ಹಾನಗಲ್ಲ: ಕಾವಿ ತೊಟ್ಟವರನ್ನು ಪುಳಕಿತಗೊಳಿಸುವ ಹಾನಗಲ್ಲು ಧರ್ಮದ ನಡೆಯಲ್ಲಿ ಮೇರು ಸ್ಥಾನ ಹೊಂದಿದ್ದಲ್ಲದೆ, ಭಕ್ತರ ಕೈ ಹಿಡಿದು ಭವಿಷ್ಯ ರೂಪಿಸಿದ ಹಾನಗಲ್ಲ ಲಿಂ.ಕುಮಾರಶಿವಯೋಗಿಗಳು ಇಲ್ಲಿನ ಆದರ್ಶ ಎಂದು ಕೊಪ್ಪಳ ಸಂಸ್ಥಾನ ಗವಿಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಭಗವಂತನಲ್ಲಿ ವಿಶ್ವಾಸವಿಟ್ಟು ಬದುಕಬೇಕು. ಅವಧೂತರ ಸಾಧಕ ಮಾತು ಸತ್ಯವಾಗುತ್ತಿದ್ದವು. ಅವರು ಹಾಗೇ ಬದುಕಿದ್ದರು. ಭಾರತ ಆಧ್ಯಾತ್ಮದ ಪುಣ್ಯ ನೆಲ. ಶಿವನಿಗಿಂತ ದೇವಿ ಆರಾಧಕರೇ ಹೆಚ್ಚು. ನಿರ್ಮಲ ಭಾವದ ಸೇವೆಗೆ ಭಗವಂತ ಮೆಚ್ಚುತ್ತಾನೆ ಎಂದರು.
ಶ್ರೀ ಕ್ಷೇತ್ರ ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿಗಳು ಮಾತನಾಡಿ, ಜನಸೇವೆ ಜನಾರ್ಧನ ಸೇವೆ ಎಂಬುದು ಸತ್ಯದ ಆಚರಣೆ. ಹಿರಿಯರ ಅನಂತ ಪುಣ್ಯದಿಂದ ನಮ್ಮ ಬದುಕು ಸಾರ್ಥಕತೆಯತ್ತ ಸಾಗುವುದರ ಜೊತೆಗೆ, ನಾವೂ ಪುಣ್ಯವಂತರಾಗಿ ಸೇವೆ ಸಲ್ಲಿಸಬೇಕು. ದೇವಿಯ ಸ್ಮರಣೆ ಸುಖಪ್ರಾಪ್ತಿ ಮಾಡುತ್ತದೆ. ಮಹಾತ್ಮರ ಸಾಮಿಪ್ಯ ಸತ್ಪಲ ನೀಡುತ್ತದೆ ಎಂದರು.ಶಾಸಕ ಶ್ರೀನಿವಾಸ್ ಮಾನೆ ಮುಖ್ಯ ಅತಿಥಿಯಾಗಿ ಮಾತನಾಡಿ, ಭಗವಂತನ ಬಗೆಗೆ ನಮಗಿರುವ ಅಚಲ ನಂಬಿಕೆಯ ಜೊತೆಗೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ಪ್ರತಿಷ್ಠಾಪನೆಯಾಗಬೇಕು. ದೇವರ ದರ್ಶನದಲ್ಲಿನ ನಮ್ಮ ನಿರ್ಮಲ ಭಾವ ನಮಗೆ ಎಲ್ಲವನ್ನು ಕರುಣಿಸಬಲ್ಲದು. ಅದು ಸ್ವಚ್ಛಂದ ಮನಸ್ಸಿನ ನಿಸ್ವಾರ್ಥದ ಭಾವವಾಗಿರಬೇಕು ಎಂದರು.
ಸರಸ್ವತಿ ಸಂಗೀತ ವಿದ್ಯಾಲಯದ ಕಲಾವಿದರು ಪ್ರಾರ್ಥನೆ ಹಾಡಿದರು. ರಾಜು ಗೌಳು ಆಶಯ ನುಡಿ ನುಡಿದರು. ಗಣೇಶ ಮೂಡ್ಲಿಯವರ ಸ್ವಾಗತಿಸಿದರು. ಭೋಜರಾಜ ಕರೂದಿ ಕಾರ್ಯಕ್ರಮ ನಿರೂಪಿಸಿದರು.