜೆ ಮನೆಯ ಹೊರಭಾಗದಲ್ಲಿ ನಿಂತಿದ್ದ ಸಂದರ್ಭ ಸಿಡಿಲು ಬಡಿದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು ಸಂಭವಿಸಿದೆ. ಇದರೊಂದಿಗೆ ದ.ಕ. ಹಾಗೂ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಿಡಿಲಿಗೆ ಇಬ್ಬರು ಮೃತಪಟ್ಟಂತಾಗಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಸಿಲಿನ ವಾತಾವರಣ ಹೆಚ್ಚಾಗಿತ್ತು. ಇದರಿಂದ ಜನ, ಜಾನುವಾರುಗಳು ಸಂಕರ್ಷಕ್ಕೆ ಒಳಗಾಗುವಂತಾಗಿತ್ತು. ಇದೀಗ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಯಲ್ಲಿ ಮಳೆಯಾಗಿದ್ದು, ಇಳೆಯನ್ನು ತಂಪಾಗಿಸಿತು.ಸಂಜೆ 6.30 ರ ಸುಮಾರಿಗೆ ವರುಣನ ಆಗಮನವಾಯಿತು. ಸತತ ಅರ್ಧ ತಾಸುಗೂ ಅಧಿಕ ಕಾಲ ಮಳೆ ಸುರಿಯಿತು. ಗೋಣಿಕೊಪ್ಪ, ಸುಂಟಿಕೊಪ್ಪ, ವಿರಾಜಪೇಟೆ, ಮೂರ್ನಾಡು ಕುಶಾಲನಗರ, ಕೊಂಡಂಗೇರಿ, ಸಿದ್ದಾಪುರ, ಚೆಟ್ಟಳ್ಳಿ, ಹೊಸತೋಟ, ಮಾದಾಪುರ, ತಿತಿಮತಿ, ವಾಲ್ನೂರು, ಸೇರಿ ಅನೇಕ ಕಡೆ ಧಾರಾಕಾರ ಮಳೆಯಾಯಿತು.
ಬಿಸಿಲಿನಿಂದ ಬಾಡಿ ಹೋಗಿದ್ದ ಕಾಫಿ ತೋಟಕ್ಕೆ ಈ ಮೇಳೆ ಆಶವಾದವಾಗಿದೆ.ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸುಡು ಬೇಸಿಗೆ ನಡುವೆ ಸುರಿದ ಅಲ್ಪಮಳೆ ಕಂಗೆಟ್ಟಿದ ಕೃಷಿಕರ ಮುಖಗಳಲ್ಲಿ ಮಂದಹಾಸ ಅರಳಿಸಿದೆ.ಸುಂಟಿಕೊಪ್ಪ, ಕೊಡಗರಹಳ್ಳಿ, ಹೊಸಕೋಟೆ, ನಾಕೂರು ಶಿರಂಗಾಲ, ಕೆದಕಲ್ ಸುತ್ತ ಮುತ್ತ ಕೆಲ ಕಾಲ ಮಳೆಯಾಯತು.ಬಿಸಿಲ ಧಗೆಯಿಂದ ಬಸವಳಿದಿದ್ದ ಮಂದಿಗೆ ಹಾಗೂ ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗೆ ಪೂರಕವಾಗಿ ಬೇಕಾದ ಮಳೆಯ ಬಾರದ ಹಿನ್ನಲೆಯಲ್ಲಿ ಕಾಫಿ ಕರಿಮೆಣಸು ಬಳಿಗಳು ಬಿಸಿಲ ಬೇಗೆಗೆ ಒಣಗಲಾರಂಭಿಸಿದ್ದವು. ಕೃಷಿಕರನ್ನು ಆತಂಕಕ್ಕೆ ಈಡು ಮಾಡಿತ್ತು. ನೀರಿನ ಕೊರತೆಯಿಂದ ಕೃಷಿಕರು ಭಾರಿ ಸಂಕಷ್ಟ ಎದುರಿಸುವಂತಾಯಿತು.ಸುಂಟಿಕೊಪ್ಪ ಪಟ್ಟಣದಲ್ಲೂ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ.