ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ನಮಗೆ ಎಸ್ಸಿ ಮೀಸಲಾತಿ ನೀಡಿದ್ದರಿಂದ ನಾವು ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ. ಬಿಜೆಪಿಯವರು ವಿಶೇಷವಾಗಿ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಸದಾಶಿವ ಆಯೋಗದ ಹೆಸರಿನಲ್ಲಿ ಬಂಜಾರ ಸಮಾಜದ ಮೀಸಲಾತಿ ಕಸಿಯಲು ಹೊರಟಿದ್ದರು. ನಮ್ಮ ಸಮುದಾಯವನ್ನು ಅತ್ಯಂತ ಕೀಳಾಗಿ ಕಂಡಿರುವ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಹೇಳಿದರು.ನಗರದಲ್ಲಿ ನಡೆದ ಜಿಲ್ಲಾ ಬಂಜಾರ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಸ್ವಾಭಿಮಾನದ ಚುನಾವಣೆ. ನಮ್ಮ ಸಮುದಾಯದ ಮತ ಬೇಡ ಎಂದು ಹೇಳಿರುವ ಸಂಸದ ರಮೇಶ ಜಿಗಜಿಣಗಿಗೆ ಯಾಕೆ ಮತ ಹಾಕಬೇಕು? ಮುಖ್ಯಮಂತ್ರಿ ಸಿದ್ದರಾಮಯ್ಯ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೇ, ನಮ್ಮ ಸಮುದಾಯಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ನಮ್ಮ ಬಂಜಾರಾ ಸಮುದಾಯಕ್ಕೆ ಆಗಿರುವ ನೋವು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರು ಎಂದಿಗೂ ಕಾಂಗ್ರೆಸ್ ಅನ್ನು ಮರೆಯಬಾರದು. ನನ್ನ ಸಮುದಾಯದವರು ನನಗೆ ನೀಡಿದಷ್ಟೇ ಪ್ರೀತಿ, ಗೌರವವನ್ನು ಪ್ರೊ.ರಾಜು ಆಲಗೂರ ಅವರಿಗೆ ತೋರಿದರೆ ಸಮಾಜದ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಎಲ್ಲರೂ ಪ್ರೊ.ರಾಜು ಆಲಗೂರ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ ಗೆಲ್ಲಿಸೋಣ ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಬಂಜಾರ ಸಮುದಾಯ ಸ್ವಾಭಿಮಾನಿಯಾಗಿದೆ. ಕಲೆಯಲ್ಲಿ ವಿಜೃಂಭಣೆ, ಸಂಸ್ಕೃತಿಯಲ್ಲಿ ಶ್ರೀಮಂತ ನಮ್ಮ ಸಮುದಾಯದ ಪ್ರಮುಖರನ್ನು ಗುರುತಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸಮಾಜದ ಭೀಮಾ ನಾಯಕ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ರಾಮಪ್ಪ ಲಮಾಣಿ ವಿಧಾನ ಸಭೆ ಉಪಾಧ್ಯಕ್ಷರಾಗಿದ್ದಾರೆ. ಬಂಜಾರ ಅಭಿವೃದ್ಧಿ ನಿಗಮ ಅಧ್ಯಕ್ಷರ ನೇಮಕ ಬಾಕಿ ಇದ್ದು, ಅಲ್ಲಿಯೂ ಬಂಜಾರ ಸಮುದಾಯದ ವ್ಯಕ್ತಿಯೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದರು.ಜಿಲ್ಲಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಬಂಜಾರಾ ಸಮಾಜ ಮತ್ತು ಕಾಂಗ್ರೆಸ್ ಮಧ್ಯೆ ಅನೋನ್ಯ ಬಾಂಧವ್ಯವಿದೆ. ಶ್ರಮಜೀವಿಗಳಾದ ಈ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಿ ಶಿಕ್ಷಣ ಉದ್ಯೊಗದಲ್ಲಿ ಮೀಸಲಾತಿ ನೀಡಲಾಗಿದೆ. ಇದಕ್ಕೆ ಇಂದಿರಾ ಗಾಂಧಿ, ದೇವರಾಜ ಅರಸ, ಕೆ. ಟಿ. ರಾಠೋಡ, ಎಲ್. ಆರ್. ನಾಯಕ ಕಾರಣ. ಕಾಂಗ್ರೆಸ್ ಸದಾ ಬಂಜಾರಾ ಪರವಾಗಿರಲಿದೆ. ಬಂಜಾರಾ ಸಮುದಾಯ ಶ್ರಮಜೀವಿಗಳು. ಬಸವಣ್ಣನವರ ಕಾಯಕ ತತ್ವದಡಿ ನಡೆಯುತ್ತಿದ್ದಾರೆ. ಸಮುದಾಯದವರು ಸಂಸ್ಕೃತಿ ಉಳಿಸಿಕೊಂಡು ಮುಂದುವರೆದಿದ್ದಾರೆ. ದೇವರ ಮೇಲೆ ಶ್ರದ್ಧೆ, ಭಕ್ತಿ ಹೊಂದಿದ್ದು, ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಪ್ರತಿವರ್ಷ ಜಾತ್ರೆ ನಡೆಸಿ ದೇವಭಕ್ತಿ ತೊರುತ್ತಾರೆ ಎಂದರು.
ಕಾಂಗ್ರೆಸ್ ಮುಖಂಡ ಡಾ. ಬಾಬುರಾಜೇಂದ್ರ ನಾಯಕ, ಜಿ.ಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಬಂಜಾರ ಸಮುದಾಯದ ಮುಖಂಡರಾದ ಡಿ. ಎಲ್. ಚವ್ಹಾಣ, ವಾಮನ ಚವ್ಹಾಣ, ರಾಜು ಜಾಧವ, ಮಲ್ಲಿಕಾರ್ಜುನ ನಾಯಕ, ಶಂಕರ ಚವ್ಹಾಣ, ಎಂ. ಎಸ್. ನಾಯಕ, ಬಿ. ಬಿ. ಲಮಾಣಿ, ಸುರೇಶ ರಾಠೋಡ, ಶೇಖರ ನಾಯಕ, ರವಿ ಜಾಧವ, ರಾಜು ಚವ್ಹಾಣ, ಮಾಜಿ ಶಾಸಕ ಶರಣಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.