ತರೀಕೆರೆಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಗಳನ್ನು ದಾಖಲೆಯಾಗಿ ಇಡಲಾಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಬರಗೇನಹಳ್ಳಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ಉದ್ಗಾಟನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆ
ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಗಳನ್ನು ದಾಖಲೆಯಾಗಿ ಇಡಲಾಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಶನಿವಾರ ತಾಲೂಕು ಆಡಳಿತದಿಂದ ಸಮೀಪದ ಬರಗೇನಹಳ್ಳಿಯಲ್ಲಿ ನಡೆದ ಲಕ್ಕವಳ್ಳಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಆದೇಶದಂತೆ ಎಲ್ಲ ಕಡೆ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳು ಪ್ರತಿ ಬುಧವಾರ ಎಲ್ಲಾ ಅರ್ಜಿಗಳನ್ನು ಕುರಿತು ಪರಿಶೀಲಿಸಿ ಚರ್ಚಿಸುತ್ತಾರೆ ಎಂದು ಹೇಳಿದರು.
ಪ್ರಜಾಸೇವೆ ಆಂದೋಲನದಲ್ಲಿ ಹೆಚ್ಚು ಅರ್ಜಿಗಳು ಬರುತ್ತದೆ. ವೃದ್ಯಾಪ್ಯ ವೇತನಕ್ಕೆ ಸಮರ್ಪಕ ವಯಸ್ಸು ಇತ್ಯಾದಿ ದಾಖಲೆಗಳು ಸರಿಯಾಗಿದ್ದರೆ ಈ ಸಭೆಯಲ್ಲೇ ವೃದ್ಧಾಪ್ಯ ವೇತನ ನಿರ್ದರಿಸಲಾಗುತ್ತದೆ. ಪ್ರಜಾಸೇವೆ ಅಂದೋಲನ ಸಭೆ ಉಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು.
ಗುರುಪುರ ಬಾಲು ಮಾತನಾಡಿ ಸ.ನ.08ರಲ್ಲಿ 117 ಎಕರೆ ಸರ್ಕಾರಿ ಗೋಮಾಳ ಇದ್ದು ಅದು ಅರಣ್ಯ ಇಲಾಖೆಯಲ್ಲಿದ್ದು ಸುತ್ತಮುತ್ತಲ ಗ್ರಾಮದ ದನಕರುಗಳನ್ನು ಮೇಯಿಸಲು ದಾರಿಬಿಡದೆ ಇ.ಪಿ.ಟಿ.ಕಂದಕ ಮಾಡಿ ಸಿಬ್ಬಂದಿ ತಡೆ ಒಡ್ಡುತ್ತಿದ್ದಾರೆ. ಆದ್ದರಿಂದ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ದನಕರುಗಳ ಮೇಯಿಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಬರಗೇನಹಳ್ಳಿ ವಿಜಯಕುಮಾರ್ ಮಾತನಾಡಿ ಬರಗೇನಹಳ್ಳಿ ಸುತ್ತಮುತ್ತ ಗ್ರಾಮಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಇಲ್ಲದೆ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೇ ಬರಗೇನಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.
ಮುಖಂಡರಾದ ಚೇತನ್, ದಿನೇಶ್, ನಾಗರಾಜು ಗ್ರಾಮಸ್ಥರು ವಿವಿಧ ಸಮಸ್ಯೆ ಕುರಿತು ಸಭೆಯಲ್ಲಿ ಚರ್ಚಿಸಿದರು. ತಾಲೂಕು ಕೆಡಿಪಿ ಸದಸ್ಯ ಎಚ್.ಎನ್.ಮಂಜುನಾಥ್ ಲಾಡ್, ಜಿಲ್ಲಾ ಕೆಡಿಪಿ ಸದಸ್ಯ ಎ.ಜಿ.ಸಿರಾಜ್, ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ರಾಜಶೇಖರ್, ಅಪರ ಸರ್ಕಾರಿ ವಕೀಲಟಿ.ಜೆ.ಜಗದೀಶ್, ತಹಸೀಲ್ದಾರ್ ರಶ್ಮಿ ಎಚ್.ಜಿ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.14ಕೆಟಿಆರ್.ಕೆ.40ಃ ತರೀಕೆರೆ ಸಮೀಪದ ಬರಗೇನಳ್ಳಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ತಹಸೀಲ್ದಾರ್ ರಶ್ಮಿ ಎಚ್.ಜಿ.ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.